Bullet Train To Moon: ಭೂಮಿಯಿಂದ ಚಂದ್ರನಿಗೆ ಬುಲೆಟ್ ಟ್ರೈನ್! ಅರರೇ, ಇದೇನಿದು ಮ್ಯಾಜಿಕ್?

ಜಪಾನಿನ ಕ್ಯೊಟೊ ವಿಶ್ವವಿದ್ಯಾಲಯವು ಕಾಜಿಮಾ ಕನ್ಸ್ಟ್ರಕ್ಷನ್ ಅವರೊಂದಿಗೆ ಜೊತೆಗೂಡಿ ಬಾಹ್ಯಾಕಾಶದಲ್ಲಿ ವಾಸಯೋಗ್ಯವಾದ ಕೃತಕ ಸ್ಥಳಗಳು ಹಾಗೂ ಭೂಮಿ, ಚಂದ್ರ ಹಾಗೂ ಮಂಗಳ ಮಧ್ಯೆ ಸಂಪರ್ಕ ಬೆಸೆಯುವಂತಹ ಅಂತರ್ಗ್ರಹ ಟ್ರೈನುಗಳ ನಿರ್ಮಾಣದ ಘೋಷಣೆ ಮಾಡಿರುವುದೇ ಈ ಅಚ್ಚರಿಗೆ ಕಾರಣವಾಗಿದೆ ಎಂದರೂ ತಪ್ಪಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ಜಗತ್ತು ತಂತ್ರಜ್ಞಾನದಲ್ಲಿ (Technology) ಅದರಲ್ಲೂ ವಿಶೇಷವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಸುಧಾರಿತ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೊಂದಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ತಮ್ಮ ಪ್ರಭುತ್ವ ಸಾಧಿಸಲು ಪೈಪೋಟಿಗೆ ನಿಂತಿವೆ ಎಂದರೂ ತಪ್ಪಾಗಲಾರದು. ಈ ಹಿಂದೆ ಚೀನಾ (China) ಚಂದ್ರನ ಮೇಲೆ ತಾನು ಮೊದಲು ಪ್ರಭುತ್ವ ಸಾಧಿಸಬೇಕೆಂದು ಹಾತೊರೆಯುತ್ತಿರುವುದರ ಬಗ್ಗೆ ಈಗಾಗಲೇ ತಿಳಿದಿದೆ. ಈ ನಡುವೆ ಅಮೆರಿಕವು ತನ್ನ ಪ್ರತಿಷ್ಠಿತ ಚಂದ್ರನ ಮಿಷನ್ (Mission Moon) ಅನ್ನು ಕಾರ್ಯಗತಗೊಳಿಸುವಲ್ಲಿ ನಿರತವಾಗಿದೆ. ಈ ಮಧ್ಯೆ ಈಗ ಜಪಾನಿನಿಂದ ಚಂದ್ರನಿಗೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಬಂದಿದ್ದು ಅದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಜಪಾನಿನ ಕ್ಯೊಟೊ ವಿಶ್ವವಿದ್ಯಾಲಯವು ಕಾಜಿಮಾ ಕನ್ಸ್ಟ್ರಕ್ಷನ್ ಅವರೊಂದಿಗೆ ಜೊತೆಗೂಡಿ ಬಾಹ್ಯಾಕಾಶದಲ್ಲಿ ವಾಸಯೋಗ್ಯವಾದ ಕೃತಕ ಸ್ಥಳಗಳು ಹಾಗೂ ಭೂಮಿ, ಚಂದ್ರ ಹಾಗೂ ಮಂಗಳ ಮಧ್ಯೆ ಸಂಪರ್ಕ ಬೆಸೆಯುವಂತಹ ಅಂತರ್ಗ್ರಹ ಟ್ರೈನುಗಳ ನಿರ್ಮಾಣದ ಘೋಷಣೆ ಮಾಡಿರುವುದೇ ಈ ಅಚ್ಚರಿಗೆ ಕಾರಣವಾಗಿದೆ ಎಂದರೂ ತಪ್ಪಿಲ್ಲ.

ಚಂದ್ರನ ಮಿಷನ್ ಗಳ ಪರಿಷ್ಕರಣೆ 
ಹೀಗೊಂದು ಘೋಷಣೆ ಮಾಡಿರುವ ತಂಡವು ಕಳೆದವಾರ ಮಾಧ್ಯಮ ಗೋಷ್ಠಿ ಏರ್ಪಡಿಸಿತ್ತು. ಗೋಷ್ಠಿಯಲ್ಲಿ ತನ್ನ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಈ ಸಂಶೋಧನಾ ತಂಡವು ಭೂಮಿಯ ವಾತಾವರಣ ಹಾಗೂ ಗುರುತ್ವಾಕರ್ಷಣೆಯನ್ನು ಹೋಲುವಂತಹ ಜೀವಂತ "ಗ್ಲಾಸ್" ರಚನೆಗಳ ಅಭಿವೃದ್ಧಿಪಡಿಸುವುದರ ಬಗ್ಗೆ ಹೇಳಿರುವುದಾಗಿ ವರದಿಯಾಗಿದೆ.

ಈಗಾಗಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕವು ತನ್ನ ಪ್ರತಿಷ್ಠಿತ ಚಂದ್ರನ ಮಿಷನ್ ಗಳ ಪರಿಷ್ಕರಣೆ ನಡೆಸುತ್ತಿದೆ, ಚೀನಾ ಮಂಗಳನನ್ನು ಅನ್ವೇಷಿಸಲು ಪ್ರಾರಂಭಿಸಿದೆ, ಇನ್ನೊಂದೆಡೆ ಚೀನಾ ಹಾಗೂ ರಷ್ಯಾ ಜಂಟಿಯಾಗಿ ಚಂದ್ರನ ಮೇಲೆ ಬೇಸ್ ಸ್ಥಾಪಿಸಲು ಯೋಜಿಸುತ್ತಿವೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಮನುಷ್ಯ ಚಂದ್ರನಲ್ಲೂ ವಾಸಿಸಲು ಪ್ರಾರಂಭಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

"ಗ್ಲಾಸ್" - ಚಂದ್ರ ಹಾಗೂ ಮಂಗಳನ ಮೇಲೆ ಭೂಮಿ!
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಭೂಮಿಯು ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿರುವುದರಿಂದ ಮನುಷ್ಯನು ತನ್ನ ಮೂಳೆಗಳ, ಸ್ನಾಯುಗಳ ಸಮಂಜಸವಾದ ಹಾಗೂ ಶಕ್ತಿಯುತವಾದ ಬಳಕೆಯನ್ನು ಮಾಡಬಲ್ಲ. ಆದರೆ, ಗುರುತ್ವಾಕರ್ಷಣೆಯಿಲ್ಲದ ಸಂದರ್ಭದಲ್ಲಿ ಅಂದರೆ ಬಾಹ್ಯಾಕಾಶದಲ್ಲಿ ಮನುಷ್ಯನಿಗೆ ತನ್ನ ದೈಹಿಕ ರಚನೆಗಳ ಸಮರ್ಪಕ ಬಳಕೆ ಮಾಡಲು ಸಾಧ್ಯವಾಗದೆ ಕ್ರಮೇಣ ಅವು ಮೃದುವಾಗುತ್ತವೆ.

ಇದನ್ನೂ ಓದಿ: Cloudburst: ಮೇಘ ಸ್ಫೋಟ ಎಂದರೇನು ಗೊತ್ತಾ? ಅದು ತಂದೊಡ್ಡುವ ಅಪಾಯಗಳೇನು? ಇಲ್ಲಿವೆ ಮಾಹಿತಿ

ಇನ್ನು ಮಕ್ಕಳನ್ನು ಬಾಹ್ಯಾಕಾಶದಲ್ಲಿ ಬೆಳೆಸುವುದರಿಂದ ಅವರ ಮೇಲೆ ಏನೆಲ್ಲ ವಿಪರೀತ ಪರಿಣಾಮಗಳು ಉಂಟಾಗಬಹುದು ಎಂಬುದರ ಬಗ್ಗೆ ನಮ್ಮಲ್ಲಿ ಯಾವ ಮಾಹಿತಿಯೂ ಇಲ್ಲ, ಏಕೆಂದರೆ ಆ ರೀತಿಯ ಒಂದು ಅಧ್ಯಯನವನ್ನೇ ಮಾಡಲಾಗಿಲ್ಲ. ಆದಾಗ್ಯೂ ಮಕ್ಕಳಿಗೆ ತಮ್ಮ ಕಾಲುಗಳ ಮೇಲೆ ತಾವೇ ನಿಂತುಕೊಳ್ಳುವುದು ಬಾಹ್ಯಾಕಾಶದಲ್ಲಿದ್ದಾಗಲಂತೂ ಸಾಧ್ಯವಿಲ್ಲ.

ಅವರೊಮ್ಮೆ ಅಲ್ಲಿ ಬೆಳೆದರೂ ಮುಂದೆ ಭೂಮಿಗೆ ಬಂದಾಗ ಅವರಿಂದ ನಿಲ್ಲಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಗ್ಲಾಸ್ ರಚನೆಯ ಅಭಿವೃದ್ಧಿ ಮಾಡಲಾಗುತ್ತಿದ್ದು ಸಂಶೋಧನಾ ತಂಡವು ಇಪ್ಪತ್ತೊಂದನೆಯ ಶತಮಾನದ ಕೊನೆಯರ್ಧದಲ್ಲಿ ಚಂದ್ರ ಹಾಗೂ ಮಂಗಳನ ಮೇಲೆ ವಲಸೆ ಹೋಗುವ ಬಗ್ಗೆ ಭವಿಷ್ಯ ನುಡಿದಿದೆ.

ಭೂಮಿಯಲ್ಲಿ ಲಭ್ಯವಿರುವಂತಹ ಎಲ್ಲ ಅಂಶಗಳನ್ನು ಒಳಗೊಂಡ "ಗ್ಲಾಸ್"
ಕಾಜಿಮಾ ನಿರ್ಮಾಣ ಸಂಸ್ಥೆ ಹಾಗೂ ಕ್ಯೊಟೊ ವಿವಿಯು ಇದೀಗ ಜಂಟಿಯಾಗಿ ಕೋನಾಕಾರದಲ್ಲಿರುವ ಗ್ಲಾಸ್ ರಚನೆಯ ನಿರ್ಮಾಣದಲ್ಲಿ ತೊಡಗಿಕೊಂಡಿವೆ. ಈ ಗ್ಲಾಸ್ ರಚನೆಯು ಭೂಮಿಯಲ್ಲಿ ಲಭ್ಯವಿರುವಂತಹ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಅಂದರೆ ಈ ರಚನೆಯಲ್ಲಿ ಕೃತಕವಾಗಿ ಸೃಷ್ಟಿಸಲಾದ ಗುರುತ್ವಾಕರ್ಷಣೆ, ಹಸಿರಿನ ಹೊದಿಕೆ, ಸಂಚಾರ ವ್ಯವಸ್ಥೆ, ನೀರಿನ ವ್ಯವಸ್ಥೆ, ಭೂಮಿಯ ವಾತಾವರಣ ಎಲ್ಲವೂ ಇದರಲ್ಲಿರುತ್ತದೆ ಎಂದು ಹೇಳಲಾಗಿದೆ.

ಇದೇ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಸಂಶೋಧನಾ ತಂಡವು ತ್ರಿಡಿ ಮಾದರಿ ಮೂಲಕ ಗ್ಲಾಸ್ ರಚನೆಯ ವಿಶೇಷತೆಯನ್ನೂ ಸಹ ಮಾಧ್ಯಮಗಾರರಿಗೆ ತೋರಿಸಿತು. ಇದೊಂದು ಇನ್ವರ್ಟ್ ಭಂಗಿಯಲ್ಲಿ ನಿಲ್ಲಿಸಲಾದ ಕೋನ್ ಆಗಿದ್ದು 1300 ಅಡಿಗಳಷ್ಟು ಎತ್ತರ ಹಾಗೂ 328 ಅಡಿಗಳಷ್ಟು ತ್ರಿಜ್ಯವನ್ನು ಹೊಂದಿದೆ. 2050ರವರೆಗೆ ಇದರ ಮೊದಲ ಪ್ರೊಟೋಟೈಪ್ ಮಾದರಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಗಿದೆ. ತಂಡದ ಆಸಾಹಿ ಶಿಂಬುನ್ ಅವರ ಪ್ರಕಾರ ಇದರ ಅಂತಿಮ ಅಭಿವೃದ್ಧಿಗೊಂಡು ಕಾರ್ಯಚರಣೆಗೆ ಸಿದ್ಧವಾಗಿರುವ ಮಾದರಿಯು ಪರಿಪೂರ್ಣಗೊಳ್ಳಲು ನೂರು ವರ್ಷಗಳಾದರೂ ಬೇಕಾಗಬಹುದು ಎಂದಿದ್ದಾರೆ.

ಹೆಕ್ಸಾಟ್ರ್ಯಾಕ್
ತಂಡವು ಕೇವಲ ಇಲ್ಲಿಗಷ್ಟೇ ನಿಂತಿಲ್ಲ. ಭವಿಷ್ಯದಲ್ಲಿ ಗ್ರಹಗಳ ಮಧ್ಯೆ ಸಂಚರಿಸಲು ಅನುಕೂಲವಾಗುವಂತಹ ವಿಶೇಷ 1G ಗ್ರ್ಯಾವಿಟಿ ಪಥದಲ್ಲಿ ಚಲಿಸುವ ವಿಶೇಷ ಟ್ರೈನುಗಳ ಅಭಿವೃದ್ಧಿ ಬಗ್ಗೆಯೂ ಮಾತನಾಡಿದ್ದಾರೆ. ಅದನ್ನು ಅವರು ಹೆಕ್ಸಾಟ್ರ್ಯಾಕ್ ಎಂದು ಹೆಸರಿಸಿದ್ದಾರೆ. ಈ ಟ್ರ್ಯಾಕುಗಳ ಮೇಲೆ ಎಲೆಕ್ಟ್ರೋಮ್ಯಾಗ್ನೆಟಿಕ್ ಸಿದ್ಧಾಂತದ ಅಡಿಯಲ್ಲಿ ಬುಲೆಟ್ ಟ್ರೈನು ಮಾದರಿಯ ಹೆಕ್ಸಾಕ್ಯಾಪ್ಸುಲ್ ಆಕಾರದ ಟ್ರೈನು ಚಲಿಸಲಿದ್ದು ಇದು ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲಿದೆ.

ಇದನ್ನೂ ಓದಿ:  GSAT-24 ಸಂವಹನ ಉಪಗ್ರಹ ಉಡಾವಣೆ ಮಾಡಿದ ಭಾರತ- ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ

ಒಟ್ಟಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂಶೋಧನಾ ತಂಡವು ತೋರಿಸಿದ ತಮ್ಮ ಭವಿಷ್ಯದ ಯೋಜನೆಗಳು ಯಾವ ಫಿಕ್ಷನ್ ಆಧಾರಿತ ಚಿತ್ರಗಳಿಗಿಂತ ಕಮ್ಮಿ ಎಂದೆನಿಸದೆ ಇದ್ದರೂ ಭವಿಷ್ಯದಲ್ಲಿ ಇಂತಹ ಒಂದು ತಂತ್ರಜ್ಞಾನ ಅಭಿವೃದ್ಧಿಯಾಗದು ಎಂದು ಹೇಳಲೂ ಸಹ ಯಾವುದೇ ತಾರ್ಕಿಕ ಕಾರಣಗಳು ಇಲ್ಲ. ಹಾಗಾಗಿ ಮುಂದೆ ಇದು ಯಾವ ರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Published by:Ashwini Prabhu
First published: