ಆಂಧ್ರಪ್ರದೇಶದ ಸರ್ಕಾರ ಅಕ್ರಮವಾಗಿ ಫೋನ್ ಟ್ಯಾಪ್ ಮಾಡುತ್ತಿದೆ; ಪ್ರಧಾನಿಗೆ ಪತ್ರ ಬರೆದ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶದ ಆಡಳಿತ ಪಕ್ಷ ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧದ ಕಾನೂನುಬಾಹಿರ ಚಟುವಟಿಕೆಗಳನ್ನು (ಫೋನ್ ಟ್ಯಾಪಿಂಗ್) ಪರಿಶೀಲಿಸಲು ಕೇಂದ್ರ ಸರ್ಕಾರ ತಕ್ಷಣದ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಚಂದ್ರಬಾಬು ನಾಯ್ಡು-ಜಗನ್ಮೋಹನ್ ರೆಡ್ಡಿ.

ಚಂದ್ರಬಾಬು ನಾಯ್ಡು-ಜಗನ್ಮೋಹನ್ ರೆಡ್ಡಿ.

  • Share this:
ಹೈದರಾಬಾದ್ (ಆಗಸ್ಟ್ 17); ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ್ ರೆಡ್ಡಿ ಸರ್ಕಾರ ರಾಜ್ಯದ ವಿರೋಧ ಪಕ್ಷಗಳ ಮುಖಂಡರು, ವಕೀಲರು, ಪತ್ರಕರ್ತರು ಮತ್ತು ಅನೇಕ ಕಾರ್ಯಕರ್ತರುಗಳ ಫೋನ್ ಸಂಭಾಷಣೆಯನ್ನು ಅಕ್ರಮವಾಗಿ ಕದ್ದು ಅಲಿಸುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷದ ನಾಯಕ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಆಂಧ್ರಪ್ರದೇಶದ ಗುಪ್ತಚರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಹಲವು ಪ್ರಮುಖರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಸ್ವತಃ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಬಂಡಾಯ ಸಂಸದ ಕೆ. ರಘು ರಾಮ ಕೃಷ್ಣ ರಾಜು ಕಳೆದ ಭಾನುವಾರ ಆರೋಪಿಸಿದ್ದರು.

ಇದರ ಬೆನ್ನಿಗೆ ಜಗಮೋಹನ್‌ ರೆಡ್ಡಿ ಸರ್ಕಾರ ಫೋನ್‌ ಟ್ಯಾಪಿಂಗ್ ಮಾಡುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು, "ವೈಎಸ್‌ಆರ್‌ಸಿಪಿ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ತನ್ನದೇ ಆದ ರಾಜಕೀಯ ಲಾಭಕ್ಕಾಗಿ ಅಕ್ರಮವಾಗಿ ಅನೇಕ ವಿರೋಧ ಪಕ್ಷದ ನಾಯಕರ ಫೋನ್‌ಗಳನ್ನು ಟ್ಯಾಪ್ ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.

ಪತ್ರದಲ್ಲಿ ಇಂಡಿಯನ್ ಟೆಲಿಗ್ರಾಫ್ ಆಕ್ಟ್, 1885 ರ ಸೆಕ್ಷನ್ 5 (2) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ಅನ್ನು ಉಲ್ಲೇಖಿಸಿರುವ ಚಂದ್ರಬಾಬು ನಾಯ್ಡು, "ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಂತಹ ಪ್ರಕರಣಗಳಲ್ಲಿ ಮಾತ್ರ ಫೋನ್ ಟ್ಯಾಪಿಂಗ್ ಮಾಡಲು ಕಾನೂನು ಅನುಮತಿಸುತ್ತದೆ. ಆದರೆ, ಈ ಸರ್ಕಾರ ಸಂವಿಧಾನದ 19 ಮತ್ತು 21ರ ವಿಧಿಯನ್ವಯ ಮೂಲಭೂತ ಹಕ್ಕುಗಳ ವಿರುದ್ಧವಾಗಿದ್ದು, ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ" ಎಂದು ವಿಷಾಧಿಸಿದ್ದಾರೆ.

"ಸರ್ಕಾರದ ಅಸಮರ್ಪಕ ಕಾರ್ಯದ ವಿರುದ್ಧ ಧ್ವನಿ ಎತ್ತುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ವಕೀಲರು, ಪತ್ರಕರ್ತರು ಮತ್ತು ಕಾರ್ಯಕರ್ತರಲ್ಲದೆ, ವೈಎಸ್‌ಆರ್‌ಸಿಪಿ ಈಗ ನ್ಯಾಯಾಂಗವನ್ನು ಸಹ ಗುರಿಯಾಗಿಸಿಕೊಂಡಿದೆ ಎಂದು ತೋರುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸಿಕೊಂಡು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಫೋನ್‌ಗಳನ್ನು ಟ್ಯಾಪ್ ಮಾಡುತ್ತಿದ್ದಾರೆ. ಫೋನ್ ಟ್ಯಾಪಿಂಗ್ ಅನ್ನು ಅಕ್ರಮ ಸಾಫ್ಟ್‌ವೇರ್ ಮೂಲಕ ಮಾಡಲಾಗುತ್ತಿದೆ. ಇದು ದೀರ್ಘಾವಧಿಯಲ್ಲಿ ರಾಷ್ಟ್ರೀಯ ಭದ್ರತೆಗೆ ತೊಂದರೆಯನ್ನು ಉಂಟುಮಾಡಬಹುದು" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಡಿಜೆ ಹಳ್ಳಿ ಗಲಭೆಗೆ ಕಾರಣರು ಸ್ಥಳೀಯರಲ್ಲ; ನ್ಯೂಸ್‌18ಗೆ ಧರ್ಮಗುರು ಮೌಲಾನಾ ಫಿರ್ದೋಸ್ ಪಾಷಾ ಸ್ಪಷ್ಟನೆ

"ಆಂಧ್ರಪ್ರದೇಶದ ಆಡಳಿತ ಪಕ್ಷ ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧದ ಕಾನೂನುಬಾಹಿರ ಚಟುವಟಿಕೆಗಳನ್ನು (ಫೋನ್ ಟ್ಯಾಪಿಂಗ್) ಪರಿಶೀಲಿಸಲು ಕೇಂದ್ರ ಸರ್ಕಾರ ತಕ್ಷಣದ ಮತ್ತು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮತ್ತೊಂದೆಡೆ, ವೈಎಸ್‌ಆರ್‌ಸಿಪಿ ಬಂಡಾಯ ಸಂಸದ ಕೆ ರಘು ರಾಮ ಕೃಷ್ಣ ರಾಜು ಅವರು ಕೇಂದ್ರ ಗೃಹ ಕಾರ್ಯದರ್ಶಿ ಎ ಕೆ ಭಲ್ಲಾ ಅವರಿಗೆ ಪತ್ರ ಬರೆದಿದ್ದು, "ರೊಮೇನಿಯಾ, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ದಕ್ಷಿಣ ಕೊರಿಯಾ ಮತ್ತು ಸ್ಪೇನ್ ಸಂಕೇತಗಳನ್ನು ಪ್ರದರ್ಶಿಸುವ ವಿಚಿತ್ರ ಸಂಖ್ಯೆಗಳಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ದಯವಿಟ್ಟು ಕ್ರಮ ಕೈಗೊಳ್ಳಿ" ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Published by:MAshok Kumar
First published: