Railway Track Stolen: ಬಿಹಾರದಲ್ಲಿ ಬರೋಬ್ಬರಿ 2 ಕಿಮೀನಷ್ಟು ರೈಲ್ವೆ ಹಳಿಯನ್ನೇ ಕದ್ದ ಖದೀಮರು!

ರೈಲ್ವೆ ಹಳಿಯನ್ನೇ ಕದ್ದ ಖದೀಮರು

ರೈಲ್ವೆ ಹಳಿಯನ್ನೇ ಕದ್ದ ಖದೀಮರು

ಬಿಹಾರದಲ್ಲಿ ಇಂತಹ ಅಪರಾಧ ಪ್ರಕರಣಗಳು ನಡೆಯೋದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ಅನೇಕ ಖತರ್ನಾಕ್ ಕೃತ್ಯಗಳು ನಡೆಯುತ್ತಿದ್ದವು, ಈಗಲೂ ನಡೆಯುತ್ತಿದೆ. ಇಷ್ಟೆಲ್ಲ ಆಗೋವಾಗಲೂ ಅಲ್ಲಿನ ಸರ್ಕಾರವಾಗಲಿ, ಪೊಲೀಸರಾಗಲಿ ಅದೇನ್ ಮಾಡ್ತಿದ್ದಾರೋ ಅವರಿಗೇ ಗೊತ್ತು.

  • News18 Kannada
  • 2-MIN READ
  • Last Updated :
  • Patna, India
  • Share this:

ಪಾಟ್ನಾ: ಬಿಹಾರ ರಾಜ್ಯದಲ್ಲಿ ಅದೆಂತಹ ಖತರ್ನಾಕ್ ಕಳ್ಳರು ಇದ್ದಾರೆ ಎಂದರೆ ಈ ಹಿಂದೆ ರೈಲಿನ ಇಂಜಿನ್ ಕದ್ದಾಗಲೇ ಗೊತ್ತಾಗಿತ್ತು. ಅದಕ್ಕೂ ಮೊದಲು ಮೊಬೈಲ್ ಟವರ್‌ನ್ನೂ ಬಿಡದ ಖದೀಮರು ಕದ್ದು ಮಾರಾಟ ಮಾಡಿದ್ದರು. ಇಷ್ಟೇ ಏಕೆ ಕಬ್ಬಿಣದ ಸೇತುವೆಯನ್ನೂ ಬಿಡದೆ ಪೀಸ್ ಪೀಸ್ ಮಾಡಿ ಗುಜರಿಗೆ ಹಾಕಿದ್ದರು. ಇದೀಗ ಒಂದು ಸ್ಟೆಪ್ ಮುಂದಕ್ಕೆ ಹೋಗಿರುವ ಕಿಡಿಗೇಡಿಗಳು ರೈಲ್ವೇ ಹಳಿಯನ್ನೇ ಕದ್ದು ಗುಜರಿಗೆ ಹಾಕಿದ್ದಾರೆ. ಅದು ಕೂಡ ಬರೋಬ್ಬರಿ ಎರಡು ಕಿಲೋ ಮೀಟರ್ ಉದ್ದದ ರೈಲ್ವೆ ಟ್ರ್ಯಾಕ್‌!


ಹೌದು.. ಬಿಹಾರದ ಸಮಸ್ತಿಪುರ್‌ ರೈಲ್ವೇ ವಿಭಾಗದಲ್ಲಿ ರೈಲ್ವೇ ಹಳಿಯನ್ನೇ ಕದ್ದು ಗುಜರಿ ಅಂಗಡಿಗೆ ಮಾರಿದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಆರ್‌ಪಿಎಫ್ ಸಿಬ್ಬಂದಿ ಸಹಾಯದಿಂದ ಕೋಟ್ಯಂಟರ ರೂಪಾಯಿ ಮೌಲ್ಯದ ರೈಲಿನ ಹಳೇ ಸಾಮಗ್ರಿಗಳನ್ನು ಗುಜರಿ ಅಂಗಡಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣದ ಸಂಬಂಧ ಇಬ್ಬರು ರೈಲ್ವೇ ರಕ್ಷಣಾ ಪಡೆಯ (ಆರ್‌ಪಿಎಫ್‌) ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಸ್ತಿಪುರ್ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಅಗರ್ವಾಲ್ ಅವರು, ಈ ಪ್ರಕರಣದ ತನಿಖೆಗೆ ಇಲಾಖಾ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಪ್ರಕರಣದ ಬಗ್ಗೆ ಇಲಾಖೆಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡದ ಹಿನ್ನೆಲೆ ಝಂಜರ್‌ಪುರ ಆರ್‌ಪಿಎಫ್ ಹೊರ ಠಾಣೆ ಉಸ್ತುವಾರಿ ಶ್ರೀನಿವಾಸ್ ಮತ್ತು ಮಧುಬನಿಯ ರೈಲ್ವೇ ವಿಭಾಗದ ಜಮಾದಾರ್ ಮುಖೇಶ್ ಕುಮಾರ್ ಸಿಂಗ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: IndiGo Airlines: ವಿಮಾನದಲ್ಲೂ ಯಡವಟ್ಟು, ಬಿಹಾರಕ್ಕೆ ಹೋಗಬೇಕಿದ್ದ ಪ್ರಯಾಣಿಕನನ್ನು ರಾಜಸ್ಥಾನಕ್ಕೆ ಕರೆದೊಯ್ದ ಇಂಡಿಗೋ!


ಹರಾಜು ಹಾಕದೆ ಮಾರಾಟ!


ಸಮಸ್ತಿಪುರ್ ರೈಲ್ವೆ ವಿಭಾಗದ ಪಾಂಡೌಲ್ ನಿಲ್ದಾಣದಿಂದ ಲೋಹತ್ ಸಕ್ಕರೆ ಕಾರ್ಖಾನೆಯವರೆಗೆ ರೈಲು ಮಾರ್ಗವನ್ನು ಹಾಕಲಾಗಿತ್ತು. ಆದರೆ ಅದನ್ನು ಅನೇಕ ವರ್ಷಗಳಿಂದ ಬಳಸದೇ ಇದ್ದರಿಂದ ಆ ಹಳಿ ಹದಗೆಟ್ಟು ಕಾರಣ ಮಾರಾಟ ಮಾಡಲಾಗಿದೆ ಎನ್ನಲಾಗಿದೆ. ಅಚ್ಚರಿಯ ವಿಷಯ ಅಂದ್ರೆ ರೈಲ್ವೇ ಹಳಿಯ ಗುಜರಿಯನ್ನು ಹರಾಜು ಮಾಡದೇ ನೇರವಾಗಿ ಗುಜರಿ ಮಾಲೀಕನಿಗೆ ಮಾರಲಾಗಿದೆ ಎಂದು ತಿಳಿದುಬಂದಿದೆ. ಈ ವಿಷಯ ಈಗ ರೈಲ್ವೇ ಇಲಾಖೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಸದ್ಯ ಈ ಪ್ರಕರಣವನ್ನು ದರ್ಬಂಗಾ ಆರ್‌ಪಿಎಫ್ ಪೋಸ್ಟ್ ಮತ್ತು ರೈಲ್ವೇ ವಿಚಕ್ಷಣಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Viral Video: ನಾನು ಕಳ್ಳರ ಸರದಾರ ಎಂದ ಬಿಹಾರ ಸಚಿವ! ಸರ್ಕಾರದಲ್ಲಿ ಇನ್ನೂ ದೊಡ್ಡ ಕಳ್ಳರಿದ್ದಾರಂತೆ


ಕಾರ್ಖಾನೆ ಬಂದ್ ಆಗಿದ್ದೇ ಪ್ಲಸ್ ಆಯ್ತು!


ಇನ್ನು ಅಚ್ಚರಿಯ ವಿಷಯ ಅಂದ್ರೆ ಬಿಹಾರದ ಸಮಸ್ತಿಪುರದಲ್ಲಿ ಪಂಡೌಲ್‌ ರೈಲ್ವೇ ನಿಲ್ದಾಣದಿಂದ ಲೋಹತ್‌ ಸಕ್ಕರೆ ಕಾರ್ಖಾನೆವರೆಗೆ ಹಾಕಿದ್ದ ಎರಡು ಕಿಲೋ ಮೀಟರ್‌ಗೂ ಹೆಚ್ಚು ಉದ್ದದ ರೈಲ್ವೇ ಹಳಿಯಲ್ಲಿ ಇದ್ದ ಕಬ್ಬಿಣದ ವಸ್ತುಗಳನ್ನು ಯಾರೋ ಅಪರಿಚಿತ ಕಳ್ಳರು ಕದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಕಳೆದ ಕೆಲ ವರ್ಷಗಳಿಂದ ಸಕ್ಕರೆ ಕಾರ್ಖಾನೆ ಬಂದ್‌ ಆಗಿದ್ದರಿಂದ ರೈಲ್ವೇ ಸಂಚಾರ ಸ್ಥಗಿತಗೊಂಡು, ರೈಲ್ವೇ ಹಳಿಯನ್ನು ಉಪಯೋಗ ಮಾಡುತ್ತಿರಲಿಲ್ಲ. ಹೀಗಾಗಿ ಇದನ್ನೇ ಚಾನ್ಸ್‌ ಎಂದು ತಿಳಿದುಕೊಂಡ ಖದೀಮರು ಆ ನಿರುಪಯುಕ್ತ ರೈಲ್ವೆ ಹಳಿಯನ್ನು ಕದ್ದು ಮಾರಾಟ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.ಬಿಹಾರದಲ್ಲೇ ಯಾಕೆ ಇಂತಹ ಕೃತ್ಯಗಳು ಸಂಭವಿಸೋದು?


ಬಿಹಾರದಲ್ಲಿ ಇಂತಹ ಅಪರಾಧ ಪ್ರಕರಣಗಳು ನಡೆಯೋದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ಅನೇಕ ಖತರ್ನಾಕ್ ಕೆಲಸಗಳು ನಡೆಯುತ್ತಿದ್ದವು, ಈಗಲೂ ನಡೆಯುತ್ತಿದೆ. ಇಷ್ಟೆಲ್ಲ ಆಗೋವಾಗಲೂ ಅಲ್ಲಿನ ಸರ್ಕಾರವಾಗಲಿ, ಪೊಲೀಸರಾಗಲಿ ಅದೇನ್ ಮಾಡ್ತಿದ್ದಾರೋ ಅವರಿಗೇ ಗೊತ್ತು. ಅಥವಾ ಇಂತಹ ಕೃತ್ಯಗಳು ಬಿಹಾರದ ಜನರಿಗೆ ಸಾಮಾನ್ಯ ಎನಿಸಿಬಿಟ್ಟಿದಿಯೋ ಏನೋ ಎಂದು ಅರ್ಥ ಮಾಡಿಕೊಂಡರೂ ತಪ್ಪೇನಿಲ್ಲ ಅನ್ಸುತ್ತೆ. ಯಾಕೆಂದರೆ ಕಳೆದ ಅನೇಕ ದಶಕಗಳಿಂದ ಬಿಹಾರ ರಾಜ್ಯದಲ್ಲಿ ಖದೀಮರು, ಧಗಾಕೋರರು, ಕ್ರಿಮಿನಲ್‌ಗಳು ದುಷ್ಕೃತ್ಯ ಮೆರೆಯುತ್ತಿದ್ದರೂ ಇಂತಹ ಪುಂಡರಿಗೆ ಕಡಿವಾಣ ಹಾಕಬೇಕು ಅನ್ನೋದು ಇಲ್ಲಿಯತನಕ ಬಿಹಾರದ ಸರ್ಕಾರಗಳಿಗೆ ಅನ್ನಿಸಿಯೇ ಇಲ್ಲ.

Published by:Avinash K
First published: