news18-kannada Updated:December 4, 2020, 2:51 PM IST
ನಟಿ ಕಂಗನಾ.
ನವ ದೆಹಲಿ (ಡಿಸೆಂಬರ್ 04); ಸದಾ ಒಂದಿಲ್ಲೊಂದು ಟ್ವೀಟ್ ಮಾಡುವ ಮೂಲಕ ವಿವಾದಗಳಲ್ಲಿ ಸಿಲುಕಿಕೊಳ್ಳುವ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮತ್ತೊಂದು ವಿವಾದದ ಕೇಂದ್ರವಾಗಿದ್ದಾರೆ. ಅಲ್ಲದೆ, ಅವರ ಆಕ್ಷೇಪಣಾರ್ಹ ಟ್ವೀಟ್ಗೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್ ಕ್ಷಮೆ ಕೇಳಲೇಬೇಕು ಎಂದು ಒತ್ತಾಯಿಸಿ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ (DSGMC) ಅವರಿಗೆ ಲೀಗಲ್ ನೊಟೀಸ್ ಜಾರಿ ಮಾಡಿದೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ 9 ದಿನಗಳಿಂದ ರೈತರು ದೆಹಲಿಯಲ್ಲಿ ಹೋರಾಟ ನಿರತರಾಗಿದ್ದಾರೆ. ಸಿಎಎ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ 82 ವರ್ಷದ ಬಿಲ್ಕೀಸ್ ಭಾನು ದಾದಿ ಸಹ ಈ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಬೆಂಬಲವನ್ನು ಸೂಚಿಸಿದ್ದರು. ಆನಂತರ ಬಂಧನಕ್ಕೂ ಒಳಗಾಗಿದ್ದರು. ಆದರೆ, ನಟಿ ಕಂಗನಾ ರಣಾವತ್ ಹಿರಿಯ ವೃದ್ಧೆಯೊಬ್ಬರನ್ನು ದೆಹಲಿ ಚಲೋ ರೈತರ ಪ್ರತಿಭನೆಯಲ್ಲಿ ಭಾಗಿಯಾಗಿರುವ ಬಿಲ್ಕೀಸ್ ಬಾನು ಎಂದು ತಪ್ಪಾಗಿ ಗುರುತಿಸಿದ್ದರು. ಅಲ್ಲದೆ, "ಅವರು ಪಾಕಿಸ್ತಾನದ ಏಜೆಂಟ್ಗಳಾಗಿದ್ದು 100 ರೂ ನೀಡಿ ಹೋರಾಟಕ್ಕೆ ನೇಮಕ ಮಾಡಲಾಗಿದೆ" ಎಂದು ಟ್ವೀಟ್ ಮೂಲಕ ಅಪಹಾಸ್ಯ ಮಾಡಿದ್ದರು. ನಟಿಯ ಈ ಟ್ವೀಟ್ ಇದೀಗ ರೈತ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ನಟಿ ಕಂಗನಾ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾದ ನಂತರ ವೃದ್ಧೆ ಹಾಗೂ ಹಿರಿಯ ಹೋರಾಟಗಾರ್ತಿಯ ಕುರಿತಾದ ದ್ವಿತೀಯ ದರ್ಜೆಯ ಟ್ವೀಟ್ ಅನ್ನು ಅವರು ಅಳಿಸಿದ್ದಾರೆ. ಆದರೆ, ನಟಿಯ ನಡೆ ಮತ್ತು ವರ್ತನೆಯ ಕುರಿತು ಇದೀಗ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ದೆಹಲಿ ಚಲೋ ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ (DSGMC) ನಟಿ ಕೂಡಲೇ ತಮ್ಮ ಆಕ್ಷೇಪಾರ್ಹ ಟ್ವೀಟ್ಗೆ ಕ್ಷೆಮೆ ಕೇಳಬೇಕು ಎಂದು ಲೀಗಲ್ ನೊಟೀಸ್ ಕಳಿಸಲಾಗಿದೆ.
ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ, "ಹಿರಿಯ ತಾಯಿಯನ್ನು 100 ರೂ.ಗಳಿಗೆ ಲಭ್ಯವಿರುವ ಮಹಿಳೆ ಎಂದು ಕರೆದು ಅವಹೇಳನಕಾರಿ ಟ್ವೀಟ್ ಮಾಡಿರುವ ಕಂಗನಾರಿಗೆ ನಾವು ಲೀಗಲ್ ನೋಟಿಸ್ ಕಳುಹಿಸಿದ್ದೇವೆ. ಅವರ ಟ್ವೀಟ್ಗಳು ರೈತರ ಪ್ರತಿಭಟನೆಯನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸುತ್ತವೆ. ರೈತರ ಪ್ರತಿಭಟನೆಯ ಬಗ್ಗೆ ಅವರು ಮಾಡಿದ ಅವಹೇಳನಕಾರಿದ ಟೀಕೆಗಳಿಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದಿದ್ದಾರೆ.

ನಟಿ ಕಂಗನಾ ರಣಾವತ್ ಮಾಡಿದ್ದ ಟ್ವೀಟ್.
ಕಳೆದ ನವೆಂಬರ್ 27 ರಂದು ನಟಿ ಕಂಗನಾ, "ಹಹಹ ಇದು ಅದೇ ದಾದಿ, ಟೈಮ್ ಮ್ಯಾಗಝಿನ್ ಹೇಳಿರುವ ಅತ್ಯಂತ ಪ್ರಭಾವಶಾಲಿ ಇಂಡಿಯನ್. ಅವರು 100 ರೂಪಾಯಿಗೆ ಸಿಗುತ್ತಾರೆ. ಭಾರತ ಮುಜುಗರಕ್ಕೀಡಾಗಲು ಅಂತರಾಷ್ಟ್ರೀಯ ಪಿಆರ್ಗಳನ್ನು ಪಾಕಿಸ್ತಾನಿ ಪತ್ರಕರ್ತರು ಹೈಜಾಕ್ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮಗಾಗಿ ಮಾತನಾಡಲು ನಮ್ಮದೇ ಜನರು ಬೇಕು" ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು.
ನಟಿ ಆ ಟ್ವೀಟನ್ನು ಅಳಿಸಿದ್ದು, ಶಾಹಿನ್ ಭಾಗ್ ಅಜ್ಜಿಯ ಕುರಿತು ಸುಳ್ಳು ಹಾಗೂ ಅವಮಾನಕರ ಹೇಳಿಕೆಗೆ ಕ್ಷಮೆ ಕೋರುವಂತೆ ನಟಿಗೆ ಪಂಜಾಬ್ನ ವಕೀಲರೊಬ್ಬರು ಕೂಡ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
"ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೊದಲು ರಣಾವತ್ ಅವರು ದೃಢಿಕರಿಸಿದ ಮಾಹಿತಿಯನ್ನು ಹೊಂದಿರಬೇಕು ಮತ್ತು ಅವರ ಟ್ವೀಟ್ಗಳ ಬಗ್ಗೆ ಕ್ಷಮೆಯಾಚಿಸಬೇಕು" ಎಂದು ವಕೀಲ ಹರ್ಕಮ್ ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಿರಿಯ ಮಹಿಳೆಯ ಚಿತ್ರವು ಅಕ್ಟೋಬರ್ನದ್ದಾಗಿದೆ. ತಮ್ಮ ಮೇಲಿನ ಅಪಪ್ರಚಾರದ ಬಗ್ಗೆ ಮಾತನಾಡಿದ್ದ ಅವರು, "ತನ್ನ ಬಗ್ಗೆ ನಟಿಯೊಬ್ಬರು ಹೇಳಿಕೆ ನೀಡಿದ್ದಾಗಿ ನನಗೆ ಬೇರೊಬ್ಬರಿಂದ ಮಾಹಿತಿ ಸಿಕ್ಕಿತು. ಅವರೆಂದು ನನ್ನ ಮನೆಗೆ ಬಂದಿಲ್ಲ, ಅದು ತುಂಬಾ ಕೆಟ್ಟ ಹೇಳಿಕೆ. ನನಗೆ 73 ವರ್ಷ ವಯಸ್ಸಾಗಿದ್ದರೂ ಯಾವಾಗ ಬೇಕಿದ್ದರೂ ಪ್ರತಿಭಟನೆಗೆ ಸೇರಲು ಸಿದ್ದ" ಎಂದು ಹೇಳಿದ್ದರು.
ಇದನ್ನೂ ಓದಿ : ಶಾಹೀನ್ ಬಾಗ್ ಖ್ಯಾತಿಯ 82 ವರ್ಷದ ಬಿಲ್ಕೀಸ್ ದಾದಿಯನ್ನು ಪಾಕಿಸ್ತಾನ ಏಜೆಂಟ್ ಎಂದ ನಟಿ ಕಂಗನಾಗೆ ನೊಟೀಸ್
ಪಂಜಾಬ್ನ ಬಟಿಂಡಾ ಜಿಲ್ಲೆಯ ಬಹದ್ದೂರ್ ಗಡ್ ಜಂಡಿಯಾನ್ ಗ್ರಾಮದ 73 ವರ್ಷದ ಈ ಅಜ್ಜಿಯ ಹೆಸರು ಮಹಿಂದರ್ ಕೌರ್. 13 ಎಕರೆ ಭೂಮಿಯನ್ನು ಹೊಂದಿರುವ ಇವರು ಕೃಷಿಯಲ್ಲೇ ತಮ್ಮ ಇಡೀ ಜೀವನವನ್ನು ಕಳೆದಿದ್ದಾರೆ. ಜೊತೆಗೆ ರೈತ ಚಳುವಳಿಯಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ.
ನಟಿ ಕಂಗನಾ ಹೇಳಿಕೆಗೆ, ದಿಲ್ಜಿತ್ ದೋಸಾಂಜ್, ಪ್ರಿನ್ಸ್ ನರುಲ್ಲಾ, ಸರ್ಗುನ್ ಮೆಹ್ತಾ, ಹಿಮಾಂಶಿ ಖುರಾನಾ ಮತ್ತು ಇತರ ಹಲವಾರು ನಟರು ತಮ್ಮ ಟ್ವಿಟರ್ ಖಾತೆಯಲ್ಲಿ ನಟಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published by:
MAshok Kumar
First published:
December 4, 2020, 2:50 PM IST