HOME » NEWS » National-international » ANTONY BLINKEN NEW US SECRETARY OF STATE IS AN OLD FRIEND OF INDIA SNVS

ಅಮೆರಿಕದ ಮುಂದಿನ ವಿದೇಶಾಂಗ ಸಚಿವರ ಭಾರತದೊಂದಿಗಿನ ಒಡನಾಟ ಹೇಗೆ? ಚೀನಾ, ಪಾಕ್ ಬಗ್ಗೆ ಅವರ ನಿಲುವೇನು?

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ತಮ್ಮ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಂಟೋನಿ ಬ್ಲಿಂಕೆನ್ ಅವರನ್ನ ವಿದೇಶಾಂಗ ಸಚಿವ ಸ್ಥಾನಕ್ಕೆ ಆರಿಸಿಕೊಂಡಿದ್ದಾರೆ. ಭಾರತದ ಬಗ್ಗೆ ಬ್ಲಿಂಕೆನ್ ಹೊಂದಿರುವ ನಿಲುವುಗಳೇನು?

news18
Updated:November 24, 2020, 10:47 AM IST
ಅಮೆರಿಕದ ಮುಂದಿನ ವಿದೇಶಾಂಗ ಸಚಿವರ ಭಾರತದೊಂದಿಗಿನ ಒಡನಾಟ ಹೇಗೆ? ಚೀನಾ, ಪಾಕ್ ಬಗ್ಗೆ ಅವರ ನಿಲುವೇನು?
ಆಂಟೋನಿ ಬ್ಲಿಂಕೆನ್
  • News18
  • Last Updated: November 24, 2020, 10:47 AM IST
  • Share this:
ನವದೆಹಲಿ(ನ. 24): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸೋಲನ್ನು ಡೊನಾಲ್ಡ್ ಟ್ರಂಪ್ ಒಪ್ಪಿಕೊಳ್ಳದಿದ್ದರೂ ಅಧಿಕಾರ ಬಿಟ್ಟುಕೊಡುವುದು ಬಹುತೇಕ ಖಚಿತವೆನ್ನಲಾಗಿದೆ. ಡೆಮಾಕ್ರಾಟ್ ಪಕ್ಷದ ಜೋ ಬೈಡನ್ ನೂತನ ಅಮೆರಿಕ ಅಧ್ಯಕ್ಷರಾಗುವ ಕಾಲ ಸನ್ನಿಹಿತವಾಗಿದೆ. ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನ ಬೈಡನ್ ಪಡೆ ಮಾಡುತ್ತಾ ಬಂದಿದೆ. ನೂತನ ನಿಯೋಜಿತ ಅಧ್ಯಕ್ಷರು ತಮ್ಮ ಸಚಿವ ಸಂಪುಟ ರಚನೆಯತ್ತಲೂ ಗಮನ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ಅಧ್ಯಕ್ಷ ಸ್ಥಾನ ಬಿಟ್ಟರೆ ಅತ್ಯಂತ ಪ್ರಬಲ ಹುದ್ದೆ ಎನಿಸಿರುವ ಸೆಕ್ರೆಟರಿ ಆಫ್ ಸ್ಟೇಟ್ (ಇದು ವಿದೇಶಾಂಗ ಸಚಿವ ಹುದ್ದೆಗೆ ಪರ್ಯಾಯ) ಅನ್ನು ಆಂಟೋನಿ ಬ್ಲಿಂಕೆನ್ ಅವರಿಗೆ ನೀಡಲು ನಿರ್ಧರಿಸಿದ್ದಾರೆ. ಬೈಡನ್ ಅತಿ ಹೆಚ್ಚು ವಿಶ್ವಾಸ ಇರಿಸಿಕೊಂಡಿರುವ ವ್ಯಕ್ತಿಗಳಲ್ಲಿ ಬ್ಲಿಂಕೆನ್ ಕೂಡ ಒಬ್ಬರು.

58 ವರ್ಷದ ಆಂಟೋನಿ ಬ್ಲಿಂಕೆನ್ ಅವರು ವಿದೇಶಾಂಗ ಇಲಾಖೆಯಲ್ಲಿ ಅನನುಭವಿಯಲ್ಲ. ಇಲಾಖೆಯಲ್ಲಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಜೋ ಬೈಡನ್ ಅವರಿಗೆ ಇರುವ ವಿದೇಶ ನೀತಿ ಚಿಂತಕರ ಪಡೆಗೆ ಬ್ಲಿಂಕೆನ್ ಅವರೇ ಮುಖ್ಯಸ್ಥರು.  ಬೈಡನ್ ಅವರು ಅಮೆರಿಕದ ನೌಕಾ ವೀಕ್ಷಣಾಲಯದ ನಿವಾಸಿಯಾಗಿದ್ದಾಗ ಅವರಿಗೆ ಭದ್ರತಾ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು. ಹಿಂದೆ ಬೈಡನ್ ಅಧ್ಯಕ್ಷರಾಗಿದ್ದ ಸಂಸದೀಯ ವಿದೇಶಾಂಗ ಸಂಬಂಧಗಳ ಸಮಿತಿಗೆ ಬ್ಲಿಂಕೆನ್ ಅವರು ಸ್ಟಾಫ್ ಡೈರೆಕ್ಟರ್ ಆಗಿದ್ದವರು. ತೊಂಬತ್ತರ ದಶಕದಲ್ಲಿ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರಿಗೆ ವಿದೇಶ ಭಾಷಣ ಬರಹಗಾರರಾಗಿ ಕಾರ್ಯಾರಂಭಿಸಿದ ಬ್ಲಿಂಕೆನ್ ಇಂದು ಅಮೆರಿಕದ ಎರಡನೇ ಅತ್ಯುನ್ನತ ಹುದ್ದೆಗೆ ಏರಿರುವುದು ಸಣ್ಣ ಸಾಹಸವಲ್ಲ.

ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರವನ್ನು ಮೊದಲು ತನ್ನಿ ಆನಂತರ ಕರಾಚಿಯ ಬಗ್ಗೆ ಯೋಚಿಸಿ; ಸಂಜಯ್ ರಾವತ್

ಭಾರತದ ಮಟ್ಟಿಗೆ ಅಮೆರಿಕದ ಅಧ್ಯಕ್ಷ ಮತ್ತು ವಿದೇಶಾಂಗ ಸಚಿವರ ನೀತಿ, ವರ್ತನೆ ಬಹಳ ಮುಖ್ಯ. ಈ ವಿಚಾರದಲ್ಲಿ ಬೈಡನ್ ಮತ್ತು ಬ್ಲಿಂಕೆನ್ ಅವರದ್ದು ಒಂದೇ ಫ್ರೀಕ್ವೆನ್ಸಿ ಇರುವ ನೀತಿಯಾಗಿದೆ. ಭಾರತ, ಚೀನಾ, ಯೂರೋಪ್, ಮಧ್ಯಪ್ರಾಚ್ಯ, ಇರಾನ್ ಮೊದಲಾದ ವಿದೇಶಗಳ ವಿಚಾರದಲ್ಲಿ ಬೈಡನ್ ಅವರಿಗೆ ಒಂದು ಸ್ಪಷ್ಟ ದೃಷ್ಟಿಕೋನ ದೊರಕಲು ಬ್ಲಿಂಕೆನ್ ಅವರ ಪಾತ್ರ ಬಹಳ ಮುಖ್ಯ. ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಬರಾಕ್ ಒಬಾಮ ಸೇರಿದಂತೆ ಡೆಮಾಕ್ರಾಟ್ ಪಕ್ಷದ ಎಡಪಂಥೀಯ ಮೂಲೆಗಳಿಂದ ಅತೀವ ವಿರೋಧ ವ್ಯಕ್ತವಾಗುತ್ತಿದ್ದಾಗ ಒಪ್ಪಂದಕ್ಕೆ ಒಂದು ಮುಕ್ತಿ ದೊರಕಲು ಬ್ಲಿಂಕೆನ್ ಪಾತ್ರವೂ ದೊಡ್ಡದಿದೆ. ಭಾರತ ಇಲ್ಲದೆಯೇ ಜಾಗತಿಕ ಬೆಳವಣಿಗೆ ಸಾಧ್ಯವಿಲ್ಲ. ಅಮೆರಿಕಕ್ಕೆ ಭಾರತದ ಸ್ನೇಹ ಅತ್ಯಗತ್ಯ ಎಂಬುದು ಬ್ಲಿಂಕೆನ್ ಅವರ ಅಭಿಮತ.

“ಜೋ ಬಿಡೆನ್ ದೃಷ್ಟಿಕೋನದಲ್ಲಿ ನಾನು ಯೋಚಿಸಿದಾಗ ಭಾರತದೊಂದಿಗಿನ ಸಂಬಂಧ ಗಟ್ಟಿಗೊಳ್ಳುವುದು ಬಹಳ ಮುಖ್ಯ. ಇಂಡೋ-ಪೆಸಿಫಿಕ್ ಪ್ರದೇಶದ ಭವಿಷ್ಯದ ದೃಷ್ಟಿಯಿಂದಲೂ ಇದು ಮುಖ್ಯ” ಎಂದು ಬೈಡನ್ ಉಪಾಧ್ಯಕ್ಷರಾಗಿದ್ದಾಗ ಬ್ಲಿಂಕೆನ್ ಅವರು ಹೇಳಿದ್ದರು.

ಇದನ್ನೂ ಓದಿ: ಸಮಾಜದಲ್ಲಿ ಕೋಮುದ್ವೇಷ ಹರಡಿದ ಪ್ರಕರಣ; ಎಫ್​ಐಆರ್​ ರದ್ಧತಿ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ ನಟಿ ಕಂಗನಾ

ಬ್ಲಿಂಕೆನ್ ಅವರು ಭಾರತದೊಂದಿಗಿನ ಸಂಬಂಧಕ್ಕೆ ಆದ್ಯತೆ ಕೊಡುತ್ತಾರಾದರೂ ಟೀಕೆಗಳಿಗೂ ಹಿಂಜರಿದವರಲ್ಲ. ಭಾರತ ಸರ್ಕಾರದ ಕೆಲ ಕ್ರಮಗಳನ್ನು ಇವರು ನೇರವಾಗಿ ಖಂಡಿಸಿದ್ದುಂಟು. ಜಮ್ಮು-ಕಾಶ್ಮೀರ, ಸಿಎಎ ವಿಚಾರದಲ್ಲಿ ಅವರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಆದರೆ, ಈ ಭಿನ್ನಾಭಿಪ್ರಾಯಗಳನ್ನ ನೇರವಾಗಿ ವ್ಯಕ್ತಪಡಿಸುವುದರಿಂದ ಭಾರತದೊಂದಿಗಿನ ಸಂಬಂಧ ಇನ್ನಷ್ಟು ಗಾಢಗೊಳ್ಳಲು ಸಹಕಾರಿ ಆಗುತ್ತದೆ ಎಂಬುದು ಅವರ ಆಶಯ.ಹಾಗೆಯೇ, ಚೀನಾದ ಮಹತ್ವಾಕಾಂಕ್ಷಿ ನಿಲುವುಗಳ ಬಗ್ಗೆ ಬ್ಲಿಂಕೆನ್ ಅಸಹನೆ ಹೊಂದಿದ್ದಾರೆ. ಚೀನಾದ ಭೂದಾಹ, ಗಡಿತಂಟೆ, ಆರ್ಥಿಕ ಪ್ರಹಾರ ಇತ್ಯಾದಿ ವಿರುದ್ಧ ಬ್ಲಿಂಕೆನ್ ಈ ಹಿಂದೆ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಹಾಗೆಯೇ, ಭಯೋತ್ಪಾದನೆ ವಿರುದ್ಧವೂ ಅವರದ್ದು ಗಟ್ಟಿ ನಿಲುವು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಹೆಚ್ಚು ಬಲ ತುಂಬಬೇಕೆನ್ನುವುದು ಅವರ ಅನಿಸಿಕೆ. ಈ ದೃಷ್ಟಿಯಿಂದ ಆಂಟೋನಿ ಬ್ಲಿಂಕೆನ್ ಅವರು ಅಮೆರಿಕದ ವಿದೇಶಾಂಗ ಸಚಿವರಾಗುವುದು ಭಾರತಕ್ಕೆ ಒಳಿತೇ ಆಗುವ ಸಾಧ್ಯತೆ ಹೆಚ್ಚಿದೆ.
Published by: Vijayasarthy SN
First published: November 24, 2020, 10:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading