ಲಾಹೋರ್: ಟರ್ಕಿ ಮತ್ತು ಸಿರಿಯಾ (Turkey earthquake) ಭೂಕಂಪದಿಂದ ತತ್ತರಿಸಿದೆ. ಕಳೆದ ಸೋಮವಾರ ಸಂಭವಿಸಿದ ದುರಂತದಿಂದ ಸುಮಾರು 35 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಎರಡು ರಾಷ್ಟ್ರಗಳು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಭಾರತ (India) ಸೇರಿ ಹಲವು ರಾಷ್ಟ್ರಗಳು ರಕ್ಷಣಾ ಕಾರ್ಯಕ್ಕೆ (Rescue Operation) ನೆರವಾಗುತ್ತಿವೆ. ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ (Pakistan) ತೀವ್ರ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲೂ ಅಮೆರಿಕಾದಲ್ಲಿರುವ (America) ಪಾಕಿಸ್ತಾನ ಮೂಲದ ಪ್ರಜೆಯೊಬ್ಬ ಭೂಕಂಪದಿಂದ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ನೆರವಾಗಲೂ ಬರೋಬ್ಬರಿ 30 ಮಿಲಿಯನ್ ಡಾಲರ್ (ಸುಮಾರು 249 ಕೋಟಿ ರೂಪಾಯಿ) ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಆ ವ್ಯಕ್ತಿ ತನ್ನ ಹೆಸರನ್ನು ಬಹಿರಂಗ ಪಡಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಸ್ವತಃ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹ್ಬಾಜ್ ಶರೀಫ್ (Pakistan PM Shehbaz Sharif) ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಟರ್ಕಿಸ್ ರಾಯಭಾರಿ ಕಚೇರಿಯಲ್ಲಿ ದೇಣಿಗೆ
" ಅನಾಮಿಕ ವ್ಯಕ್ತಿಯೊಬ್ಬ ಟರ್ಕಿಯ ರಾಯಭಾರಿ ಕಚೇರಿಗೆ ತೆರಳಿದ್ದು, 30 ಮಿಲಿಯನ್ ಡಾಲರ್ ಮೊತ್ತವನ್ನು ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾ ಸಂತ್ರಸ್ತರಿಗಾಗಿ ನೀಡಿದ್ದಾರೆ. ಇದು ಪರೋಪಕಾರದ ಅದ್ಭುತ ಕಾರ್ಯವಾಗಿದೆ ಮತ್ತು ಮಾನವೀಯತೆಯನ್ನು ಜಯಿಸಲು ಅನುವು ಮಾಡಿಕೊಡುತ್ತದೆ " ಎಂದು ಟ್ವೀಟ್ ಮಾಡಿದ್ದಾರೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಲು ಮತ್ತು ಪರಿಹಾರ ಒದಗಿಸಲು ಪಾಕಿಸ್ತಾನ ಸರ್ಕಾರ ಕಳೆದ ವಾರ ವಿಶೇಷ ಸಮಿತಿಯನ್ನು ರಚಿಸಿತ್ತು. ಇದಲ್ಲದೆ, ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಟರ್ಕಿಯಲ್ಲಿನ ಸಂತ್ರಸ್ತರಿಗೆ ನೆರವಾಗಲು ಎರಡು ವಿಮಾನಗಳು ಪರಿಹಾರ ಸಾಮಗ್ರಿಗಳೊಂದಿಗೆ ಟರ್ಕಿಗೆ ಕಳುಹಿಸಲಾಗಿದೆ ಎಂದು ತನ್ನ ಟ್ವಿಟರ್ ಮೂಲಕ ತಿಳಿಸಿದೆ.
ಈಗಾಗಲೇ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಸಾವನ್ನಪ್ಪಿರುವವರ ಸಂಖ್ಯೆ 30 ಸಾವಿರ ಗಡಿ ದಾಟಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ ಈ ಸಂಖ್ಯೆ ಮುಂದಿನ ವಾರಗಳಲ್ಲಿ 50 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. " ನಾವು ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರ ತೆಗೆಯಬೇಕಾಗಿರುವುದರಿಂದ ಸಾವಿನ ಸಂಖ್ಯೆಯನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟ ಎಂದು ನಾನು ಭಾವಿಸುತ್ತೇನೆ, ಆದರೆ ಸಾವಿನ ಸಂಖ್ಯೆ ಈಗಿರುವುದಕ್ಕಿಂತಲೂ ದ್ವಿಗುಣ ಅಥವಾ ಅದಕ್ಕಿಂತಲೂ ಹೆಚ್ಚಾಗಬಹುದು ಎಂಬುದು ನನಗೆ ಖಾತ್ರಿಯಿದೆ " ಎಂದು ವಿಶ್ವಸಂಸ್ಥೆಯ ಪರಿಹಾರ ನಿಧಿ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
130 ಗುತ್ತಿಗೆದಾರರ ಬಂಧನ
ಮಾಧ್ಯಮಗಳ ಪ್ರಕಾರ, ಭೂಕಂಪ ಪೀಡಿತ ಟರ್ಕಿಯ ಪೊಲೀಸರು ದೇಶದ ಆಗ್ನೇಯ ಪ್ರಾಂತ್ಯಗಳಾದ ಸ್ಯಾನ್ಲಿಯುರ್ಫಾ ಮತ್ತು ಗಾಜಿಯಾಂಟೆಪ್‌ನಲ್ಲಿ ಬಹು ಕಟ್ಟಡಗಳು ಕುಸಿದ ನಂತರ ಸುಮಾರು 130 ಗುತ್ತಿಗೆದಾರರನ್ನು ಬಂಧಿಸಿದ್ದಾರೆ. ಸೋಮವಾರ ಈ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪಗಳಲ್ಲಿ ಸುಮಾರು 6,000 ಕಟ್ಟಡಗಳು ಕುಸಿದಿವೆ. ಕಳಪೆ ಗುಣಮಟ್ಟದ ಕಟ್ಟಡಗಳ ನಿರ್ಮಾಣವೇ ಕುಸಿತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು.
ಪವಾಡ ಸದೃಶವಾಗಿ ಬದುಕುಳಿದ ಮಗು
ಶನಿವಾರ ಟರ್ಕಿಯ ಹಟಾಯ್ಯಲ್ಲಿ ಅವಶೇಷಗಳಡಿಯಿಂದ ಎರಡು ತಿಂಗಳ ಮಗುವನ್ನು ರಕ್ಷಿಸಲಾಗಿದೆ. ಭೂಕಂಪ ಸಂಭವಿಸಿದ ಸುಮಾರು 128 ಗಂಟೆಗಳ ನಂತರ ಮಗು ಜೀವಂತವಾಗಿ ಪತ್ತೆಯಾಗಿರುವುದು ನಿಜಕ್ಕೂ ದೊಡ್ಡ ಪವಾಡ ಎನ್ನಬಹುದು. ಈ ಸಂದರ್ಭದಲ್ಲಿ ನೆರೆದಿದ್ದ ಜನ ಚಪ್ಪಾಳೆ ತಟ್ಟುವ ಮೂಲಕ ನೋವಿನಲ್ಲೂ ಸಂಭ್ರಮಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಹಮ್ಲಾ ಭಾಗದಲ್ಲಿ 7 ತಿಂಗಳ ಮಗು, ಗಾಜಿಯಾಟೆಪ್ನಲ್ಲಿ 13 ವರ್ಷದ ಹೆಣ್ಣು ಮಗುವನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ