ಅಂತಿಮ ಹೋರಾಟಕ್ಕೆ ಅಣ್ಣಾ ಹಜಾರೆ ಅಣಿ; ಕೇಂದ್ರದಿಂದ ರೈತರ ಅವಹೇಳನಕ್ಕೆ ಪ್ರಿಯಾಂಕಾ ಕಿಡಿ

ರೈತರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಬೇಡಿಕೆಗಳನ್ನ ಈಡೇರಿಸಲು ಒಂದು ತಿಂಗಳ ಕಾಲಾವಕಾಶ ನೀಡಿದ್ಧೇನೆ. ಸರ್ಕಾರ ಕ್ರಮ ತೆಗೆದುಕೊಳ್ಳದಿದ್ದರೆ ತಮ್ಮ ಜೀವನದ ಕೊನೆಯ ಮಹಾ ಹೋರಾಟಕ್ಕೆ ತಯಾರಾಗಿದ್ದೇನೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನಕಾರ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ.

ಅಣ್ಣಾ ಹಜಾರೆ

ಅಣ್ಣಾ ಹಜಾರೆ

 • News18
 • Last Updated :
 • Share this:
  ನವದೆಹಲಿ(ಡಿ. 28): ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತೃತ್ವ ವಹಿಸಿ ಯುಪಿಎ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಈಗ ಎನ್​ಡಿಎ ಸರ್ಕಾರದ ವಿರುದ್ಧ ಸೆಟೆದು ನಿಲ್ಲುತ್ತಿದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಶಕ್ತಿಯಾಗಿ ಅಣ್ಣಾ ನಿಂತಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ತಾನು ಮುಂದಿಟ್ಟಿರುವ ಬೇಡಿಕೆಗಳನ್ನ ಈಡೇರಿಸದಿದ್ದರೆ ಉಪವಾಸ ನಿರಶನ ಕೂರುವುದಾಗಿ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ತಾನು ರೈತರ ಪರವಾಗಿ ಧ್ವನಿ ಎತ್ತುತ್ತಲೇ ಬಂದಿದ್ಧೇನೆ. ಆದರೆ ಕೇಂದ್ರ ಸರ್ಕಾರ ಸ್ವಲ್ಪವೂ ಲಕ್ಷ್ಯ ವಹಿಸಿಲ್ಲ. ಖೊಟ್ಟಿ ಭರವಸೆಗಳನ್ನಷ್ಟೇ ನೀಡುತ್ತಿರುವ ಸರ್ಕಾರದ ಬಗ್ಗೆ ತನಗೆ ನಂಬಿಕೆ ಸಂಪೂರ್ಣ ಹೊರಟು ಹೋಗಿದೆ. ಈಗ ತನ್ನ ಬೇಡಿಕೆ ಈಡೇರಿಸಲು ಒಂದು ತಿಂಗಳು ಗಡುವು ಕೇಳಿದೆ. ಹೀಗಾಗಿ, ಜನವರಿ ಅಂತ್ಯದವರೆಗೆ ಸರ್ಕಾರಕ್ಕೆ ಸಮಯಾವಕಾಶ ನೀಡುತ್ತಿದ್ದೇನೆ. ಒಂದು ವೇಳೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಕೂರುತ್ತೇನೆ. ಇದು ತನ್ನ ಕೊನೆಯ ಪ್ರತಿಭಟನಾ ಅಸ್ತ್ರವಾಗಲಿದೆ ಎಂದು ಅವರು ಮಹಾರಾಷ್ಟ್ರದ ರಾಲೆಗನ್ ಸಿದ್ಧಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

  ಎಂಎಸ್ ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸುಗಳನ್ನ ಜಾರಿಗೆ ತರಬೇಕು. ಕೃಷಿ ವೆಚ್ಚ ಮತ್ತು ದರ ಆಯೋಗ (ಸಿಎಸಿಪಿ) ಸಂಸ್ಥೆಗೆ ಸ್ವಾಯತ್ತ ಅಧಿಕಾರ ನೀಡಬೇಕು ಎಂಬುದು 83 ವರ್ಷದ ಅಣ್ಣಾ ಹಜಾರೆ ಅವರ ಪ್ರಮುಖ ಬೇಡಿಕೆಗಳಾಗಿವೆ. ಈ ನಿಟ್ಟಿನಲ್ಲಿ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಡಿಸೆಂಬರ್ 14ರಂದು ಪತ್ರ ಬರೆದಿದ್ದು, ಈ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಪವಾಸ ಸತ್ಯಾಗ್ರ ಕೂರುವಂತೆ ಪತ್ರದಲ್ಲಿ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

  ಇದನ್ನೂ ಓದಿ: Farmers Protest: 32ನೇ ದಿನಕ್ಕೆ ಕಾಲಿಟ್ಟ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ!

  ರೈತರ ಅವಹೇಳನಕ್ಕೆ ಪ್ರಿಯಾಂಕಾ ಕಿಡಿ:

  ರೈತರು ನಡೆಸುತ್ತಿರುವ ಪ್ರತಿಭಟನೆಗಳನ್ನ ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ರೈತರ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಸೋಮವಾರ ಗುಡುಗಿದ್ದಾರೆ. ರೈತರ ಹೋರಾಟದ ಹೆಸರಿನಲ್ಲಿ ಅರ್ಬನ್ ನಕ್ಸಲ್, ಖಲಿಸ್ತಾನೀ, ಗೂಂಡಾಗಳು ಆರ್ಭಟಿಸುತ್ತಿದ್ಧಾರೆ ಎಂದು ಕೇಂದ್ರದ ಕೆಲ ಸಚಿವರು ಮತ್ತು ಬಿಜೆಪಿ ನಾಯಕರುಗಳು ಆರೋಪಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡ ಖಾರವಾಗಿ ಪ್ರತಿಕ್ರಿಯಿಸಿ, ರೈತರು ನ್ಯಾಯಕ್ಕಾಗಿ ನಡೆಸುತ್ತಿರುವ ಪ್ರಾಮಾಣಿಕ ಹೋರಾಟಕ್ಕೆ ಮಸಿ ಬಳಿಯಬೇಡಿ ಎಂದು ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಇಂದು ಧ್ವನಿಗೂಡಿಸಿದ್ದಾರೆ. ರೈತರನ್ನು ನಿಂದಿಸುವುದನ್ನು ಬಿಟ್ಟು, ಅವರೊಂದಿಗೆ ಮಾತನಾಡಿ ಸಮಸ್ಯೆಗಳನ್ನ ಆಲಿಸಿ ಎಂದು ಕೇಂದ್ರಕ್ಕೆ ಅವರು ಕಿವಿಮಾತು ಹೇಳಿದ್ಧಾರೆ.

  ಇದೇ ವೇಳೆ, ರಾಜಸ್ಥಾನ ಘಟಕದ ಕಾಂಗ್ರೆಸ್ ಪಕ್ಷ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಜನ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿದೆ. ರಾಜಸ್ಥಾನ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕೇಂದ್ರದ ಕೃಷಿ ಕಾಯ್ದೆಗಳ ಬಗ್ಗೆ ರೈತರೊಂದಿಗೆ ಸಂವಾದ ನಡೆಸಲಾಗುತ್ತದೆ. ಕಾಯ್ದೆಗಳ ಬಾಧಕಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಇದು ಇವತ್ತಿನಿಂದ ಮೂರು ದಿನಗಳ ಕಾಲ ನಡೆಯಲಿದೆ.

  ಇದನ್ನೂ ಓದಿ: ಕಾಂಗ್ರೆಸ್​ ಸಂಸ್ಥಾಪನಾ ದಿನ ಸಮಾರಂಭಕ್ಕೆ ರಾಹುಲ್ ಗಾಂಧಿ ಗೈರು; ಕಾಲೆಳೆದ ಬಿಜೆಪಿ, ಸಮರ್ಥಿಸಿಕೊಂಡ ಕೈ ನಾಯಕರು!

  ಕಳೆದ ನಾಲ್ಕೈದು ವಾರಗಳಿಂದ ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿ ಗಡಿಗಳ ಸಮೀಪ ನಿರಂತರವಾಗಿ ಪ್ರತಿಭಟನೆಗಳನ್ನ ನಡೆಸುತ್ತಲೇ ಇದ್ದಾರೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯಬೇಕು, ವಿದ್ಯುತ್ ಕಾಯ್ದೆ ತಿದ್ದುಪಡಿ ಕೈಬಿಡಬೇಕು, ಎಂಎಸ್​ಪಿಯನ್ನು ಕಾನೂನಾಗಿ ಮಾಡಬೇಕು ಎಂಬುದು ರೈತರ ಕೆಲ ಪ್ರಮುಖ ಬೇಡಿಕೆಗಳು. ಮುಂದಿನ ದಿನಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್​ಪಿ) ಯನ್ನ ಕೈಬಿಡಲಾಗುತ್ತದೆ ಎಂಬ ಭಯವೇ ಆ ಭಾಗಗಳ ರೈತರನ್ನು ಇಷ್ಟು ಆಕ್ರೋಶಭರಿತರನ್ನಾಗಿಸಿರುವುದು. ಕೇಂದ್ರ ಸರ್ಕಾರ ಕೂಡ ತನ್ನ ಹಠ ಮುಂದುವರಿಸಿದ ಪರಿಣಾಮ ರೈತರ ಜೊತೆ ನಡೆದ ಐದು ಸುತ್ತುಗಳ ಮಾತುಕತೆ ಸ್ವಲ್ಪವೂ ಫಲಪ್ರದವಾಗಿಲ್ಲ. ಮೂರು ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರದ ಸುಧಾರಣಾ ಕ್ರಮದ ಭಾಗವಾಗಿದ್ದು, ಅವನ್ನು ಮಾತ್ರ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಹೇಳಿದೆಯಾದರೂ ಎಂಎಸ್​ಪಿ ವಿಚಾರದಲ್ಲಿ ರೈತರ ಬೇಡಿಕೆಗೆ ಮಣಿಯುವ ಸಾಧ್ಯತೆ ಇದೆ. ಒಂದು ವೇಳೆ ಎಂಎಸ್​ಪಿಯನ್ನು ಕಾನೂನಾಗಿ ರೂಪಿಸಲು ಕೇಂದ್ರ ಲಿಖಿತ ಭರವಸೆ ನೀಡಿದರೆ ರೈತರ ಪ್ರತಿಭಟನೆ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆ ಇದೆ.
  Published by:Vijayasarthy SN
  First published: