ವಿಜಯವಾಡ (ಜೂನ್ 24); ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರೋಧ ಪಕ್ಷದಲ್ಲಿದ್ದಾಗ 2016 ರಲ್ಲಿ ಅಂದಿನ ಸಿಎಂ, ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ವಿರುದ್ಧ ಅಮರಾವತಿ ಭೂಮಿ ಅಕ್ರಮದ ಆರೋಪ ಮಾಡಿದ್ದರು. ಅಲ್ಲದೆ, ನ್ಯಾಯಾಲಯದ ಕಾರ್ಯವೈಖರಿಯನ್ನೂ ಟೀಕಿಸಿ ಹಲವು ಆರೋಪಗಳನ್ನು ಮಾಡಿದ್ದರು. ಜಗನ್ ಮೋಹನ್ ರೆಡ್ಡಿ ಅವರ ಈ ವರ್ತನೆಯನ್ನು ಹಲವರು ಟೀಕಿಸಿದ್ದರು. ಈ ಸಂಬಂಧ ಇಂದು ಪರಿಷ್ಕರಣೆ ನಡೆಸಿರುವ ಹೈಕೋರ್ಟ್ಗೆ ಜಗನ್ ಮೋಹನ್ ರೆಡ್ಡಿ ವಿರುದ್ಧ 11 ಸುಮೊಟೋ ಕೇಸ್ ದಾಖಲಿಸಿದೆ. ಆಂಧ್ರಪ್ರದೇಶ ಇತಿಹಾಸದಲ್ಲಿ ಸಿಎಂ ವಿರುದ್ಧ ದಾಖಲಾದ ಅತಿಹೆಚ್ಚು ಸುಮೋಟೋ ಪ್ರಕರಣ ಇದಾಗಿದೆ.
2016ರಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಹೇಳಿಕೆಗಳನ್ನು ಆಧರಿಸಿ ಅನಂತಪುರ ಮತ್ತು ಗುಂಟೂರು ಜಿಲ್ಲೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಪರಿಶೀಲನೆ ನಡೆಸಿರುವ ಪೊಲೀಸರು, ಕ್ರಿಯಾಶೀಲ ಸಾಕ್ಷ್ಯಗಳ ಅನುಪಸ್ಥಿತಿಯಲ್ಲಿ ಅಂತಿಮ ವರದಿಗಳನ್ನು ಸಲ್ಲಿಸಿದ್ದರು.
ಈ ವರದಿ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿರುವ ಆಂಧ್ರ ಹೈಕೋರ್ಟ್‌ನ ನ್ಯಾಯಮೂರ್ತಿ ಕಣ್ಣಂಗೇಟಿ ಲಲಿತಾ ಅವರು, ಹೈಕೋರ್ಟ್ ಆಡಳಿತಾತ್ಮಕ ಸಮಿತಿ ಶಿಫಾರಸ್ಸಿನಂತೆ ಸುಮೊಟು ಕೇಸ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಪೊಲೀಸರಿಗೆ ನೋಟಿಸ್ ನೀಡುವುದನ್ನು ತಡೆದಿದ್ದಾರೆ.
ಪ್ರಕರಣಗಳನ್ನು ರದ್ದುಗೊಳಿಸಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ಅರ್ಜಿದಾರರು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಕೆಳ ನ್ಯಾಯಾಲಯಗಳು ಪ್ರಕರಣಗಳನ್ನು ರದ್ದುಗೊಳಿಸಿದ್ದವು. ಆದರೆ, ನ್ಯಾಯಾಲಯದ ಆಡಳಿತ ಸಮಿತಿಯು ಅದರಲ್ಲಿ ದೋಷವನ್ನು ಕಂಡುಹಿಡಿದಿದ್ದು ಆಡಳಿತಾತ್ಮಕ ನಿರ್ಧಾರವನ್ನು ತೆಗೆದುಕೊಂಡಿತು.
ಸಿಆರ್ ಪಿಸಿ ಸೆಕ್ಷನ್ 397, 401, 482 ಮತ್ತು 483 ರ ಅಡಿಯಲ್ಲಿ ಹೈಕೋರ್ಟ್ ತನ್ನ ಅಧಿಕಾರವನ್ನು ಬಳಸಿಕೊಂಡು ಸುಮೊಟು ಕೇಸ್ ದಾಖಲಿಸಲು ಸಾಧ್ಯವಿಲ್ಲ. ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಆಡಳಿತಾತ್ಮಕ ನಿರ್ಧಾರವನ್ನು ಆಧರಿಸಿ ಸುಮೊಟು ಕೇಸ್ ದಾಖಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಶ್ರೀರಾಮ್ ವಾದಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ