ಪುಲ್ವಾಮ ದಾಳಿಯ ಮಾಸ್ಟರ್​ಮೈಂಡ್ ಜೈಷ್ ಕಮಾಂಡರ್ ಫೌಜಿ ಭಾಯ್ ಹತ್ಯೆ

ಫೌಜಿ ಭಾಯ್​ನ ಹತ್ಯೆಯು ಕಣಿವೆ ರಾಜ್ಯದ ಪೊಲೀಸ್ ಇತಿಹಾಸಕ್ಕೆ ಹೊಸ ಮೈಲಿಗಲ್ಲು ಆಗಿದೆ. ಜೈಷ್-ಎ-ಮುಹಮ್ಮದ್ ಸಂಘಟನೆಯ ಜಾಲವನ್ನು ಇಷ್ಟು ಸಮರ್ಪಕವಾಗಿ ಭೇದಿಸಲು ಯಶಸ್ವಿಯಾದ ಕಾಶ್ಮೀರೀ ಪೊಲೀಸರ ಕಾರ್ಯಕ್ಷಮತೆ ಮೆಚ್ಚುಗೆಗೆ ಪಾತ್ರವಾಗಿದೆ.

Vijayasarthy SN | news18
Updated:June 3, 2020, 4:16 PM IST
ಪುಲ್ವಾಮ ದಾಳಿಯ ಮಾಸ್ಟರ್​ಮೈಂಡ್ ಜೈಷ್ ಕಮಾಂಡರ್ ಫೌಜಿ ಭಾಯ್ ಹತ್ಯೆ
2019ರ ಪುಲ್ವಾಮ ಉಗ್ರ ದಾಳಿಯ ಭಯಾನಕ ದೃಶ್ಯ
  • News18
  • Last Updated: June 3, 2020, 4:16 PM IST
  • Share this:
ಶ್ರೀನಗರ್(ಜೂನ್ 03): ಭಾರತ ಮತ್ತು ಪಾಕಿಸ್ತಾನದ ಮಧ್ಯೆ ವೈಮಾನಿಕ ಸಂಘರ್ಷಕ್ಕೆ ಕಿಡಿ ಹೊತ್ತಿಸಿದ್ದ 2019ರ ಪುಲ್ವಾಮ ಉಗ್ರ ದಾಳಿಯ ರೂವಾರಿ ಎಂದೇ ನಂಬಲಾದ ಜೈಷೆ ಸಂಘಟನೆಯ ಕಮಾಂಡರ್ ಫೌಜಿ ಭಾಯ್​ನನ್ನು ಭದ್ರತಾ ಪಡೆಗಳು ಸಂಹರಿಸಿವೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಕಂಗನ್ ಗ್ರಾಮದಲ್ಲಿ ಭದ್ರತಾ ಪಡೆಗಳ ಎನ್​ಕೌಂಟರ್​ನಲ್ಲಿ ಫೌಜಿ ಭಾಯಿ ಸೇರಿದಂತೆ ಮೂವರು ಹತ್ಯೆಯಾಗಿದ್ದಾರೆ. ಇದ್ರಿಸ್, ಹೈದರ್, ಲಂಬು ಇತ್ಯಾದಿ ಹೆಸರುಗಳಿಂದ ಗುರುತಾಗಿರುವ ಫೌಜಿ ಭಾಯ್ ಜೊತೆ ಇದ್ದ ಆತನ ಇಬ್ಬರು ಅಂಗರಕ್ಷಕರೂ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಫೌಜಿ ಜೊತೆ ಹತ್ಯೆಯಾದ ಆ ಇಬ್ಬರನ್ನು ಪುಲ್ವಾಮದ ಕರೀಮ್​ಬಾದ್ ಗ್ರಾಮದ ಜಹೀದ್ ಮಂಜೂರ್ ವಾನಿ ಮತ್ತು ಶೋಪಿಯನ್​ನ ಸಿರ್ಯುನ್ ಗ್ರಾಮದ ಮಂಜೂರ್ ಅಹ್ಮದ್ ಕರ್ ಎಂದು ಗುರುತಿಸಲಾಗಿದೆ.

ಫೌಜಿ ಭಾಯ್​ನ ಹತ್ಯೆಯು ಕಣಿವೆ ರಾಜ್ಯದ ಪೊಲೀಸ್ ಇತಿಹಾಸಕ್ಕೆ ಹೊಸ ಮೈಲಿಗಲ್ಲು ಆಗಿದೆ. ಜೈಷ್-ಎ-ಮುಹಮ್ಮದ್ ಸಂಘಟನೆಯ ಜಾಲವನ್ನು ಇಷ್ಟು ಸಮರ್ಪಕವಾಗಿ ಭೇದಿಸಲು ಯಶಸ್ವಿಯಾದ ಕಾಶ್ಮೀರೀ ಪೊಲೀಸರ ಕಾರ್ಯಕ್ಷಮತೆ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ತಿಂಗಳ ಕಾಲ ಕಾಶ್ಮೀರೀ ಪೊಲೀಸರು ಈ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಮಾಹಿತಿ ಸಂಗ್ರಹಿಸಿದ್ದರು. ಅದರ ಆಧಾರದ ಮೇಲೆ ಜೈಷೆಯ ಪ್ರಮುಖ ಸ್ತಂಭವಾಗಿದ್ದ ಫೌಜಿ ಭಾಯ್ ಅನ್ನು ನಿರ್ನಾಮ ಮಾಡಲು ಭದ್ರತಾಪಡೆಗಳು ಯಶಸ್ವಿಯಾಗಿವೆ.

ಇತ್ತೀಚೆಗಷ್ಟೇ ಪುಲ್ವಾಮ ದಾಳಿ ಮಾದರಿಯಲ್ಲೇ ಮತ್ತೊಂದು ಕಾರ್ ಬಾಂಬ್ ಸ್ಫೋಟಿಸುವ ಸಂಚು ನಡೆದಿದ್ದು ಬೆಳಕಿಗೆ ಬಂದಿತ್ತು. ಭದ್ರತಾ ಪಡೆಗಳು ಕಾರ್ ಬಾಂಬ್ ದಾಳಿಯನ್ನು ತಡೆದು ನಿಷ್ಕ್ರಿಯಗೊಳಿಸಿದ್ದವು. ಈ ಘಟನೆಯು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಮತ್ತೆ ತೀಕ್ಷ್ಣ ರೂಪ ಪಡೆದುಕೊಂಡಿರುವ ಸಾಧ್ಯತೆಯನ್ನು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಫೌಜಿ ಭಾಯ್​ನ ಹತ್ಯೆಯು ಭದ್ರತಾ ಪಡೆಗಳಿಗೆ ಹೊಸ ಹುರುಪು ಕೊಟ್ಟಂತಾಗಿದೆ.

ಇದನ್ನೂ ಓದಿ: COVID-19 Vaccine: ಮಂಗಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗಕ್ಕೆ ಮುಂದಾದ ಭಾರತ

ಫೌಜಿ ಭಾಯ್ ಜೇಷ್-ಎ-ಮುಹಮ್ಮದ್ ಸಂಘಟನೆಯ ಪ್ರಮುಖ ಆಪರೇಟರ್ ಆಗಿದ್ದ. ಅಂದರೆ, ದಾಳಿ ಮಾಡುವ ಉಗ್ರರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡುವುದರಲ್ಲಿ ಮತ್ತು ದಾಳಿಗೆ ಬೇಕಾದ ವ್ಯವಸ್ಥೆ ಮಾಡುವುದರಲ್ಲಿ ಈತನದ್ದು ಎತ್ತಿದಕೈ. ಇತರ ಆಪರೇಟಿವ್​ಗಳಂತೆ ಫೌಜಿ ಭಾಯ್ ಕೂಡ ಮೊಬೈಲ್ ಫೋನ್ ಅಥವಾ ಕಮರ್ಷಿಯಲ್ ಇಂಟರ್ನೆಟ್ ನೆಟ್ವರ್ಕ್ ಬಳಸುತ್ತಿರಲಿಲ್ಲ. ನಿರ್ದಿಷ್ಟ ಕೊರಿಯರ್​ಗಳ ಮೂಲಕ ಈತನ ಸಂವಹನ ನಡೆಯುತ್ತಿತ್ತು. ಜೈಷೆ ಸಂಘಟನೆಯ ಮುಖ್ಯ ಕಚೇರಿಯನ್ನು ಸಂಪರ್ಕಿಸಲು ಎನ್​ಕ್ರಿಪ್ಟೆಡ್ ಸೆಟಿಲೈಟ್ ಫೋನ್ ಸೆಟ್ ಬಳಕೆ ಮಾಡುತ್ತಿದ್ದನೆನ್ನಲಾಗಿದೆ.

ಕೇಂದ್ರ ಗುಪ್ತಚರ ಮೂಲಗಳ ಪ್ರಕಾರ, 2018ರಲ್ಲಿ ಕಾಶ್ಮೀರದಲ್ಲಿ ಯುವಕರು ಬೃಹತ್ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಜೈಷೆ ಸಂಘಟನೆಯು ಫೌಜಿ ಭಾಯ್​ನನ್ನ ಅಖಾಡಕ್ಕೆ ಕಳುಹಿಸಿಕೊಟ್ಟಿತ್ತು. ಐಇಡಿ ಬಾಂಬ್ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದ ಫೌಜಿ ಭಾಯ್, ಅದಕ್ಕೆ ಬೇಕಾದ ಅಮೋನಿಯಮ್ ನೈಟ್ರೇಟ್ ರಾಸಾಯನಿಕವನ್ನು ಶೇಖರಿಸತೊಡಗಿದ್ದ. ಹಾಗೆಯೇ, ಕೋಪಗ್ರಸ್ತ ಯುವಕರನ್ನು ಜಿಹಾದಿ ಯುದ್ಧಕ್ಕೆ ಸೆಳೆಯಲು ಪ್ರಯತ್ನಿಸಿದ್ದ. ಆತ್ಮಾಹುತಿ ದಾಳಿಗೂ ಯುವಕರನ್ನು ಅಣಿಗೊಳಿಸುವ ಮಟ್ಟಕ್ಕೆ ಫೌಜಿ ಭಾಯ್ ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದ್ದ. 2019ರಲ್ಲಿ 40 ಸಿಆರ್​ಪಿಎಫ್ ಯೋಧರನ್ನು ಬಲಿತೆಗೆದುಕೊಂಡಿದ್ದ ಅದಿಲ್ ದರ್​ನನ್ನು ಈ ದಾಳಿಗೆ ಸೆಳೆದದ್ದು ಇದೇ ಫೌಜಿ ಭಾಯ್.

First published: June 3, 2020, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading