Hijab Row: ಹಿಜಾಬ್ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಯ್ತು ಮತ್ತೊಂದು‌ ಅರ್ಜಿ

'ಇದು ಪರೀಕ್ಷೆಯ ಸಮಯ, ಒಂದು ವರ್ಷ ಹಾಳಾಗುತ್ತಿದೆ' ಎಂದು ವಿದ್ಯಾರ್ಥಿಗಳು ಬೇಡಿಕೊಂಡರೂ ಅವರ ಅರ್ಜಿಗಳನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಮಾ. 28: ಶಾಲೆಗಳಲ್ಲಿ ಹಿಜಾಬ್ (Hijab) ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ (Karnataka High Court) ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ (Supreme Court) ಸಂಜಯ್ ಹೆಗಡೆ, ದೇವದತ್ ಕಾಮತ್ ಮತ್ತು ಅನಸ್ ತನ್ವೀರ್ ಎಂಬ ವಕೀಲರು (Lawyers) ವಿದ್ಯಾರ್ಥಿಗಳ (Students) ಪರವಾಗಿ ಈಗಾಗಲೇ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು.‌ ಆದರೆ ಸುಪ್ರೀಂ ಕೋರ್ಟ್ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತ್ತು. ಈ ನಡುವೆ ಇಂದು ಮತ್ತೊಂದು ಮೇಲ್ಮನವಿ (Appeal) ಸಲ್ಲಿಕೆಯಾಗಿದೆ‌. ಈಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ.

ವಿದ್ಯಾರ್ಥಿಗಳ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಕರ್ನಾಟಕ ಹೈಕೋರ್ಟ್‌ನಲ್ಲಿ ತೀರ್ಪು ಹೋರಬೀಳುತ್ತಿದ್ದಂತೆ ಅಂದೇ ನಿಬಾ ನಾಜ್ ಎಂಬ ವಿದ್ಯಾರ್ಥಿನಿ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಕೀಲ ಅನಸ್ ತನ್ವೀರ್ ಅರ್ಜಿ ಸಲ್ಲಿಕೆ ಮಾಡಿದ್ದರು. ಇತರೆ ಆರು ವಿದ್ಯಾರ್ಥಿನಿಯರ ಪರ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದ ವಕೀಲರಾದ ಸಂಜಯ್ ಹೆಗಡೆ ಮತ್ತು ದೇವದತ್ ಕಾಮತ್ ಅವರು ಮಾರ್ಚ್ 16ರಂದು ಪ್ರತ್ಯೇಕವಾಗಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಕೆಯ ಬಳಿಕ ಓಪನ್ ಕೋರ್ಟಿನಲ್ಲಿ ಮೆನ್ಷನ್ ಮಾಡಿ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು.

ತುರ್ತು ವಿಚಾರಣೆಗೆ ನಿರಾಕರಿಸಿದ್ದ ನ್ಯಾಯಪೀಠ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್ ಹೋಳಿ ಹಬ್ಬದ ಬಳಿಕ ವಿಚಾರಣೆಗೆ ದಿನಾಂಕ ನಿಗಧಿ ಮಾಡಲಾಗುವುದು ಎಂದು ಹೇಳಿತ್ತು. ವಕೀಲ ಸಂಜಯ್ ಹೆಗಡೆ ಹೋಳಿ ಹಬ್ಬ ಮುಗಿದ ಬಳಿಕ ಮಾರ್ಚ್ 21ರಂದೇ ವಿಚಾರಣೆ ನಡೆಸಿ ಎಂದು ಕೇಳಿಕೊಂಡಿದ್ದರು. ಸುಪ್ರೀಂ ಕೋರ್ಟ್ ಅದಕ್ಕೂ ಮಾನ್ಯ ಮಾಡಿರಲಿಲ್ಲ.

ಇದಾದ ಮೂರು ದಿನವಾದರೂ ಪ್ರಕರಣದ ವಿಚಾರಣೆಗೆ ಲಿಸ್ಟ್ ಆಗದಿದ್ದ ಕಾರಣಕ್ಕೆ ಮಾರ್ಚ್ 24ರಂದು ವಕೀಲ ದೇವದತ್ ಕಾಮತ್ ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದರು. ಆಗಲೂ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲು ಒಪ್ಪಲಿಲ್ಲ.

ಇದನ್ನೂ ಓದಿ: Hijab Controversy: "ನೀವೇಕೆ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡ್ತೀರಿ?" ಹಿಜಾಬ್ ವಿವಾದದ ಬಗ್ಗೆ ಭುವನ ಸುಂದರಿ ಗರಂ

ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆ

ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಇಂದು ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಹಿಜಾಬ್ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ 'ಇದು ಪರೀಕ್ಷೆಯ ಸಮಯ, ಒಂದು ವರ್ಷ ಹಾಳಾಗುತ್ತಿದೆ' ಎಂದು ವಿದ್ಯಾರ್ಥಿಗಳು ಬೇಡಿಕೊಂಡರೂ ಅವರ ಅರ್ಜಿಗಳನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮುಂದಾಗದ ಹಿನ್ನೆಲೆಯಲ್ಲಿ ಈಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾರ್ಯದರ್ಶಿ ಮೊಹಮ್ಮದ್ ಫಜ್ಲುರ್ರಹೀಮ್ ಅವರು ಮುನಿಸಾ ಬುಶ್ರಾ ಮತ್ತು ಜಲೀಸಾ ಸುಲ್ತಾನಾ ಯಾಸೀನ್ ಅವರ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ.

ಇತರೆ ಅರ್ಜಿಗಳ ಸಲ್ಲಿಕೆ ಸಾಧ್ಯತೆ?

ಅಖಿಲ ಭಾರತ ಯುವ ಕಾಂಗ್ರೆಸ್ ಈ ಹಿಂದೆಯೇ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈಗ ರಾಜ್ಯ ಹೈಕೋರ್ಟ್ ತೀರ್ಪು ಹೊರಬಿದ್ದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದೇ ರೀತಿ ಹಿಂದೆ ಅರ್ಜಿ ಸಲ್ಲಿಸಿದ್ದ ರಾಜ್ಯದ ವಕ್ಫ್ ಬೋರ್ಡ್, ಡಾ. ಜೆ ಹಳ್ಳಿ ಫೆಡರೇಷನ್  ಆಫ್ ಮಸೀದ್, ಮದ್ರಾಸ್ ಅ್ಯಂಡ್ ವಕ್ಫ್ ಇನ್ಸ್ಟಿಟ್ಯೂಟಿಷನ್ ಗಳು ಕೂಡ ಪ್ರತ್ಯೇಕವಾದ ಅರ್ಜಿಗಳನ್ನು ಸಲ್ಲಿಸುವ ಸಾಧ್ಯತೆಗಳಿವೆ.

ಏಕರೂಪ ಸಮವಸ್ತ್ರ ಕುರಿತು ಕೇಳುವ ಸಾಧ್ಯತೆ

ಹಿಜಾಬ್ ಪ್ರಕರಣ ಶುರುವಾಗುತ್ತಿದ್ದಂತೆ ಇಡೀ ದೇಶಾದ್ಯಂತ ಏಕರೂಪದ ಸಮವಸ್ತ್ರ ಇರುವಂತಹ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದ ವಕೀಲ ನಿಖೀಲ್ ಉಪಾಧ್ಯಾಯ ಮತ್ತೊಮ್ಮೆ ಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ.

ರಾಜ್ಯ ಹೈಕೋರ್ಟಿನ ತೀರ್ಪು ಎಲ್ಲಾ ಶಾಲೆಗಳಿಗೂ ಏಕರೂಪವಾಗಿ ಅನ್ವಯ ಆಗುತ್ತದೆ ಎಂಬ ರೀತಿಯಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಖಾಸಗಿ ಶಾಲಾ ಆಡಳಿತ ಮಂಡಳಿ ಪರ ವಕೀಲರು ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಆರಂಭ: Hijab ಧರಿಸಿ ಬಂದ್ರೆ ನೋ ಎಂಟ್ರಿ

ಹಿಂದೂ ಸೇನೆಯಿಂದ ಕೇವಿಯೆಟ್ ಸಲ್ಲಿಕೆ

ಈ ನಡುವೆ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮನ್ನೂ ಭಾಗಿದಾರರನ್ನಾಗಿ ಮಾಡಿಕೊಳ್ಳಿ ಎಂದು ಹಿಂದೂ ಸೇನೆ ವತಿಯಿಂದ ಸುಪ್ರೀಂ ಕೋರ್ಟಿನಲ್ಲಿ ಕೇವಿಯೆಟ್ ಸಲ್ಲಿಕೆಯಾಗಿದೆ. ಹಿಂದೂ ಸೇನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅವರ ಪರವಾಗಿ ವಕೀಲ ಅರುಣ್ ಕುಮಾರ್ ಸಿನ್ಹಾ ಅವರು ಕೇವಿಯಟ್ ಸಲ್ಲಿಸಿದ್ದಾರೆ.
Published by:Annappa Achari
First published: