ಬೆಳ್ಳಗಿರುವುದೆಲ್ಲಾ ಹಾಲಲ್ಲ: ನೀವು ಕುಡಿಯುತ್ತಿರುವುದು ರಾಸಾಯನಿಕ ವಿಷ..!

zahir | news18
Updated:October 22, 2018, 6:43 PM IST
ಬೆಳ್ಳಗಿರುವುದೆಲ್ಲಾ ಹಾಲಲ್ಲ: ನೀವು ಕುಡಿಯುತ್ತಿರುವುದು ರಾಸಾಯನಿಕ ವಿಷ..!
  • Advertorial
  • Last Updated: October 22, 2018, 6:43 PM IST
  • Share this:
-ನ್ಯೂಸ್ 18 ಕನ್ನಡ

ಪ್ರತಿನಿತ್ಯ ಹಾಲು ಕುಡಿಯುವುದರಿಂದ ಆರೋಗ್ಯ ವೃದ್ದಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನಾವು ಪ್ರತಿದಿನ ಬಳಕೆ ಮಾಡುವ ಹಾಲು ಶುದ್ಧವೋ, ಇಲ್ಲ ಕಲಬೆರಕೆಯೇ ಎಂಬುದು ಮಾತ್ರ ಗೊತ್ತಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಬಳಸಿ ನಕಲಿ ಹಾಲುಗಳನ್ನು ತಯಾರಿಸಲಾಗುತ್ತದೆ. ಮೇಲ್ನೋಟಕ್ಕೆ ಶುದ್ಧ ಹಾಲಿನಂತೆ ಕಾಣುವ ಇಂತಹ ಹಾಲನ್ನು ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. 2014ರಲ್ಲಿ ಸುಪ್ರೀಂ ಕೋರ್ಟ್​ ಕಲಬೆರಕೆ ಹಾಲು ತಯಾರಕರನ್ನು ಜೈಲಿಗೆ ಕಳುಹಿಸುವಂತೆ ಆದೇಶ ಹೊರಡಿಸಿದೆ. ಆದರೂ ಇಂದಿಗೂ ಕೂಡ ಯಾವುದೇ ಕಾನೂನಿನ ಭಯವಿಲ್ಲದೆ ನಕಲಿ ಹಾಲನ್ನು ರಾಜಾರೋಷವಾಗಿ ಮಾರಲಾಗುತ್ತಿದೆ ಎಂಬುದೇ ನಗ್ನ ಸತ್ಯ. ಇದಕ್ಕೆ ಮುಖ್ಯ ಕಾರಣ ನಾವು ಪ್ರತಿದಿನ ಬಳಸುವ ಹಾಲು ನಕಲಿಯೊ ಅಥವಾ ಅಸಲಿಯೊ ಎಂಬುದು ತಿಳಿಯದಿರುವುದು.

ಹಾಲಿಗೆ ನೀರು ಬೆರಸಿ ಮಾರುವ ವಿಧಾನವೆಲ್ಲ ತುಂಬಾ ಹಳೆಯದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಡಿಟರ್ಜೆಂಟ್, ನೀರು, ಸಿಂಥೆಟಿಕ್, ಪಿಷ್ಟ ಮುಂತಾದ ವಸ್ತುಗಳನ್ನು ಸೇರಿಸಿ ನಕಲಿ ಹಾಲನ್ನು ತಯಾರಿಸಲಾಗುತ್ತದೆ. ಆದರೆ ಇಂತಹ ಹಾಲನ್ನು ನಾವು ಪರೀಕ್ಷಿಸಿಕೊಳ್ಳದೇ ಕಂಡು ಹಿಡಿಯಲಾಗುವುದಿಲ್ಲ. ಆದರೆ ಮನೆಗೆ ತರಲಾಗುವ ಒಂದೆರೆಡು ಲೀಟರ್​ ಹಾಲನ್ನು ಯಾರು ತಾನೇ ಪ್ರಯೋಗಾಲಯಕ್ಕೆ ಕೊಂಡೊಯ್ದು ಪರೀಕ್ಷಿಸುತ್ತಾರೆ. ಇದುವೇ ಇಂದು ನಕಲಿ ಹಾಲು ತಯಾರಕರಿಗೆ ವರದಾನವಾಗಿದೆ ಎಂದರೆ ತಪ್ಪಾಗಲಾರದು.

ನಮ್ಮ ದಿನಚರಿ ಒಂದು ಕಪ್ ಚಹಾದಿಂದ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನವರು ಹಾಲನ್ನು ಬಳಸಿಯೇ ಚಹಾ ಅಥವಾ ಕಾಫಿ ತಯಾರಿಸುತ್ತಾರೆ. ಇಂತದರಲ್ಲಿ ಹಾಲಿನ ಬಗೆಗಿನ ನಿರ್ಲಕ್ಷ್ಯದ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಿದೆ. ನೀವು ಬಳಸುವ ಹಾಲನ್ನು ಪರೀಕ್ಷಿಸಿಕೊಳ್ಳಿ. ಇದಕ್ಕಾಗಿ ಯಾವುದೇ ಪ್ರಯೋಗಾಲಯಕ್ಕೆ ಅಲೆದಾಡಬೇಕಿಲ್ಲ. ಮನೆಯಲ್ಲೇ ಕೂತು ಸುಲಭವಾಗಿ ನೀವು ಖರೀದಿಸಿದ ಹಾಲಿನ ಗುಣಮಟ್ಟ ಪರಿಶುದ್ಧತೆಯನ್ನು ಪರೀಕ್ಷಿಸಿಕೊಳ್ಳಬಹುದು.

ನಕಲಿ ಹಾಲನ್ನು ಹೇಗೆ ತಯಾರಿಸುತ್ತಾರೆ?
ಕಲಬೆರಕೆ ಹಾಲು ತಯಾರಿಸಲು 100 ಲೀಟರ್ ನೀರಿಗೆ 5 ಕೆ.ಜಿ ಯೂರಿಯಾವನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕ ಸೇರಿಸಿದರೆ ನೀರಿನ ಬಣ್ಣವು ಹಾಲಿನಂತೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದಾದ ಬಳಿಕ ಹಾಲಿನಂತೆ ನೊರೆ ಮೂಡಿಸಲು 250 ಗ್ರಾಂ  ನಾವು ಬಟ್ಟೆ ಹೊಗೆಯಲು ಬಳಸುವ ವಾಷಿಂಗ್ ಪೌಡರ್​ನ್ನು ಮಿಶ್ರಣ ಮಾಡುತ್ತಾರೆ. ಇದಕ್ಕೆ ರಿಫೈಂಡ್ ಎಣ್ಣೆಯನ್ನು ಬೆರೆಸಿದಾಗ ಈ ನೀರು ಹಾಲಿನಂತೆ ನಯವಾಗುತ್ತದೆ. ಇದಕ್ಕೆ ಹಾಲಿನ ವಾಸನೆಯನ್ನು ಸೃಷ್ಟಿಸಲು ಬಿಳಿ ರಾಸಾಯನಿಕ ಪೌಂಡರ್​ನ್ನು ಮಿಶ್ರಣಗೊಳಿಸುತ್ತಾರೆ. ಇಷ್ಟನ್ನು ಮಿಶ್ರಣಗೊಳಿಸಿದರೆ ಇದು ಅಸಲಿ ಹಾಲಿನ ರೂಪವನ್ನು ಪಡೆಯುತ್ತದೆ. ಹೀಗೆ ತಯಾರಿಸಿದ 40 ಲೀಟರ್​ ನಕಲಿ ಹಾಲನ್ನು 60 ಲೀಟರ್​ ಅಸಲಿ ಹಾಲಿಗೆ ಸೇರಿಸಲಾಗುತ್ತದೆ. ಇದರಿಂದ ನಿಮಗೆ ಯಾವುದೇ ರೀತಿಯ ಸಂಶಯ ಮೂಡುವುದಿಲ್ಲ.

ಪತ್ತೆ ಹಚ್ಚುವುದು ಹೇಗೆ?ಇಲ್ಲಿ ಶುದ್ಧ ಹಾಲಿಗೆ ನಕಲಿ ಹಾಲನ್ನು ಬೆರೆಸುವುದರಿಂದ ಮೇಲ್ನೋಟಕ್ಕೆ ಶುದ್ದ ಹಾಲು ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ನೀವು ಖರೀದಿಸಿದ ಹಾಲನ್ನು ಕೆಲ ಸುಲಭ ವಿಧಾನಗಳ ಮೂಲಕ ಮನೆಯಲ್ಲೇ ಪತ್ತೆ ಹಚ್ಚಬಹುದು. ಇದಕ್ಕಾಗಿ ಯಾವುದೇ ಪ್ರಯೋಗಾಲಯದ ಅವಶ್ಯಕತೆ ಮತ್ತು ಹೆಚ್ಚಿನ ಖರ್ಚು ಮಾಡಬೇಕಾಗಿಲ್ಲ. ನೀವು ಹಾಲಿನ ಪರಿಶುದ್ಧತೆಯನ್ನು ಪರೀಕ್ಷಿಸಿಕೊಳ್ಳಲು ಮಾಡಬೇಕಿರುವುದು ಇಷ್ಟೇ..

ಹಳೆಯ ವಿಧಾನ
ಹಾಲಿನ ಶುದ್ಧತೆಯನ್ನು ಪರೀಕ್ಷಿಸಲು ಈ ಹಿಂದಿನ ಕಾಲದಲ್ಲಿ ಮೃದುವಾದ ಮೇಲ್ಮೈಯಲ್ಲಿ ಹಾಲಿನ ಕೆಲ ಹನಿಗಳನ್ನು ಹಾಕುತ್ತಿದ್ದರು. ಈ ಹಾಲಿನ ಹನಿಗಳನ್ನು ಹಾಕಿದ ಜಾಗದಲ್ಲಿ ಬಿಳಿಯ ಗುರುತುಗಳು ಕಂಡು ಬಂದರೆ ಅದು ಶುದ್ಧ ಹಾಲು, ಕಲೆ ಮೂಡಿಸದಿದ್ದರೆ ಅದನ್ನು ಕಲಬೆರಕೆ ಹಾಲು ಎಂದು ಪರಿಗಣಿಸಲಾಗುತ್ತಿತ್ತು.

ಸ್ಟಾರ್ಚ್ (ಪಿಷ್ಟ): ಹಾಲಿನಲ್ಲಿರುವ ಸ್ಟಾರ್ಚ್​ ಪತ್ತೆ ಮಾಡಲು ನೀವು ಅಯೋಡಿನ್ ಹನಿಗಳನ್ನು ಹಾಲಿಗೆ ಹಾಕಿ. ಕೆಲವು ನಿಮಿಷಗಳಲ್ಲಿ ಹಾಲು ನೀಲಿ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಸ್ಟಾರ್ಚ್ ಮಿಶ್ರಣ ಮಾಡಲಾಗಿದೆ ಎಂದರ್ಥ.

ಯೂರಿಯಾ: ಒಂದು ಟ್ಯೂಬ್​ನಲ್ಲಿ ಒಂದು ಚಮಚದಷ್ಟು ಹಾಲು ತೆಗೆದುಕೊಳ್ಳಿ. ಅದಕ್ಕೆ ಸೋಯಾಬೀನ್ ಪುಡಿ ಅಥವಾ ಆಹಾರ ಪುಡಿಗಳನ್ನು ಸೇರಿಸಿ ಚೆನ್ನಾಗಿ ಅಲ್ಲಾಡಿಸಿ. ಐದು ನಿಮಿಷದ ನಂತರ ಅದರಲ್ಲಿ ಕೆಂಪು ಲಿಟ್ಮಸ್ ಪೇಪರ್​ನ್ನು ಅದ್ದಿ. ಅರ್ಧ ನಿಮಿಷದ ನಂತರ ಪೇಪರ್ ತೆಗೆದಾಗ ಕಾಗದದ ಬಣ್ಣ ನೀಲಿ ವರ್ಣಕ್ಕೆ ತಿರುಗಿದರೆ ಅದರಲ್ಲಿ ಯೂರಿಯಾದ ಅಂಶ ಇದೆ ಎಂದರ್ಥ.

ಫಾರ್ಮಾಲಿನ್: ಹಾಲಿನಲ್ಲಿ ಫಾರ್ಮಾಲಿನ್ ಅಂಶವಿದೆಯೇ ಎಂಬುದನ್ನು ತಿಳಿಯಲು 10 ಮಿ.ಲೀಟರ್​ ಹಾಲಿಗೆ 5 ಮಿ.ಲೀ ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಿ. ಹಾಲಿನ ಬಣ್ಣವು ಕೆನ್ನೇರಳೆ ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಫಾರ್ಮಾಲಿನ್​ನ್ನು ಸೇರಿಸಲಾಗಿದೆ ಎಂದರ್ಥ. ಈ ರಾಸಾಯನಿಕವನ್ನು ಹಾಲು ಕೆಡದಂತೆ ಇಡಲು ಬಳಸಲಾಗುತ್ತದೆ.

ಡಿಟರ್ಜೆಂಟ್ ಅಥವಾ ಸೋಪಿನ ಪುಡಿ : ಸಣ್ಣ ಟ್ಯೂಬ್​ವೊಂದರಲ್ಲಿ 5 ಮಿ.ಲೀಟರ್ ಹಾಲು ತೆಗೆದುಕೊಳ್ಳಿ, ಅದಕ್ಕೆ 0.1 BSP ಸೇರಿಸಿ ಚೆನ್ನಾಗಿ ಕುಲುಕಿ. ಅದರಲ್ಲಿ ಡಿಟರ್‌ಜೆಂಟ್ ಅಂದರೆ ಸೋಪಿನ ಪುಡಿ ಮಿಶ್ರಣವಾಗಿದ್ದರೆ ನೊರೆಯು ಕೆನ್ನೇರಳೆ ಬಣ್ಣಕ್ಕೆ ತಿರುಗುತ್ತದೆ.

ಇತರೆ ವಿಧಾನ
ಲ್ಯಾಕ್ಟೋಮೀಟರ್: ಹಾಲನ್ನು ಪರೀಕ್ಷಿಸಲು ಮಾರುಕಟ್ಟೆಯಲ್ಲಿ ಲ್ಯಾಕ್ಟೊಮೀಟರ್ ಸಿಗುತ್ತದೆ. ಇದನ್ನು ನೀವು ಕೇವಲ 100 ರಿಂದ 300 ರೂಪಾಯಿ ಒಳಗೆ ಖರೀದಿಸಬಹುದು. ಮನೆಯಲ್ಲಿ ಇಂತಹ ಒಂದು ಪರೀಕ್ಷಕ ಸಾಧನವನ್ನು ಬಳಸುವುದರಿಂದ ಹಾಲಿನ ಕಲಬೆರಕೆಯನ್ನು ಪತ್ತೆ ಹಚ್ಚಬಹುದು.

ಮಿಲ್ಕ್ ಟೆಸ್ಟಿಂಗ್ ಕಿಟ್: ಹರಿಯಾಣದ ಕರ್ನಾಲ್​ನ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಹಾಲಿನ ಗುಣಮಟ್ಟವನ್ನು ಪರೀಕ್ಷಿಸುವ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಹಾಲಿನಲ್ಲಿರುವ ಡಿಟರ್ಜೆಂಟ್ ಅಂಶವನ್ನು ಪತ್ತೆಹಚ್ಚಲು ಇದು ತುಂಬಾ ಸಹಾಯಕಾರಿ. ಕೇವಲ 3 ರೂಪಾಯಿಗಳಲ್ಲಿ ಸಿಗುತ್ತಿರುವ ಈ ಉಪಕರಣದಿಂದ ದೊಡ್ಡ ಅಪಾಯದಿಂದ ಪಾರಾಗಬಹುದು. ಅನೇಕ ಖಾಸಗಿ ಕಂಪನಿಗಳು ಕೂಡ 50 ರೂ.ನಲ್ಲಿ ಹಾಲಿನ ಗುಣಮಟ್ಟ ಪರೀಕ್ಷಿಸುವ ಸಾಧನಗಳನ್ನು ಪರಿಚಯಿಸಿದೆ.

ಇದನ್ನೂ ಓದಿ: ಕಿಡ್ನಿ ಆರೋಗ್ಯವಾಗಿ ಇರಬೇಕೆಂದು ಬಯಸುತ್ತೀರಾ? ಹಾಗಿದ್ದರೆ ಹೀಗೆ ಮಾಡಿ

PH ಸ್ಟ್ರಿಪ್: ಕೇವಲ ಒಂದು ರೂಪಾಯಿಗೆ ಸಿಗುತ್ತಿರುವ PH ಸ್ಟ್ರಿಪ್​ನಿಂದ ಕೂಡ ಹಾಲನ್ನು ಪರೀಕ್ಷಿಸಿಕೊಳ್ಳಬಹುದು. ಪಿಎಚ್ ಸ್ಟ್ರಿಪ್ ಮೇಲೆ ಹಾಲಿನ ಹನಿಗಳನ್ನು ಹಾಕಿದ್ದರೆ ಅದರ ಅನುಪಾತವು  6.4 ರಿಂದ 6.6 ರಷ್ಟಿನಲ್ಲಿರುತ್ತದೆ. ಇದಕ್ಕಿಂತ ಕಡಿಮೆ ಅಥವಾ ಹೆಚ್ಚು ಆಗಿದ್ದರೆ ಅದು ಕಲಬೆರಕೆಯ ಹಾಲೆಂದು ಖಚಿತಪಡಿಸಬಹುದು.

First published:October 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ