ಬಾರಾಬಂಕಿ (ಅಕ್ಟೋಬರ್ 17); ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ಮೇಲ್ಜಾತಿಯ ಯುವಕರು ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣ ಇನ್ನೂ ಮರೆಯಾಗಿಲ್ಲ. ಅದರ ಬೆನ್ನಿಗೆ ಝಾನ್ಸಿ ಜಿಲ್ಲೆಯಲ್ಲಿ ಮತ್ತೋರ್ವ ಅಪ್ರಾಪ್ತ ಶಾಲಾ ಬಾಲಕಿಯನ್ನು 8 ಜನ ಪದವಿ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲೇ ಅತ್ಯಾಚಾರವೆಸಗಿ ಸಿಕ್ಕಿಬಿದ್ದಿದ್ದರು. ಹೀಗೆ ಸಾಲು ಸಾಲು ಅತ್ಯಾಚಾರ ಪ್ರಕರಣಗಳಿಂದಾಗಿ ಹೀಗೆ ಸುದ್ದಿಯಲ್ಲಿರುವ ಉತ್ತರಪ್ರದೇಶದಿಂದ ಇದೀಗ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾರ ಬೆಳಿಗ್ಗೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ 16 ವರ್ಷದ ದಲಿತ ಯುವತಿಯೊಬ್ಬಳನ್ನು ಒಬ್ಬ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಅತ್ಯಾಚಾರಸಗಿ ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಆರೋಪಿಗಳು ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿ ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಇದೀಗ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ.
ಹುಡುಗಿಯ ಕುಟುಂಬದ ಪ್ರಕಾರ, “ಆಕೆಯ ತಂದೆ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ತಾಯಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅವರು ತಮ್ಮ ಮೂವರು ಮಕ್ಕಳಿಗೆ ಮನೆಯಲ್ಲಿಯೇ ಇರಬೇಕೆಂದು ಹೇಳಿದ್ದರು. ಆದರೆ, ಒಂದೂವರೆ ಗಂಟೆಯ ನಂತರವೂ ಪೋಷಕರು ಮನೆಗೆ ಹಿಂತಿರುಗದೇ ಇದ್ದಾಗ ಹುಡುಗಿ ತನ್ನ ಮನೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ತಾನೇ ಹೋಗಲು ನಿರ್ಧರಿಸಿದ್ದಾಳೆ.
ಈ ವೇಳೆ ಬಾಲಕಿ ಆಸ್ಪತ್ರೆಗೆ ಹೋಗುತ್ತಿದ್ದವಳು ಕತ್ತಲೆಗೆ ಹೆದರಿ ಮನೆಗೆ ಮರಳಲು ಪ್ರಾರಂಭಿಸಿದ್ದಾಳೆ. ಹಿಂದಿರುಗುವಾಗ, ಅರಣ್ಯ ಇಲಾಖೆಯ ಅತಿಥಿಗೃಹವಿದ್ದು, ಅಲ್ಲಿ ಇಬ್ಬರು ಆರೋಪಿಗಳು ನಿರ್ಜನ ರಸ್ತೆಯಲ್ಲಿ ಓಡಾಡುತ್ತಿದ್ದರು. ಅವರು ಬಾಲಕಿಯನ್ನು ಬಲವಂತಪಡಿಸಿದ್ದಾರೆ. ಆಕೆ ಅದನ್ನು ವಿರೋಧಿಸಿದಾಗ ಇಟ್ಟಿಗೆ ಮತ್ತು ತಮ್ಮ ಬೆಲ್ಟ್‌ಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ.
ತಡರಾತ್ರಿವರೆಗೂ ಮಗಳು ಮನೆಗೆ ಹಿಂದಿರುಗದಿದ್ದಾಗ ಆಕೆಯ ತಂದೆ ಮಗಳನ್ನು ಹುಡುಕುತ್ತಾ ಇದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಶವ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಸತ್ರಿಖ್ ಪ್ರದೇಶದಲ್ಲಿ ಭತ್ತದ ಗದ್ದೆಯಲ್ಲಿ ಬುಧವಾರ ತಡರಾತ್ರಿ ಪತ್ತೆಯಾಗಿದೆ. ಶವ ಪತ್ತೆಯಾದ ಸಂದರ್ಭದಲ್ಲಿ ದೇಹ ಸಂಪೂರ್ಣ ನಗ್ನವಾಗಿತ್ತು ಮತ್ತು ಕೈಗಳನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಮೃತಳ ತಂದೆ ತಿಳಿಸಿದ್ದಾರೆ.
ಡಿಜಿಟಲ್ ಸಾಕ್ಷ್ಯ ಮತ್ತು ನೆಲದ ಮಾಹಿತಿಯ ಆಧಾರದ ಮೇಲೆ ಆರೋಪಿ ದಿನೇಶ್ ಗೌತಮ್ (19) ನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ರಾಮ್ ಸೇವಾಕ್ ಗೌತಮ್ ತಿಳಿಸಿದ್ದಾರೆ.
ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಶಾಲಾ ಬಾಲಕಿಯ ಮೇಲೆ ಕಾಲೇಜು ಆವರಣದಲ್ಲೇ ಅತ್ಯಾಚಾರ; 8 ಜನ ಕಾಮುಕರ ಬಂಧನ!
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾಗಿದೆ. ಹೀಗಾಗಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಇವರ ವಿರುದ್ಧ ಪೋಕ್ಸೋ ಸೇರಿದಂತೆ ಅನೇಕ ಸೆಕ್ಷನ್ಗಳ ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ