Elections 2021 - ತಮಿಳುನಾಡಲ್ಲಿ ಕರ್ನಾಟಕ ಸಿಂಗಂಗೆ ಹಿನ್ನಡೆ; ತಿರುಪತಿಯಲ್ಲಿ ರತ್ನಪ್ರಭಾಗೂ ಹಿನ್ನಡೆ

ತಿರುಪತಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ ರತ್ನಪ್ರಭಾ ಠೇವಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ತಮಿಳುನಾಡಿನ ಅರವಾಕುರಿಚ್ಚಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಕೆ ಅಣ್ಣಾಮಲೈ ಕೂಡ ಹಿನ್ನಡೆಯಲ್ಲಿದ್ದಾರೆ.

ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ

ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ

  • Share this:
    ಬೆಂಗಳೂರು(ಮೇ 02): ಕರ್ನಾಟಕದಲ್ಲಿ ಸರ್ಕಾರಿ ಸೇವೆಯಲ್ಲಿದ್ದ ಇಬ್ಬರು ಅಧಿಕಾರಿಗಳು ಇಂದು ರಾಜಕೀಯ ಹೆಜ್ಜೆ ಇಟ್ಟು ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ ರತ್ನಪ್ರಭಾ ಅವರು ಆಂಧ್ರದ ತಿರುಪತಿ ಲೋಕಸಭಾ ಕ್ಷೇತ್ರದಿಂದಲೂ, ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ತಮಿಳುನಾಡಿನ ಅರುವಾಕ್ಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದಲೂ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸಿದ್ದರು. ಇವತ್ತು ಮತ ಎಣಿಕೆ ನಡೆಯುತ್ತಿದ್ದು, ಇಬ್ಬರೂ ಹಿನ್ನಡೆಯಲ್ಲಿದ್ದಾರೆ.

    ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ. ಆದರೆ, ತಿರುಪತಿಯಲ್ಲಿ ಗೆಲುವು ಸಾಧ್ಯವಾಗದಿದ್ದರೂ ಕನಿಷ್ಠ ಎರಡನೇ ಸ್ಥಾನವನ್ನಾದರೂ ಪಡೆದು ಬಲವೃದ್ಧಿಸಿಕೊಳ್ಳುವ ಬಿಜೆಪಿ ನಿರೀಕ್ಷೆ ಹುಸಿಯಾಗಿದೆ. ಟಿಡಿಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ ರತ್ನಪ್ರಭಾ ಅವರು ಮೂರನೇ ಸ್ಥಾನದಲ್ಲಿದ್ದು ಠೇವಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

    ಇನ್ನು, ಕರೂರು ಜಿಲ್ಲೆಯಲ್ಲಿ ತಮ್ಮ ಹುಟ್ಟೂರಿರುವ ಅರವೈಕುರಿಚ್ಚಿ ವಿಧಾನಸಭಾ ಕ್ಷೇತ್ರದಲ್ಲಿ ಕೆ ಅಣ್ಣಾಮಲೈ ಸೋಲುವ ಆತಂಕದಲ್ಲಿದ್ದಾರೆ. ಕರ್ನಾಟಕದ ಸಿಂಗಂ ಎನಿಸಿ ತಮಿಳುನಾಡು ರಾಜಕಾರಣಕ್ಕೆ ಹೊಸ ಆಯಾಮ ಕೊಡುವ ಕಲ್ಪನೆಯೊಂದಿಗೆ ದ್ರಾವಿಡ ನಾಡದಲ್ಲಿ ರಾಜಕೀಯಕ್ಕೆ ಅಡಿ ಇಟ್ಟಿದ್ದ ಅಣ್ಣಾಮಲೈ ಸಾಕಷ್ಟು ಪ್ರಚಾರ ಮಾಡಿ ಗಮನ ಸೆಳೆದಿದ್ದರು. ಟಿವಿ ಡಿಬೇಟ್​ಗಳಲ್ಲಿ ಪಾಲ್ಗೊಂಡು ಹೆಸರುವಾಸಿಯಾಗಿದ್ದರು. ಅವರು ಕನಿಷ್ಠ ತಮ್ಮ ಕ್ಷೇತ್ರ ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಇಲ್ಲಿ ಡಿಎಂಕೆ ಅಭ್ಯರ್ಥಿ ಮುನ್ನಡೆ ಹೊಂದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಣ್ಣಾಮಲೈ ಎರಡನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: Election Results - ಮಾಧ್ಯಮಗಳಲ್ಲಿ ಚರ್ಚೆಗಳಿಂದ ಹಿಂದೆ ಸರಿದ ಕಾಂಗ್ರೆಸ್ ಪ್ರತಿನಿಧಿಗಳು

    ಇನ್ನು, ಬೆಂಗಳೂರಿನ ಮೆಟ್ರೋ ಸೇರಿದಂತೆ ದೇಶದ ಹಲವೆಡೆ ಮೆಟ್ರೋ ರೈಲು ವ್ಯವಸ್ಥೆಯ ರೂವಾರಿಯಾಗಿ ಮೆಟ್ರೋಮ್ಯಾನ್ ಆಗಿಯೇ ಖ್ಯಾತರಾಗಿರುವ ಇ ಶ್ರೀಧರನ್ ಅವರು ಕೇರಳದ ಪಾಲಕ್ಕಾಡ್​ನಲ್ಲಿ ಅಲ್ಪಮತಗಳ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    ಇತರ ಕೆಲವೆಡೆಯ ಪ್ರಮುಖ ಬೆಳವಣಿಗೆಯಲ್ಲಿ ಎಂಎನ್​ಎಂ ಮುಖ್ಯಸ್ಥ ಕಮಲ್ ಹಾಸನ್ ಅವರು ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಎಲ್ಲಕ್ಕಿಂತ ಅತ್ಯಂತ ಪ್ರತಿಷ್ಠಿತ ಕ್ಷೇತ್ರವೆಂದು ಪರಿಗಣಿಸಲಾಗಿರುವ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲಿನ ಭೀತಿಯಲ್ಲಿದ್ದಾರೆ. ಅವರ ಒಂದು ಕಾಲದ ಆಪ್ತ ಸುವೇಂದು ಅಧಿಕಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ಮುನ್ನಡೆ ಹೊಂದಿದ್ದಾರೆ. ಆದರೆ, ಕ್ಷೇತ್ರದಲ್ಲಿ ನಿಕಟ ಪೈಪೋಟಿ ನಡೆಯುತ್ತಿದ್ದು, ಆರಂಭದಿಂದಲೂ ಅಲ್ಪಮತಗಳ ಮುನ್ನಡೆ ಮಾತ್ರ ಮುಂದುವರಿಯುತ್ತಿದೆ.

    ಈವರೆಗಿನ ಟ್ರೆಂಡ್ ಪ್ರಕಾರ, ದೀದಿ ನಂದಿಗ್ರಾಮದಲ್ಲಿ ಹಿನ್ನಡೆಯಲ್ಲಿದ್ದರೂ ಅವರ ಟಿಎಂಸಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ನಾಗಾಲೋಟದಲ್ಲಿದೆ. ಅಲ್ಲಿ ಸತತ ಮೂರನೇ ಬಾರಿ ಟಿಎಂಸಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಬಹುತೇಕ ಖಚಿತವಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ. ಇಲ್ಲಿ ಡಿಎಂಕೆ ಸ್ಪಷ್ಟ ಬಹುಮತ ಪಡೆಯುವುದು ನಿಶ್ಚಿತವೆನ್ನುವ ಸ್ಥಿತಿ ಇದೆ. ಅಸ್ಸಾಮ್​ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ಕೇರಳದಲ್ಲೂ ಎಲ್​ಡಿಎಫ್ ಪಕ್ಷ ಅಧಿಕಾರ ಉಳಿಸಿಕೊಳ್ಳಲಿದೆ. ಪಾಂಡಿಚೆರಿಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಕಾಣುತ್ತಿದೆ.

    ಇನ್ನು, ಕರ್ನಾಟಕದ ಉಪಚುನಾವಣೆಯಲ್ಲಿ, ಮಸ್ಕಿಯಲ್ಲಿ ಕಾಂಗ್ರೆಸ್ ಗೆಲುವಿನತ್ತ ದಾಪುಗಾಲಿಕ್ಕುತ್ತಿದ್ದರೆ, ಬಸವ ಕಲ್ಯಾಣದಲ್ಲಿ ಬಿಜೆಪಿ ಜಯಭೇರಿ ಭಾರಿಸುವ ಸನ್ನಾಹದಲ್ಲಿದೆ. ಆದರೆ, ಕುತೂಹಲ ಮೂಡಿಸಿರುವುದು ಬೆಳಗಾವಿ ಲೋಕಸಭಾ ಉಪಚುನಾವಣೆ. ಇಲ್ಲಿ ಹಾವು ಏಣಿ ಆಟದಂತೆ ಟ್ರೆಂಡ್ ಇದೆ. ಆರಂಭದಲ್ಲಿ ಕಾಂಗ್ರೆಸ್ ಮುಂದಿದ್ದರೆ, ನಂತರ ಬಿಜೆಪಿ ಮುನ್ನಡೆ ಪಡೆಯಿತು. ಈಗ ಕಾಂಗ್ರೆಸ್ ಮತ್ತೊಮ್ಮೆ ಮುನ್ನಡೆ ದಕ್ಕಿಸಿಕೊಂಡಿದೆ. ಅಂತಿಮವಾಗಿ ಇಲ್ಲಿ ವಿಜಯಮಾಲೆ ಯಾರಿಗೆ ಒಲಿಯುತ್ತೆ ಎಂದು ಕಾದುನೋಡಬೇಕು.
    Published by:Vijayasarthy SN
    First published: