ನವದೆಹಲಿ(ಜ.29): ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿರುದ್ಧ ಹೈಕಮಾಂಡ್ ಶಿಸ್ತುಕ್ರಮ ತೆಗೆದುಕೊಂಡಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಬಿಜೆಪಿ, ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಇಬ್ಬರನ್ನು ಕೈಬಿಟ್ಟಿದೆ.
ಎರಡು ದಿನಗಳ ಹಿಂದೆಯಷ್ಟೇ ಜನವರಿ 27ನೇ ತಾರೀಕಿನಂದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅನುರಾಗ್ ಠಾಕೂರ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇಲ್ಲಿನ ರೋಡ್ ಶೋನಲ್ಲಿ ಜನರನ್ನುದ್ದೇಶಿಸಿ ಮಾತಾಡುವ ವೇಳೆ
ಅನುರಾಗ್ ಠಾಕೂರ್, ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಹೇಳಿಕೆ ನೀಡುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದರು.
ಸಿಎಎ ಹಾಗೂ ಎನ್ಆರ್ಸಿ ವಿರೋಧಿಸುವವರೆಲ್ಲ ದೇಶದ್ರೋಹಿಗಳು ಎಂದು ಹೇಳಿಕೆ ನೀಡಿದ್ದ ಅನುರಾಗ್ ಠಾಕೂರ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೇಂದ್ರ ಚುನಾವಣಾ ಆಯೋಗವು, ಜನ.28ನೇ ತಾರೀಕು ಮಂಗಳವಾರ ಅನುರಾಗ್ ಠಾಕೂರ್ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.
ಇನ್ನು, ಅನುರಾಗ್ ಠಾಕೂರ್ ಬೆನ್ನಲ್ಲೇ ಬಿಜೆಪಿ ಮುಖಂಡ ಪರ್ವೇಶ್ ವರ್ಮಾ ಕೂಡ ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ಚರ್ಚೆಗೀಡಾಗಿದ್ದರು. ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದ ಒಂದೇ ಗಂಟೆಯಲ್ಲಿ ಶಹೀನ್ ಬಾಗ್ ನೆಲಸಮವಾಗಲಿದೆ. ಶಹೀನ್ ಬಾಗ್ನಲ್ಲಿರುವ ಎಲ್ಲಾ ಪ್ರತಿಭಟನಾಕಾರರನ್ನು ಓಡಿಸುತ್ತೇವೆ. ಒಬ್ಬೇ ಒಬ್ಬ ಪ್ರತಿಭಟನಾಕಾರನನ್ನು ಉಳಿಸುವುದಿಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದರು.
ಇದನ್ನೂ ಓದಿ: ಶಾಹೀನ್ ಬಾಗ್ನ ಪ್ರತಿಭಟನಾಕಾರರು ಮನೆಗೆ ನುಗ್ಗಿ ಅತ್ಯಾಚಾರ ನಡೆಸಬಹುದು; ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ
ಜತೆಗೆ ಶಾಹೀನ್ ಬಾಗ್ನಲ್ಲಿ ಲಕ್ಷಾಂತರ ಜನರಿದ್ದಾರೆ. ದೆಹಲಿಗರು ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಶಹೀನ್ ಬಾಗ್ ಪ್ರತಿಭಟನೆಯ ಕಾವು ನಿಮ್ಮ ಮನೆಗೂ ತಲುಪಬಹುದು. ನಿಮ್ಮ ಅಕ್ಕ-ತಂಗಿಯರು, ಮಕ್ಕಳ ಮೇಲೆ ಪ್ರತಿಭಟನಾಕಾರರು ಅತ್ಯಾಚಾರ ನಡೆಸಬಹುದು. ನಿಮಗೆ ಏನು ಬೇಕೆಂದು ಆಯ್ಕೆ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಸದ್ಯ ನೀವು ಎಚ್ಚೆತ್ತುಕೊಳ್ಳದಿದ್ದರೆ, ನಾಳೆ ಮೋದಿ, ಅಮಿತ್ ಶಾ ಯಾರೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಪರ್ವೇಶ್ ವರ್ಮಾ ಪ್ರಚೋದನಾಕಾರಿ ಭಾಷಣ ಮಾಡಿದ್ದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿರುವ ಪರ್ವೇಶ್ ವರ್ಮಾ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಹೀನ್ ಬಾಗ್ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಓಡಿಸುವುದು ಮಾತ್ರವಲ್ಲದೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೇ ತಿಂಗಳಲ್ಲಿ ದೆಹಲಿಯಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರುವ ಎಲ್ಲ ಮಸೀದಿಗಳನ್ನೂ ನೆಲಸಮ ಮಾಡಲಾಗುವುದು ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ