ಆಕೆ ಗಂಡನಿಂದ ಡೈವೋರ್ಸ್ ಪಡೆದ ಮಹಿಳೆ. ಹೊಟ್ಟೆಪಾಡಿಗಾಗಿ ಮತ್ತು ಮಗನ ಉತ್ತಮ ಭವಿಷ್ಯಕ್ಕಾಗಿ ಆಕೆ ದುಡಿಯಲೇ ಬೇಕಿತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಆಫೀಸಿನಲ್ಲಿ ಕೆಲಸ ಮಾಡಿ ಮನೆಗೆ ಬಂದಾಗ ಸೋಫಾ ಮೇಲೆ ಕುಳಿತಿದ್ದ ಪುಟ್ಟ ಕಂದನ ಅವತಾರ ನೋಡಿ ಆಕೆ ರೊಚ್ಚಿಗೆದ್ದಿದ್ದಳು. ಮಗನ ಡೈಪರ್ ಬದಲಾಯಿಸಲು ಶರ್ಟ್ ಎತ್ತಿದ ಆ ಮಹಿಳೆ ಆತನ ಟೀಚರ್ಗೆ ಫೋನ್ ಮಾಡಿ ತನ್ನ ಆಕ್ರೋಶವನ್ನು ಹೊರಹಾಕಿದಳು. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತೀರಾ?
ಇದು ನಡೆದಿದ್ದು ಫ್ಲೋರಿಡಾದಲ್ಲಿ. ತಾನು ಆಫೀಸಿಗೆ ಹೋದಾಗ ಪುಟ್ಟ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದು ಎಂದು ಹೆದರ್ ಚಿಸಮ್ ಎಂಬ ಮಹಿಳೆ ಮಗನನ್ನು ಡೇಕೇರ್ಗೆ ಸೇರಿಸಿದ್ದರು. ಅಲ್ಲಿನ ಟೀಚರ್ಗಳೇ ಬೆಳಗ್ಗೆಯಿಂದ ಸಂಜೆಯವರೆಗೆ ಮಗುವಿನ ಎಲ್ಲ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿದ್ದರು. ಕೆಲಸದ ಒತ್ತಡದಲ್ಲಿ ಕೆಲವು ದಿನಗಳಿಂದ ಆತನ ಬ್ಯಾಗ್ ಪರೀಕ್ಷಿಸಲು ಸಾಧ್ಯವಾಗಿರಲಿಲ್ಲ. ಆ ಮಗುವಿನ ಡೈಪರ್ ಖಾಲಿಯಾಗಿದ್ದರಿಂದ
ಶಿಕ್ಷಕಿ ಹೆದರ್ಗೆ ಒಂದು ನೋಟ್ ಕಳುಹಿಸಿದ್ದರು.
ಆದರೆ, ಹೆದರ್ ತನ್ನ ಮಗನ ಬ್ಯಾಗ್ ಪರೀಕ್ಷಿಸದ ಕಾರಣ ಆ ನೋಟ್ ಆಕೆಗೆ ಕಂಡಿರಲಿಲ್ಲ. ಇದರಿಂದ ಆ ಮಗುವಿನ ಹೊಟ್ಟೆಯ ಮೇಲೆ ಮಾರ್ಕರ್ನಲ್ಲಿಯೇ ನೋಟ್ ಬರೆದು ಕಳುಹಿಸಿರುವ ಶಿಕ್ಷಕಿ ಆ ಮಗುವಿನ ಅಮ್ಮನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಮುಂದುವರೆದ ಕರೋನಾ ಅಟ್ಟಹಾಸ; ಪಾಸ್ಪೋರ್ಟ್ ಹರಿದುಹಾಕಿದ ನಾಯಿಗೆ ಥ್ಯಾಂಕ್ಸ್ ಎಂದ ಮಹಿಳೆ!
'ಅಮ್ಮ, ನನ್ನ ಡೈಪರ್ ಖಾಲಿ ಆಗಿದೆ. ದಯವಿಟ್ಟು ನನ್ನ ಬ್ಯಾಗ್ನಲ್ಲಿರುವ ನೋಟ್ ನೋಡು' ಎಂದು ಟೀಚರ್ ಆ ಹುಡುಗನ ಹೊಟ್ಟೆ ಮೇಲೆ ಬರೆದು ಕಳುಹಿಸಿದ್ದರು. ಅಮ್ಮ ಆಫೀಸಿನಿಂದ ಬಂದಕೂಡಲೆ ಹೊಟ್ಟೆಯ ಮೇಲೆ ಬರೆದಿರುವುದನ್ನು ತೋರಿಸು ಎಂದು ಟೀಚರ್ ಹೇಳಿದ್ದರಿಂದ ಆ ಬಾಲಕ ಶರ್ಟ್ ಎತ್ತಿಕೊಂಡು ಸೋಫಾ ಮೇಲೆ ಮಲಗಿದ್ದ. ಆಫೀಸಿನಿಂದ ಬರುತ್ತಿದ್ದಂತೆ ಮಗನ ಅವತಾರವನ್ನು ನೋಡಿದ ಹೆದರ್ ಕೋಪದಿಂದ ಟೀಚರ್ಗೆ ಫೋನ್ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಈ ಬಗ್ಗೆ
ಫೇಸ್ಬುಕ್ನಲ್ಲೂ ಫೋಟೋ ಹಾಕಿರುವ ಹೆದರ್ ತನ್ನ ಆಕ್ರೋಶವನ್ನು ಹೊರಹಾಕಿದ್ದಾರೆ. ನಾನು ಸಿಂಗಲ್ ಪೇರೆಂಟ್. ಕೆಲಸದ ಬಗ್ಗೆಯೂ ಗಮನ ಕೊಡಬೇಕು, ಮನೆ, ಮಗನ ಬಗ್ಗೆಯೂ ಗಮನ ಕೊಡಬೇಕು. ನಾನು ಒಂದು ದಿನವೂ ಮಗನ ನೋಟ್ ಓದಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ನನ್ನ ಪುಟ್ಟ ಕಂದನ ಮೈಮೇಲೆ ಮಾರ್ಕರ್ನಲ್ಲಿ ಬರೆದು ಕಳುಹಿಸಿರುವುದು ಎಷ್ಟರ ಮಟ್ಟಿಗೆ ಸರಿ? ಇದನ್ನು ನೋಡಿ ನಾನು ಶಾಕ್ ಆದೆ. ಇದಕ್ಕೂ ಮೊದಲು ಕೂಡ ಆ ಟೀಚರ್ ಇದೇ ರೀತಿ ವರ್ತಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಹೊಟ್ಟೆನೋವಿನಿಂದ ನರಳುತ್ತಿದ್ದ ಬಾಲಕಿಗೆ ಆಪರೇಷನ್ ಮಾಡಿದ ವೈದ್ಯರಿಗೆ ಕಾದಿತ್ತು ಶಾಕ್!
ನನಗೊಂದು ಫೋನ್ ಮಾಡಿ ಡೈಪರ್ ಖಾಲಿಯಾಗಿದೆ, ಕಳುಹಿಸಿಕೊಡಿ ಎಂದು ಕೇಳಿದ್ದರೆ ನಾನು ಕಳುಹಿಸುತ್ತಿದ್ದೆ. ಬೇರೆ ಟೀಚರ್ಗಳು ಅದೇರೀತಿ ಮಾಡುತ್ತಾರೆ. ಆದರೆ, ಮಗುವಿನ ಮೈಮೇಲೆ ಮಾರ್ಕರ್ನಲ್ಲಿ ಬರೆದಿರುವುದು ದೊಡ್ಡ ತಪ್ಪು. ಆ ಬರಹವನ್ನು ಅಳಿಸಲು ಎಷ್ಟೇ ಪ್ರಯತ್ನಪಟ್ಟರೂ ಆಗುತ್ತಿಲ್ಲ ಎಂದು ಹೆದರ್ ತಮ್ಮ ಫೇಸ್ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ