ನವದೆಹಲಿ: ಲೋಕಸಭೆಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅನರ್ಹತೆಗೊಂಡಿರುವುದು ದೇಶಾದ್ಯಂತ ಭಾರೀ ಸುದ್ದಿಯಾಗಿದೆ. ಆದರೆ 2019 ರಲ್ಲಿ ಕೇರಳದ (Kerala) ಅದೇ ವಯನಾಡ್ (Wayanad) ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಮತ್ತೊಬ್ಬ ರಾಹುಲ್ ಗಾಂಧಿ ಕೂಡ ಅನರ್ಹಗೊಂಡಿದ್ದು, ಮುಂದಿನ ಚುನಾವಣೆಯಲ್ಲಿ (Election) ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಮಾರ್ಚ್ 29 ರಂದು ಭಾರತದ ಚುನಾವಣಾ ಆಯೋಗವು (Election Commission) ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕಳುಹಿಸಿದ ಪ್ರಜಾಪ್ರತಿನಿಧಿ ಕಾಯ್ದೆ (Representation of the People Act), 1951 ರ ಸೆಕ್ಷನ್ 10 ಎ ಅಡಿಯಲ್ಲಿ ಅನರ್ಹಗೊಂಡ ವ್ಯಕ್ತಿಗಳ ಸಾಮಾನ್ಯ ಪಟ್ಟಿಯಲ್ಲಿ, ರಾಹುಲ್ ಗಾಂಧಿ ಕೆ.ಇ. ಎಂಬುವವರ ಹೆಸರೂ ಕೂಡ ಇದೆ. ಈ ಪಟ್ಟಿಯ ಪ್ರಕಾರ ಅವರನ್ನು ಸೆಪ್ಟೆಂಬರ್ 9, 2021 ರಿಂದ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗಿದೆ.
ಚುನಾವಣೆಯಿಂದ ರಾಹುಲ್ ಗಾಂಧಿ
ಮೋದಿ ಸರ್ನೇಮ್ ವಿವಾದ ಪ್ರಕರಣದಲ್ಲಿ ಗುಜರಾತ್ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಬೆನ್ನಲ್ಲೇ, ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಲೋಕಸಭೆ ಅನರ್ಹಗೊಳಿಸಿತ್ತು. ಆದರೆ ಕೇರಳದ ವಯನಾಡು ಕ್ಷೇತ್ರದಿಂದ 2019ರಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅವರ ಹೆಸರಿನ ಮತ್ತೊಬ್ಬ ವ್ಯಕ್ತಿಯನ್ನು ಕೇಂದ್ರ ಚುನಾವಣಾ ಆಯೋಗ ಅನರ್ಹ ಮಾಡಿದೆ. ವಲ್ಸಮ್ಮ ಎಂಬುವವರ ಪುತ್ರ ರಾಹುಲ್ ಗಾಂಧಿ ಕೆ ಇ ಹೆಸರಿನ ಅಭ್ಯರ್ಥಿಯನ್ನು ಭವಿಷ್ಯದ ಚುನಾವಣೆಗಳಲ್ಲಿ ಮೂರು ವರ್ಷ ಸ್ಪರ್ಧಿಸದಿರುವಂತೆ ನಿಷೇಧ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸೆಕ್ಷನ್ 10ಎ ಅಡಿಯಲ್ಲಿ, ಚುನಾವಣೆಗೆ ಸ್ಪರ್ಧಿಸಿದ ನಂತರ ಚುನಾವಣಾ ವೆಚ್ಚದ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆದರೆ ವಲ್ಸಮ್ಮ ಅವರ ಪುತ್ರ ರಾಹುಲ್ ಗಾಂಧಿ ಈ ವಿವರವನ್ನು ಸಲ್ಲಿಸಲು ವಿಫಲರಾಗಿದ್ದರಿಂದ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದರೆ ಈ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕನ ಹೆಸರಿಲ್ಲ. ಅವರು ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಗಾದ ನಂತರ ಮಾರ್ಚ್ 23 ರಂದು ಅವರನ್ನು ಲೋಕಸಭಾ ಸದಸ್ಯತತ್ವದಿಂದ ಅನರ್ಹಗೊಳಿಸಲಾಗಿದೆ.
2196 ಮತ ಪಡೆದಿದ್ದ ರಾಹುಲ್ ಗಾಂಧಿ ಕೆ.ಇ
2019ರ ಲೋಕಸಭೆ ಚುನಾವಣೆಯಲ್ಲಿ 33 ವರ್ಷದ ರಾಹುಲ್ ಕೆ.ಇ ಕೇರಳದ ವಯನಾಡ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇವರು 2,196 ಮತಗಳನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 7 ಲಕ್ಷ ಮತಗಳ ಅಂತರದ ದಾಖಲೆಯ ಗೆಲುವು ಕಂಡಿದ್ದರು. ರಾಹುಲ್ ಗಾಂಧಿ ಕೆ ಇ ಅಲ್ಲದೆ, ರಾಘುಲ್ ಗಾಂಧಿ ಕೆ ಎಂಬುವವರೂ ಕೂಡ ಚುನಾವಣೆಗೆ ಸ್ಪರ್ಧಿಸಿದ್ದರು. ಆತ 845 ಮತಗಳನ್ನು ಪಡೆದುಕೊಂಡಿದ್ದ.
ಪ್ರಬಲ ಹಾಗೂ ಖ್ಯಾತ ನಾಯಕರ ವಿರುದ್ಧ ಅದೇ ಹೆಸರಿನ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುವುದು ಸಾಮಾನ್ಯ. ಆದರೆ ಅವರೆಲ್ಲರೂ ಚುನಾವಣಾ ಆಯೋಗದ ನಿಯಮಗಳು ಮತ್ತು ಪ್ರಜಾಪ್ರತಿನಿಧಿ ಕಾಯಿದೆಯ ಅಡಿಯಲ್ಲಿ ಚುನಾವಣಾ ಮಾಡಿರುವ ವೆಚ್ಚಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಈ ವಿಷಯದಲ್ಲಿ ರಾಹುಲ್ ಕೆ ಇ ವಿಫಲರಾಗಿದ್ದಾರೆ. ಹಾಗಾಗಿ 2021ರ ಸೆಪ್ಟೆಂಬರ್ 13 ರಿಂದ 2024ರ ಸೆಪ್ಟೆಂಬರ್ 13 ರವರೆಗೆ ಮೂರು ವರ್ಷಗಳ ಅವಧಿಗೆ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಲಾಗಿದೆ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ