ಆಂಧ್ರದಲ್ಲಿ ಕೊರೊನಾ ಭಯದಿಂದ 15 ತಿಂಗಳುಗಳಿಂದ ಮನೆಯಿಂದ ಹೊರ ಬರದ ಕುಟುಂಬ.. ಭಯಾನಕ ಸ್ಥಿತಿಯಲ್ಲಿದ್ದ ಪತ್ನಿ-ಮಕ್ಕಳು

ಕುಟುಂಬಸ್ಥರು ಕೊರೊನಾ ಭಯದಿಂದ ಖಿನ್ನತೆಗೆ ಒಳಗಾಗಿ ಆರೋಗ್ಯ ಕ್ಷೀಣಿಸಿದೆ. ಹಲವು ದಿನಗಳಿಂದ ಸ್ನಾನವನ್ನೂ ಮಾಡಿಲ್ಲ. ಮನೆಯಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿ ಶುಚಿತ್ವವಿಲ್ಲದೆ ಭಯಾನಕ ಪರಿಸ್ಥಿತಿಯಲ್ಲಿ ಬದುಕುತ್ತಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೂರ್ವ ಗೋದಾವರಿ: ಕೊರೊನಾ 2ನೇ ಅಲೆ ತಗ್ಗಿದ್ದು ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಆದರೆ ಸೋಂಕಿನಿಂದ ಯಾರೂ ಸಂಪೂರ್ಣವಾಗಿ ಸುರಕ್ಷಿತರಲ್ಲ. ಕೊರೊನಾ 3ನೇ ಅಲೆಯ ಭೀತಿಯಿರುವುದರಿಂದ ಮಾಸ್ಕ್​​, ಸಾಮಾಜಿಕ ಅಂತರದೊಂದಿಗೆ ಜೀವನ ನಡೆಸುವ ಅನಿವಾರ್ಯತೆಯಿದೆ. ಆದರೆ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿನ ಕುಟುಂಬವೊಂದು ಕೊರೊನಾ ಭಯದಿಂದ 15 ತಿಂಗಳುಗಳಿಂದ ಗುಡಿಸಿಲಿನಂತ ಮನೆಯಿಂದಲೇ ಹೊರ ಬಂದಿಲ್ಲ. ಪೂರ್ವ ಗೋದಾವರಿಯ ಕಡಲಿ ಎಂಬ ಗ್ರಾಮದ ಕುಟುಂಬ ಕಳೆದ 15 ತಿಂಗಳುಗಳಿಂದ ಮನೆಯಲ್ಲೇ ಬಂಧಿಯಾಗಿದ್ದಾರೆ. ಗ್ರಾಮದ ಯಾರ ಸಂಪರ್ಕಕ್ಕೆ ಬರದೇ ನಿಗೂಢವಾಗಿ ಬದುಕುತ್ತಿರುವುದು ಬಯಲಾಗಿದೆ.

ಜಾನು ಬೆನ್ನಿ (50) ರತ್ಮಮ್ಮ(45), ಕಾಂತಮಣಿ(32) ಹಾಗೂ ರಾಣಿ(30) ಕಳೆದ ಒಂದೂವರೆ ವರ್ಷದಿಂದ ಹೊರ ಬಂದು ಸೂರ್ಯನ ಬೆಳಕನ್ನೇ ನೋಡಿಲ್ಲ. ಇವರ ಪಕ್ಕದ ಮನೆಯ ವ್ಯಕ್ತಿ ಕೋವಿಡ್​ನಿಂದ ಮೃತಪಟ್ಟಾಗಿನಿಂದ ಇವರು ಅತೀವ ಭೀತಿಗೆ ಒಳಗಾಗಿದ್ದಾರೆ. ಹೊರ ಬಂದರೆ ಸೋಂಕು ತಗುಲಿ ತಾವು ಸಾವನ್ನಪ್ಪುತ್ತೇವೆ ಎಂದು ಹೆದರಿಯಿಂದ ಬಂಧಿಯಾಗಿದ್ದರು. ಹಲವು ಬಾರಿ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಮನೆ ಬಾಗಿಲು ತಟ್ಟಿದರು ಯಾರೂ ಪ್ರತಿಕ್ರಿಯಿಸುತ್ತಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿದುಕೊಂಡು ಆಶಾ ಕಾರ್ಯಕರ್ತೆಯರು ಹೊರಟು ಹೋಗುತ್ತಿದ್ದರು.

ಆದರೆ ನಿನ್ನೆ ಸರ್ಕಾರದ ಯೋಜನೆಗಾಗಿ ಬೆರಳಚ್ಚು ಪಡೆಯಲು ಮನೆ ಬಳಿ ತೆರಳಿದರೆ ಯಾರೊಬ್ಬರೂ ಪ್ರತಿಕ್ರಿಯಿಸಿಲ್ಲ. ಕುಟುಂಬಸ್ಥರು ಮನೆಯಲ್ಲಿದ್ದರು ಹೊರಬರದನ್ನು ಕಂಡ ಗ್ರಾಮದ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲು ತೆರೆದಾಗ ಎಲ್ಲರಿಗೂ ಗಾಬರಿಯಾಗಿದೆ. ಸರಿಯಾಗಿ ಆಹಾರ ಸೇವಿಸದೆ, ಕೂದಲು ಕತ್ತರಿಸದೇ ಕುಟುಂಬಸ್ಥಸ್ಥರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬಸ್ಥರು ಕೊರೊನಾ ಭಯದಿಂದ ಖಿನ್ನತೆಗೆ ಒಳಗಾಗಿ ಆರೋಗ್ಯ ಕ್ಷೀಣಿಸಿದೆ. ಹಲವು ದಿನಗಳಿಂದ ಸ್ನಾನವನ್ನೂ ಮಾಡಿಲ್ಲ. ಮನೆಯಲ್ಲೇ ಮಲ-ಮೂತ್ರ ವಿಸರ್ಜನೆ ಮಾಡಿ ಶುಚಿತ್ವವಿಲ್ಲದೆ ಭಯಾನಕ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ತಿಳಿದು ಬಂದಿದೆ. ಕೂಡಲೇ ಕುಟುಂಬಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 2-3 ದಿನಗಳ ಕಾಲ ಹೀಗೆ ಇದ್ದರೆ ಕುಟುಂಬಸ್ಥರು ದುರಂತ ಅಂತ್ಯ ಕಾಣುತ್ತಿದ್ದರು ಎಂದು ಗ್ರಾಮದ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ಸ್ಥಿತಿಯಲ್ಲಿ ಇನ್ನು ಕೆಲವು ದಿನ ಇದ್ದಿದ್ದರೆ, ಅವರು ಸತ್ತೇ ಹೋಗುತ್ತಿದ್ದರು. ಸಣ್ಣ ಟೆಂಟ್ ಒಂದರಲ್ಲಿ ಅವರು ಬದುಕುತ್ತಿದ್ದರು. ನೈಸರ್ಗಿಕ ಕರೆಗಳನ್ನೂ ಅದರೊಳಗೇ ಮುಗಿಸುತ್ತಿದ್ದರು. ಅವರನ್ನು ಹೊರ ಬರುವಂತೆ ಕರೆದಾಗ, ಹೊರಗೆ ಬಂದರೆ ಸತ್ತುಹೋಗುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದರು. ಅವರಿಗೆ ಮನೆ ನಿವೇಶನ ಹಂಚಿಕೆಯಾಗಿದ್ದರಿಂದ ಅವರಿಂದ ಸಹಿ ಪಡೆಯಲು ಹೋಗಿದ್ದಾಗ ಈ ಸಂಗತಿ ನಮಗೆ ಗೊತ್ತಾಗಿತ್ತು. ಮನೆಯ ಯಜಮಾನ ಮಾತ್ರ ಆಗಾಗೆ ಹೊರಗೆ ಬರುತ್ತಿದ್ದರು. ಉಳಿದ ಮೂವರು 15 ತಿಂಗಳಿನಿಂದ ಹೊರಗಿನ ಬೆಳಕನ್ನೇ ನೋಡಿರಲಿಲ್ಲ ಎಂದು ಸ್ಥಳೀಯರು  ಹೇಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: