ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಿಮದಲ್ಲಿ ಸಾಗಿದ ಯೋಧರು; ವಿಡಿಯೋ ನೋಡಿ ಸಲಾಂ ಎಂದ ಪ್ರಧಾನಿ ಮೋದಿ
Indian Army Viral Video: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ ಯೋಧರು ಆಕೆಯನ್ನು ಸ್ಟ್ರೆಚರ್ನಲ್ಲಿ ಮಲಗಿಸಿಕೊಂಡು, ಹೆಗಲ ಮೇಲೆ ಹೊತ್ತು, ಹಿಮದಲ್ಲಿ ನಡೆದು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.
ನವದೆಹಲಿ (ಜ. 15): ಚಳಿ, ಮಳೆ, ಬಿಸಿಲು, ಹಿಮದಲ್ಲಿ ನಿಂತು ಗಡಿ ಕಾಯಲೂ ಸೈ, ಬಂದೂಕನ್ನೆತ್ತಿ ಹೋರಾಡಲೂ ಜೈ. ಇಷ್ಟು ಮಾತ್ರವಲ್ಲ ನಮ್ಮ ದೇಶದ ಸೈನಿಕರು ಗಡಿಭಾಗದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ಚಾಚಿರುವ, ಪ್ರಾಣ ಉಳಿಸಿರುವ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತದೆ. ಆದರೆ, ಆ ಎಲ್ಲ ಘಟನೆಗಳು ಜನರ ಗಮನಕ್ಕೆ ಬರುವುದೇ ಇಲ್ಲ.
ಇಂದು ವಿಶ್ವ ಯೋಧರ ದಿನಾಚರಣೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರ ತ್ಯಾಗ, ಸೇವಾ ಮನೋಭಾವದ ಬಗ್ಗೆ ಮೆಚ್ಚುಗೆ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, 4 ಗಂಟೆಗಳ ಕಾಲ ತುಂಬು ಗರ್ಭಿಣಿಯನ್ನು ಹೊತ್ತುಕೊಂಡು ಹಿಮದಲ್ಲಿ ನಡೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಭಾರತೀಯ ಯೋಧರ ಸಾಹಸಗಾಥೆಯನ್ನು ಕೊಂಡಾಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 2 ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ. ಈ ಹಿಮಪಾತದ ನಡುವೆ ತುಂಬು ಗರ್ಭಿಣಿ ಶಮೀಮಾ ಎಂಬ ಮಹಿಳೆ ಸಿಕ್ಕಿಹಾಕಿಕೊಂಡಿದ್ದರು. ಹಿಮಾವೃತವಾಗಿದ್ದ ಮನೆಯಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹಿಮದಿಂದ ಮುಚ್ಚಿರುವ ಗುಡ್ಡದಿಂದ ಆಕೆಯನ್ನು ಕರೆದುಕೊಂಡು ಹೋಗುವುದು ಹೇಗೆಂದು ಆಕೆಯ ಮನೆಯವರು ಯೋಚಿಸುತ್ತಿದ್ದರು. ಆಗ ಅವರ ಸಹಾಯಕ್ಕೆ ಬಂದಿದ್ದು ಭಾರತೀಯ ಯೋಧರು.
ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ ಯೋಧರು ಆಕೆಯನ್ನು ಸ್ಟ್ರೆಚರ್ನಲ್ಲಿ ಮಲಗಿಸಿಕೊಂಡು ಹಿಮದಲ್ಲಿ ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹಿಮದಲ್ಲಿ ಕಾಲು ಹುಗಿದು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಸುಮಾರು 4 ಗಂಟೆಗಳ ಕಾಲ ಹಿಮದಲ್ಲಿ ಗರ್ಭಿಣಿಯನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅದಾದ ಕೆಲವೇ ನಿಮಿಷಗಳಲ್ಲಿ ಶಮೀಮಾಗೆ ಹೆರಿಗೆಯಾಗಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ. ಆ ಗರ್ಭಿಣಿ ಮತ್ತು ಮಗುವನ್ನು ಕಾಪಾಡಲು ಒಟ್ಟು 100 ಯೋಧರು ಮತ್ತು 30 ನಾಗರಿಕರು ಕೈಜೋಡಿಸಿರುವುದು ವಿಶೇಷ.
#HumsaayaHainHum 🇮🇳🍁
During heavy snowfall, an expecting mother Mrs Shamima, required emergency hospitalisation. For 4 hours over 100 Army persons & 30 civilians walked with her on stretcher through heavy snow. Baby born in hospital, both mother & child doing fine. #VRWithU4Upic.twitter.com/BpDcXRvuUH
ಒಂದು ತಂಡವಾದ ನಂತರ ಮತ್ತೊಂದು ತಂಡದಂತೆ ಒಟ್ಟು 100 ಯೋಧರು ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಷಯವನ್ನು ಭಾರತೀಯ ಸೇನೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಗರ್ಭಿಣಿಯನ್ನು ಸೈನಿಕರು ಸಾಗಿಸುತ್ತಿರುವ ವಿಡಿಯೋವನ್ನು ಕೂಡ ಅಪ್ಲೋಡ್ ಮಾಡಿತ್ತು.
ಯೋಧರ ಕೆಲಸಕ್ಕೆ ಮೋದಿ ಸಲಾಂ:
Our Army is known for its valour and professionalism. It is also respected for its humanitarian spirit. Whenever people have needed help, our Army has risen to the occasion and done everything possible!
ಈ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, 'ನಮ್ಮ ದೇಶದ ಸೈನಿಕರು ತಮ್ಮ ವೃತ್ತಿಪರತೆ ಮತ್ತು ಸೇವಾ ಮನೋಭಾವಕ್ಕೆ ಹೆಸರಾದವರು. ಕೇವಲ ಗಡಿ ಕಾಯುವಲ್ಲಿ ಮಾತ್ರವಲ್ಲ ಮಾನವೀಯತೆ ವಿಚಾರದಲ್ಲೂ ನಮ್ಮ ಸೈನಿಕರನ್ನು ನಾವು ಗೌರವಿಸಲೇಬೇಕು. ಯಾರಿಗೆ, ಯಾವಾಗ ಸಹಾಯ ಬೇಕೆಂದರೂ ಅಲ್ಲಿಗೆ ಧಾವಿಸುವ ಸೈನಿಕರು ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ನಮ್ಮ ಸೈನಿಕರ ಈ ಕಾರ್ಯವನ್ನು ನೋಡಿ ಹೆಮ್ಮೆಯೆನಿಸುತ್ತಿದೆ. ಸೈನಿಕರ ಸಮಯಪ್ರಜ್ಞೆಯಿಂದ ಯಾವುದೇ ಸಮಸ್ಯೆಯಿಲ್ಲದೆ ಮಗುವಿಗೆ ಜನ್ಮ ನೀಡಿರುವ ಶಮೀಮಾ ಮತ್ತು ಆಕೆಯ ಮಗುವಿಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ