ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಖಾತೆಯನ್ನು ಟ್ವಿಟ್ಟರ್ ತಾಣವು ಅಮಾನತು ಮಾಡಿದ್ದನ್ನು ಪ್ರತಿಭಟಿಸಿ ಆಂಧ್ರ ಪ್ರದೇಶದಲ್ಲಿನ ಕಾಂಗ್ರೆಸ್ ಕಾರ್ಯಕರ್ತರು “ಟ್ವಿಟ್ಟರ್ ಬರ್ಡ್” (ಟ್ವಿಟ್ಟರ್ ಸಂಕೇತಿಸುವ ಪಕ್ಷಿ) ಅನ್ನು ಎಣ್ಣೆಯಲ್ಲಿ ಫ್ರೈ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.ಆಗಸ್ಟ್ ಆರಂಭದಲ್ಲಿ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ತಾಣದ ನಡೆ ವಿರೋಧಿಸಿ ಮೃತ ಗೌಜಲಕ್ಕಿಯನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಮುಂಬೈನ ಟ್ವಿಟ್ಟರ್ ಕಚೇರಿಗೆ ಕೊರಿಯರ್ ಮೂಲಕ ಕಳುಹಿಸಿದ್ದಾರೆ.
ಈ ಸಂಬಂಧ ಕಾರ್ಯಕರ್ತರು ಹಕ್ಕಿಯನ್ನು ಫ್ರೈ ಮಾಡುವ ವಿಡಿಯೋ ಬಿಡುಗಡೆ ಮಾಡಿದ್ದು , ಅದರಲ್ಲಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮಾಜಿ ಸಂಸತ್ ಸದಸ್ಯ ಜಿ.ವಿ. ಹರ್ಷ ಕುಮಾರ್ ಪುತ್ರ ಜಿ.ವಿ. ಶ್ರೀರಾಜ್ ಒಳಗೊಂಡಂತೆ ಗೌಜಲಕ್ಕಿಯನ್ನು ಎಣ್ಣೆಯಲ್ಲಿ ಹುರಿಯುತ್ತಿರುವುದನ್ನು ಕಾಣಬಹುದಾಗಿದೆ. ಕಾಂಗ್ರೆಸ್ ಪಕ್ಷದ ಪರವಾಗಿ ನಾವು ಟ್ವಿಟ್ಟರ್ ಹಕ್ಕಿಯನ್ನು ಹುರಿಯುತ್ತಿದ್ದೇವೆ. ರಾಹುಲ್ ಗಾಂಧಿ ಖಾತೆಯನ್ನು ನಿರ್ಬಂಧಿಸುವ ಮೂಲಕ ಹಾಗೂ ನಮ್ಮ ಟ್ವೀಟ್ಗಳನ್ನು ಪ್ರಚಾರಪಡಿಸದೇ ಟ್ವಿಟ್ಟರ್ ಬಹುದೊಡ್ಡ ತಪ್ಪು ಎಸಗಿದೆ ಎಂದು ಶ್ರೀರಾಜ್ ಹೇಳಿದ್ದಾರೆ.
ಮಾಧ್ಯಮದವರಿಗೂ ತನ್ನ ಹೇಳಿಕೆ ನೀಡಿರುವ ಶ್ರೀರಾಜ್ ಇಂದಿಲ್ಲಿ ನಾವು ಫ್ರೈ ಮಾಡಿದ ಟ್ವಿಟ್ಟರ್ ಹಕ್ಕಿಯ ಸ್ಥಿತಿ ಪ್ರಸ್ತುತ ಟ್ವಿಟ್ಟರ್ ತಾಣದ್ದಾಗಿದೆ. ಬಿಜೆಪಿ ಇಚ್ಛೆಯಂತೆ ತಾಣವು ಕುಣಿಯುತ್ತಿದ್ದು ಭಾರತ ಸರಕಾರದ ಪರವಾಗಿ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಟ್ವಿಟ್ಟರ್ ಸತ್ತ ಹಕ್ಕಿಗೆ ಸಮವಾಗಿದೆ ಎಂದು ಅಣಕವಾಡಿದ್ದಾರೆ.
ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 9ರ ಹರೆಯದ ದಲಿತ ಹುಡುಗಿಯ ಕುಟುಂಬದ ಛಾಯಾಚಿತ್ರಗಳನ್ನು ಟ್ವೀಟ್ ಮಾಡಿದ ನಂತರ ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಸಂತ್ರಸ್ತೆಯ ಖಾಸಗಿತನಕ್ಕೆ ಸಂಬಂಧಿಸಿದ ಕಾನೂನನ್ನು ಉಲ್ಲಂಘಿಸಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗವು ಟ್ವಿಟ್ಟರ್ ತಾಣ ಹಾಗೂ ಪೊಲೀಸರಿಗೆ ದೂರು ನೀಡಿದೆ. ಸಂತ್ರಸ್ತೆಯ ಕುಟುಂಬದ ಔಪಚಾರಿಕ ಅನುಮತಿಯನ್ನು ರಾಹುಲ್ ಗಾಂಧಿ ಸಲ್ಲಿಸಿದ ನಂತರ ಅವರ ಖಾತೆಯನ್ನು ಕಳೆದ ವಾರ ಪುನಃಸ್ಥಾಪಿಸಲಾಗಿದೆ.
ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಟ್ವಿಟ್ಟರ್ ಹಸ್ತಕ್ಷೇಪ ಸರಿಯಲ್ಲವೆಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪದವಿ ಪಡೆದಿರುವ 33ರ ಹರೆಯದ ಶ್ರೀರಾಜ್, ಬಿಜೆಪಿ ಟ್ವೀಟ್ಗಳು ತಾಣದಲ್ಲಿ ಪ್ರಚಾರ ಪಡೆದಂತೆ ಕಾಂಗ್ರೆಸ್ ನಾಯಕರ ಟ್ವೀಟ್ಗಳನ್ನು ತಾಣವು ಪ್ರಚಾರ ಪಡಿಸುತ್ತಿಲ್ಲವೆಂದು ಆರೋಪಿಸಿದ್ದಾರೆ.
ಬಿಜೆಪಿ ಪ್ರತಿಯೊಂದು ರಾಜ್ಯದಲ್ಲೂ ಪ್ರಬಲವಾದ ವಾಟ್ಸ್ಆ್ಯಪ್ ಗುಂಪುಗಳನ್ನು ಹೊಂದಿದೆ. ನಮ್ಮ ಪಕ್ಷವು ಏನಾದರೂ ಟ್ವೀಟ್ ಮಾಡುತ್ತಿದ್ದಂತೆ ಆ ವಾಟ್ಸ್ಆ್ಯಪ್ ಗುಂಪುಗಳಿಗೆ ಟ್ವೀಟ್ಗಳು ರವಾನೆಯಾಗುತ್ತವೆ ಹಾಗೂ ಅದರಲ್ಲಿರುವ ಬೆಂಬಲಿಗರು ನಮ್ಮ ಟ್ವೀಟ್ಗಳನ್ನು ಸ್ಪ್ಯಾಮ್ ಎಂದು ಕರೆದು ನಮ್ಮ ಟ್ವೀಟ್ ತಲುಪುವಿಕೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ಶ್ರೀರಾಜ್ ದೂರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ