ಚೆನ್ನೈ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವೊಂದು ಭಾರತೀಯ ಸೇನೆಯ ಯೋಧನೊಬ್ಬನ ಕೊಲೆಯಲ್ಲಿ (Murder Case) ಅಂತ್ಯವಾಗಿರುವ ಘಟನೆ ತಮಿಳುನಾಡಿನ (Tamil Nadu) ಕೃಷ್ಣನಗರಿ ಜಿಲ್ಲೆಯಲ್ಲಿ ನಡೆದಿದೆ. 28 ವರ್ಷ ಪ್ರಾಯದ ಸೈನಿಕ ಪ್ರಭು (Prabhu) ಅವರು ಜಗಳದಲ್ಲಿ ಕೊಲೆಯಾಗಿರುವ ದುರ್ದೈವಿಯಾಗಿದ್ದು, 6 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಏನಿದು ಘಟನೆ?
ಇಲ್ಲಿನ ಕೃಷ್ಣಗಿರಿಯ ಸಮೀಪದ ವೇಲಂಪಟ್ಟಿಯ ಪಂಚಾಯತ್ ಕಚೇರಿ ಬಳಿ ಸೇನಾಧಿಕಾರಿ ಎಂ.ಪ್ರಭು ಅವರ ಸಹೋದರಿ ಪ್ರಿಯಾ ಕಳೆದ ಬುಧವಾರ ಸಾರ್ವಜನಿಕ ನಲ್ಲಿಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಇದನ್ನು ನಾಗೋಜನಹಳ್ಳಿ ಟೌನ್‌ನ ವಾರ್ಡ್-1ರ ಸದಸ್ಯನಾಗಿರುವ 58 ವರ್ಷದ ಡಿಎಂಕೆ ಪಾಲಿಕೆ ಸದಸ್ಯ ಆರ್.ಚಿನ್ನಸ್ವಾಮಿ ಪ್ರಶ್ನೆ ಮಾಡಿದ್ದ.
ಬಟ್ಟೆ ತೊಳೆಯುವ ವಿಚಾರದಲ್ಲಿ ಆರಂಭವಾದ ಜಗಳ!
ಈ ವೇಳೆ ಸಾರ್ವಜನಿಕ ನಲ್ಲಿಯಲ್ಲಿ ಬಟ್ಟೆ ತೊಳೆಯುವ ವಿಚಾರದಲ್ಲಿ ಸೈನಿಕನ ಕುಟುಂಬ ಹಾಗೂ ಚಿನ್ನಸ್ವಾಮಿ ನಡುವೆ ಗಲಾಟೆ ನಡೆದಿತ್ತು. ಇದರ ಬೆನ್ನಲ್ಲೇ ಸಿಟ್ಟಿಗೆದ್ದ ಚಿನ್ನಸ್ವಾಮಿ ಮತ್ತು ಆತನ 8 ಜನ ಸಹಚರರು ಸೈನಿಕ ಪ್ರಭು ಅವರ ಮನೆಗೆ ನುಗ್ಗಿದ್ದರು. ಈ ವೇಳೆ ಪ್ರಭು ಮಾತ್ರವಲ್ಲದೇ ಅವರ ಸಹೋದರ ಹಾಗೂ ಅವರ ತಂದೆ 60 ವರ್ಷದ ಕೆ ಮಧಿಯನ್ ಅವರ ಮೇಲೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದ್ದಾರೆ.
ಆಸ್ಪತ್ರೆಗೆ ದಾಖಲಾದರೂ ಪ್ರಯೋಜನವಾಗಲಿಲ್ಲ
ಫೆಬ್ರವರಿ 8 ರಂದು ಡಿಎಂಕೆ ಪಾಲಿಕೆ ಸದಸ್ಯ ಚಿನ್ನಸ್ವಾಮಿ ಹಾಗೂ ಆತನ ಸಹಚರರಿಂದ 31 ವರ್ಷದ ಸೈನಿಕ ಪ್ರಭು ಮತ್ತು ಮನೆಯವರು ಮಾರಕವಾಗಿ ಹಲ್ಲೆಗೆ ಒಳಗಾದ ಬಳಿಕ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಕರಣದಲ್ಲಿ 6 ಮಂದಿಯ ಬಂಧನ, ಇಬ್ಬರು ನಾಪತ್ತೆ
ಗಂಭೀರವಾಗಿ ಗಾಯಗೊಂಡಿದ್ದ ಪ್ರಭು ಅವರನ್ನು ಹೊಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಪ್ರಭು ಅವರ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೊಲೆ ಯತ್ನ ಕೇಸ್ ದಾಖಲು ಮಾಡಿಕೊಂಡು ಚೆನ್ನೈನ ಗ್ರೇಡ್-2 ಪೊಲೀಸ್ ಸಿ ಗುರುಸೂರ್ಯ ಮೂರ್ತಿ, 19 ವರ್ಷದ ಕಾಲೇಜು ವಿದ್ಯಾರ್ಥಿ, ಸಿ.ರಾಜಾಪಂಡಿ, ಎಂ.ಮಣಿಕಂಡನ್, ಆರ್ ಮಧಿಯನ್ ಹಾಗೂ ಕೆ.ವೆದಿಯಾಪ್ಪನ್ ಸಹಿತ ಒಟ್ಟು 6 ಮಂದಿಯನ್ನು ಬಂಧನ ಮಾಡಿದ್ದಾರೆ. ಆದರೆ ಪ್ರಮುಖ ಆರೋಪಿಗಳಾದ ಚಿನ್ನಸ್ವಾಮಿ ಹಾಗೂ ಇತರ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ.
ಎಸ್ಕೇಪ್ ಆಗಿರುವ ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು, ಚಿನ್ನಸ್ವಾಮಿ ಹಾಗೂ ಇತರ ಇಬ್ಬರು ವ್ಯಕ್ತಿಗಳ ಶೋಧಕ್ಕೆ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಮೃತ ಸೈನಿಕ ಪ್ರಭು ಅವರ ಮನೆಯಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಮನೆಗೆ ಆಧಾರವಾಗಿದ್ದ ಸೈನಿಕನನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಲ್ಲದೇ ಈ ಕೂಡಲೇ ಆರೋಪಿಗಳನ್ನು ಬಂಧಿಸಿ ತಪ್ಪಿತಸ್ಥರಿಗೆ ಸೂಕ್ತ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಕೂಡ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ