• Home
 • »
 • News
 • »
 • national-international
 • »
 • Agri Reforms - ಹೊಸ ಕೃಷಿ ಕಾಯ್ದೆ ದಿಢೀರ್ ರೂಪುಗೊಂಡಿಲ್ಲ; ಇಲ್ಲಿದೆ ಎರಡು ದಶಕದ ಟೈಮ್​ಲೈನ್

Agri Reforms - ಹೊಸ ಕೃಷಿ ಕಾಯ್ದೆ ದಿಢೀರ್ ರೂಪುಗೊಂಡಿಲ್ಲ; ಇಲ್ಲಿದೆ ಎರಡು ದಶಕದ ಟೈಮ್​ಲೈನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನ ತರುವ ಪ್ರಯತ್ನ 20 ವರ್ಷಗಳಿಂದಲೂ ಸತತವಾಗಿ ನಡೆಯುತ್ತಲೇ ಇದೆ. ಈಗ ಕೇಂದ್ರ ರೂಪಿಸಿರುವ ಈ ಮೂರು ಕೃಷಿ ಕಾಯ್ದೆಗಳು ಈ ಪ್ರಯತ್ನಗಳ ಫಲಶ್ರುತಿಯಾಗಿದೆ.

 • News18
 • Last Updated :
 • Share this:

  ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಹಾಗೂ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಯಾರ ಗಮನಕ್ಕೂ ತಾರದೇ ದಿಢೀರ್ ಆಗಿ ಕಾಯ್ದೆಗಳನ್ನ ರಚಿಸಿ ರೈತರಿಗೆ ಮರಣಶಾಹಿ ತಂದಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ವಾಸ್ತವದಲ್ಲಿ ಬೇರೆಯೇ ವಿಚಾರ ಇದೆ. ಇದು ದಿಢೀರ್ ಆಗಿ ರೂಪುಗೊಂಡ ಕಾಯ್ದೆಗಳಲ್ಲ ಎಂಬುದು ಕಟು ವಾಸ್ತವ. ಹಾಗೆಯೇ, ಈಗ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ ಎಂಬುದೂ ವಾಸ್ತವ. ಹಳೆಯ ತುಕ್ಕು ಹಿಡಿದ ಕಾನೂನುಗಳಿಂದ ರೈತರಿಗೆ ಬಂಧಮುಕ್ತಗೊಳಿಸುತ್ತವೆ ಹೊಸ ಕಾಯ್ದೆಗಳು. ತಪ್ಪು ಪ್ರತಿಪಾದನೆ, ತಪ್ಪು ತಿಳಿವಳಿಕೆಯಿಂದ ಇಂದು ರೈತ ಆತಂಕಗೊಂಡಿದ್ಧಾನೆ. ಆದರೆ, ಒಂದು ವಿಚಾರ ಗಮನದಲ್ಲಿರಲಿ. ಕೇಂದ್ರ ತಂದಿರುವ ಈ ಮೂರು ಕಾಯ್ದೆಗಳು ಎರಡು ದಶಕಕ್ಕೂ ಹೆಚ್ಚು ಕಾಲದಿಂದ ನೆನೆಗುದಿಯಲ್ಲಿ ಬಿದ್ದಿದ್ದ ಸುಧಾರಣಾ ಕ್ರಮಗಳಾಗಿವೆ.


  ಈ ಮೂರು ಕಾಯ್ದೆಗಳು 2000ನೇ ಇಸವಿಯಿಂದ ರೂಪುಗೊಳ್ಳುತ್ತಾ ವಿವಿಧ ಸರ್ಕಾರಗಳ ಸುತ್ತ ಗಿರಕಿ ಹೊಡೆಯುತ್ತಾ ಬಂದಿರುವಂಥವು. ಈ ವರ್ಷ ಕೇಂದ್ರ ಸರ್ಕಾರ ಗಟ್ಟಿ ಮನಸು ಮಾಡಿ ಈ ಕಾಯ್ದೆಗಳನ್ನ ಜಾರಿಗೆ ತಂದಿದೆ. ಇದು ಮೆಚ್ಚಿಕೊಳ್ಳಬೇಕಾದ ವಿಚಾರವೇ ಹೊರತು ಪ್ರತಿಭಟಿಸುವಂಥದ್ದೇನಿಲ್ಲ.


  ಮೂರು ಕಾಯ್ದೆಗಳು ರೂಪುಗೊಂಡ ವೇಳಾಪಟ್ಟಿ:


  2000 ಡಿಸೆಂಬರ್ 19: ಕೇಂದ್ರ ಗೃಹ ಸಚಿವಾಲಯದಿಂದ ಶಂಕರ್ ಲಾಲ್ ಗುರು ನೇತೃತ್ವದಲ್ಲಿ ಕೃಷಿ ಮಾರುಕಟ್ಟೆ ಸಬಲೀಕರಣ ಹಾಗೂ ಅಭಿವೃದ್ಧಿಗೆ ತಜ್ಞರ ಸಮಿತಿಯನ್ನ ರಚಿಸಲಾಯಿತು. ರೈತರ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುವಂಥ ವ್ಯವಸ್ಥೆಗೆ ಅವಲೋಕಿಸುವುದು ಈ ಸಮಿತಿಯ ಉದ್ದಿಶ್ಯವಾಗಿತ್ತು.


  2001 ಜೂನ್ 29: ಶಂಕರ್ ಲಾಲ್ ಗುರು ಸಮಿತಿಯಿಂದ ವರದಿ ಸಲ್ಲಿಕೆ: ಎಂಪಿಎಂಸಿಯಲ್ಲಿ ಪರಿವರ್ತನೆ ತರುವ ವಿವಿಧ ವಿಚಾರಗಳನ್ನ ಈ ವರದಿಯಲ್ಲಿ ಶಿಫಾರಸು ಮಾಡಿತು. ಉಗ್ರಾಣ ವ್ಯವಸ್ಥೆಯಲ್ಲೂ ಬದಲಾವಣೆ ಮಾಡುವ ಸಲಹೆಗಳನ್ನ ನೀಡಿತು.


  2001 ಜುಲೈ 1: ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅಧ್ಯಕ್ಷತೆಯಲ್ಲಿ ಉದ್ಯೋಗ ಅವಕಾಶಗಳ ಮೇಲಿನ ಕಾರ್ಯಪಡೆಯ ವರದಿ ಸಲ್ಲಿಕೆ: ಅಗತ್ಯ ವಸ್ತುಗಳ ಕಾಯ್ದೆ (ಎಸೆನ್ಷಿಯಲ್ ಕಮಾಡಿಟಿಸ್ ಆ್ಯಕ್ಟ್) ಮತ್ತು ಎಪಿಎಂಸಿ ವಿಚಾರದಲ್ಲಿ ಈ ಕಾರ್ಯಪಡೆಯಿಂದ ತನ್ನ ಅಭಿಪ್ರಾಯವನ್ನ ತಿಳಿಸಿತು. ಅಗತ್ಯ ವಸ್ತುಗಳ ಕಾಯ್ದೆಯನ್ನೇ ತೆಗೆದುಹಾಕುವಂತೆ ಶಿಫಾರಸು ಮಾಡಿತು. ಎಪಿಎಂಸಿ ವ್ಯವಸ್ಥೆಯಿಂದ ರೈತರಿಗೆ ಪ್ರಯೋಜನ ಆಗುತ್ತಿಲ್ಲ. ಮಾರುಕಟ್ಟೆ ಸ್ಪರ್ಧಾತ್ಮಕತೆ ಸೃಷ್ಟಿಯಾಗಬೇಕು ಎಂಬ ಸಲಹೆಯನ್ನೂ ನೀಡಿತು.


  2001 ಜುಲೈ 4: ಶಂಕರ್ ಲಾಲ್ ಗುರು ಸಮಿತಿಯ ಶಿಫಾರಸುಗಳನ್ನ ಗಮನಿಸಲು ರಚಿಸಲಾಗಿದ್ದ ಆರ್​ಸಿಎ ಜೈನ್ ನೇತೃತ್ವದ ಕಾರ್ಯಪಡೆ ತನ್ನ ಅಭಿಪ್ರಾಯಗಳಿರುವ ವರದಿಯನ್ನ ಸಲ್ಲಿಸಿತು. ಗುತ್ತಿಗೆ ಆಧಾರಿತ ಕೃಷಿ ವ್ಯವಸ್ಥೆಯಾಗಬೇಕು. ಎಂಎಸ್​ಪಿ ವ್ಯವಸ್ಥೆ ಹೋಗಬೇಕು. ಮಾರುಕಟ್ಟೆ ಶಕ್ತಿಗಳೇ ಬೆಲೆ ನಿರ್ಧರಿಸುವ ಪರ್ಯಾಯ ನೀತಿ ರೂಪೊಗೊಳ್ಳಬೇಕು ಎಂಬಿತ್ಯಾದಿ ಅಂಶಗಳನ್ನ ಜೈನ್ ಸಮಿತಿ ಶಿಫಾರಸು ಮಾಡಿತು.


  2003 ಸೆಪ್ಟೆಂಬರ್ 9: ಮಾದರಿ ಎಪಿಎಂಸಿ ಕಾಯ್ದೆ: ರೈತರು ತಮ್ಮ ಉತ್ಪನ್ನಗಳನ್ನ ಎಪಿಎಂಸಿ ಮಂಡಿಗಳಲ್ಲಿ ಮಾರಲೇ ಬೇಕೆಂಬ ಕಟ್ಟುಪಾಡು ಇರುವುದಿಲ್ಲ. ಆದರೆ, ಎಪಿಎಂಸಿ ಮಾರುಕಟ್ಟೆಗೆ ತಮ್ಮ ಬೆಳೆಯನ್ನ ತರದ ಕೃಷಿಕರಿಗೆ ಎಪಿಎಂಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಸಿಗುವುದಿಲ್ಲ. ದರ ನಿಗದಿ ವ್ಯವಸ್ಥೆಯಲ್ಲಿ ಪಾರದರ್ಶಕತೆ, ರೈತರಿಗೆ ಅದೇ ದಿನ ಹಣದ ಪಾವತಿ; ಕಾಂಟ್ರ್ಯಾಕ್ಟ್ ಫಾರ್ಮಿಂಗ್ ವ್ಯವಸ್ಥೆ ಇತ್ಯಾದಿಗಳು  ಈ ಮಾದರಿ ಎಪಿಎಂಸಿ ಕಾಯ್ದೆಗಳಲ್ಲಿ ಸೇರಿಸಲಾಗಿತ್ತು.


  2004, ಡಿಸೆಂಬರ್ 29: ಎಂಎಸ್ ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತರ ಆಯೋಗದ ಮೊದಲ ವರದಿ ಸಲ್ಲಿಕೆ: ಕೃಷಿ ಉತ್ಪಾದನೆ ಮತ್ತು ಲಾಭದ ಮಧ್ಯೆ ತಪ್ಪಿರುವ ಕೊಂಡಿಯನ್ನು ಸೇರಿಸುವ ಕೆಲಸವಾಗಬೇಕು. ಪ್ರತಿಯೊಂದು ರಾಜ್ಯದಲ್ಲೂ ತತ್​ಕ್ಷಣವೇ ಎಪಿಎಂಸಿ ಕಾಯ್ದೆಯ ತಿದ್ದುಪಡಿ ಆಗಬೇಕು. ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಗ್ರಾಹಕರಿಗೆ ಉತ್ತಮ ಉತ್ಪನ್ನೆ ದೊರಕಬೇಕು ಎಂಬುದು ಗುರಿಯಾಗಬೇಕು ಎಂದು ಈ ವರದಿ ಸೂಚಿಸಿತು.


  2005 ಆಗಸ್ಟ್ 11: ಎಂಎಸ್ ಸ್ವಾಮಿನಾಥನ್ ನೇತೃತ್ವದ ಆಯೋಗದಿಂದ ಎರಡನೇ ವರದಿ ಸಲ್ಲಿಕೆ: ಎಪಿಎಂಸಿ ಕಾಯ್ದೆಗಳಲ್ಲಿ ಸುಧಾರಣೆ ತರಲು ವಿವಿಧ ಶಿಫಾರಸುಗಳನ್ನ ಮಾಡಿತು.


  2005, ಡಿಸೆಂಬರ್: ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯಿಂದ (ಎಫ್​ಎಒ) “ಭಾರತೀಯ ಸಾಮಾನ್ಯ ಮಾರುಕಟ್ಟೆ ನಿಟ್ಟಿನಲ್ಲಿ ಕೃಷಿ ಸರಕುಗಳ ಆಂತರಿಕ ವ್ಯಾಪಾರದ ನಿರ್ಬಂಧಗಳನ್ನ ಸಡಿಲಿಸುವಿಕೆ” ವರದಿ ರಾಷ್ಟ್ರೀಯ ಕೃಷಿ ಆಯೋಗಕ್ಕೆ ಸಲ್ಲಿಕೆ – ಕೃಷಿ ಉತ್ಪನ್ನಗಳನ್ನ ವಿವಿಧ ಮಾರುಕಟ್ಟೆಗಳಿಗೆ ಸಾಗಿಸಲು ಇರುವ ನಿರ್ಬಂಧಗಳನ್ನ ತೆಗೆದುಹಾಕಲು ಈ ಆಧ್ಯಯನ ವರದಿ ಶಿಫಾರಸು ಮಾಡಿತು. ಎಪಿಎಂಸಿ ಕಾಯ್ದೆಯಲ್ಲಿ ಸುಧಾರಣೆ ಸೇರಿದಂತೆ ವಿವಿಧ ಕ್ರಮಗಳ ಅಗತ್ಯತೆ ಇರುವುದನ್ನು ತೋರಿಸಿತು.


  2005, ಡಿಸೆಂಬರ್ 29: ಎಂಎಸ್ ಸ್ವಾಮಿನಾಥನ್ ಆಯೋಗದ ಮೂರನೇ ವರದಿ ಸಲ್ಲಿಕೆ: 1989ರಲ್ಲಿ ಪಟ್ಟಿಯಲ್ಲಿದ್ದ ಅಗತ್ಯ ಸರಕುಗಳ ಸಂಖ್ಯೆ ಈಗ 15ಕ್ಕೆ ಇಳಿದಿದೆ. ಇದನ್ನು ಇನ್ನಷ್ಟು ತಗ್ಗಿಸಬೇಕು ಎಂಬುದು ಸೇರಿದಂತೆ ಹಲವು ವಿವಿಧ ಸಲಹೆಗಳಿಗೆ ಶಿಫಾರಸು ಮಾಡಿತು.


  2006, ಆಗಸ್ಟ್ 13: ಎಂಎಸ್ ಸ್ವಾಮಿನಾಥನ್ ಆಯೋಗದ ನಾಲ್ಕನೇ ವರದಿ ಸಲ್ಲಿಕೆ: ಆಧುನಿಕ ಕೃಷಿಗಾರಿಕೆಯ ಅಗತ್ಯಗಳಿಗೆ ತಕ್ಕಂತೆ ಅಗತ್ಯ ಸರಕುಗಳ ಕಾಯ್ದೆ, ಎಪಿಎಂಸಿ ಕಾಯ್ದೆ ಇತ್ಯಾದಿಗಳಲ್ಲಿ ಸುಧಾರಣೆ ಆಗಬೇಕಿದೆ ಎಂದು ಸೂಚಿಸಿತು.


  2006, ಅಕ್ಟೋಬರ್ 4: ಎಂಎಸ್ ಸ್ವಾಮಿನಾಥನ್ ಆಯೋಗದ ಐದನೇ ವರದಿ ಸಲ್ಲಿಕೆ: ಧಾನ್ಯ ಮತ್ತು ಎಣ್ಣೆ ಬೀಜಗಳನ್ನ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಬದಲು ಸ್ಥಳೀಯವಾಗಿಯೇ ಬೆಳೆಯಲು ಉತ್ತೇಜನ ನೀಡಬೇಕು. ಪಂಜಾಬ್​ನ ರೈತರು ತಮ್ಮ ಗೋದಿ ಬೆಳೆಯನ್ನು ಹೊರಗಿನ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದರ ಬದಲಾವಣೆ ಆಗಬೇಕು. ಎಪಿಎಂಸಿಯ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ಸುಧಾರಣೆ ಆಗುವ ಅಗತ್ಯವಿದೆ ಎಂಬಿತ್ಯಾದಿ ಅಭಿಪ್ರಾಯಗಳನ್ನ ವರದಿಯಲ್ಲಿ ತಿಳಿಸಲಾಯಿತು. ಎಪಿಎಂಸಿಯ ಅನುಕೂಲತೆಗಳು ಸಣ್ಣ ಹಾಗೂ ಮಧ್ಯಮ ರೈತರಿಗೆ ತಲುಪಿಲ್ಲ ಎಂಬುದನ್ನು ಈ ವರದಿ ತೋರಿಸಿತು.


  2007: ಮಾದರಿ ಎಪಿಎಂಸಿ ನಿಯಮಗಳು:


  2012, ಫೆಬ್ರವರಿ: ಆರ್ಥಿಕ ಸಮೀಕ್ಷೆಯಲ್ಲಿ ಒಳಗೊಂಡ ಕೃಷಿ ಮತ್ತು ಆಹಾರ ವಿಚಾರ: ಎಪಿಎಂಸಿ ಮಂಡಿಗಳಲ್ಲಿ ಇನ್ನೂ ಹೆಚ್ಚಿನ ವ್ಯಾಪಾರಿಗಳಿಗೆ ಅವಕಾಶ ಕೊಡಬೇಕು. ಎಪಿಎಂಸಿಯಿಂದ ಹೊರಗೆ ಉತ್ತಮ ಬೆಲೆ ಸಿಕ್ಕರೆ ಮಾರಲು ಅನುಮತಿ ಇರಬೇಕು. ಅಂತರ್ ರಾಜ್ಯ ವ್ಯಾಪಾರಕ್ಕೆ ಇರುವ ನಿರ್ಬಂಧ ಸಡಿಲಿಸಬೇಕು ಎಂದು ಸಲಹೆ ನೀಡಿತು.


  2013, ಜನವರಿ 22: ಸುಧಾರಣೆಗಳ ತರುವ ನಿಟ್ಟಿನಲ್ಲಿ ಹರ್ಷವರ್ಧನ್ ಪಾಟೀಲ್ ನೇತೃತ್ವದ ರಾಜ್ಯ ಸಚಿವರುಗಳ ಸಮಿತಿಯಿಂದ ಅಂತಿಮ ವರದಿ ಸಲ್ಲಿಕೆ: ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿದ ಈ ಸಮಿತಿ ಕೃಷಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮಾದರಿ ಎಪಿಎಂಸಿ ನಿಯಮಗಳನ್ನ ಅನುಸರಿಸುವ ಅಗತ್ಯತೆಯನ್ನು ತೋರಿಸಿತು. ಕೃಷಿಕರಿಗೆ ಸರಿಯಾದ ಮಾರುಕಟ್ಟೆ ಮಾಹಿತಿ, ಅನಿರ್ಬಂಧಿತ ರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿಗಳಿಗೆ ಶಿಫಾರಸು ಮಾಡಿತು.


  2013 ಫೆಬ್ರವರಿ: ಆರ್ಥಿಕ ಸಮೀಕ್ಷೆ ವರದಿ: ಮಾದರಿ ಎಪಿಎಂಸಿ ಕಾಯ್ದೆಯನ್ನು ಎಲ್ಲಾ ರಾಜ್ಯಗಳಲ್ಲೂ ಸಮಾನವಾಗಿ ಅಳವಡಿಕೆಯಾಗಬೇಕು. ಕೃಷಿ ಮಾರುಕಟ್ಟೆ ಸೌಕರ್ಯದ ಅಭಿವೃದ್ಧಿ ಅತ್ಯಗತ್ಯವಾಗಿದೆ ಎಂದು ತಿಳಿಸಿದತು.


  2014 ಫೆಬ್ರವರಿ: ಆರ್ಥಿಕ ಸಮೀಕ್ಷೆ ವರದಿ: ಎಪಿಎಸಿ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ ಇತ್ಯಾದಿ ಕಾನೂನಾತ್ಮಕವಾಗಿ ರಚಿತವಾದ ವ್ಯವಸ್ಥೆಯಿಂದ ಮುಕ್ತ ಮಾರುಕಟ್ಟೆ ವ್ಯವಸ್ಥೆ ಸಾಧ್ಯವಾಗುವುದಿಲ್ಲ. ನೇರ ಮಾರುಕಟ್ಟೆ, ಗುತ್ತಿಗೆಯಾಧಾರಿತ ಕೃಷಿ ಇತ್ಯಾದಿ ಪರ್ಯಾಯ ಮಾರುಕಟ್ಟೆ ಯೋಜನೆಗಳನ್ನ ಪರಿಶೀಲಿಸುವುದು ಇತ್ಯಾದಿ ಸುಧಾರಣಾ ಕ್ರಮಗಳಿಗೆ ಶಿಫಾರಸು ಮಾಡಿತು.


  2015, ಫೆಬ್ರವರಿ: ಆರ್ಥಿಕ ಸಮೀಕ್ಷೆ ವರದಿ: ಮಾದರಿ ಎಪಿಎಂಸಿ ಕಾಯ್ದೆಯಲ್ಲಿನ ವಿವಿಧ ದೋಷಗಳ ಪಟ್ಟಿ ಮಾಡಿ ತಿಳಿಸಿತು. ಕೃಷಿ ಸರಕುಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸಲು ಪರ್ಯಾಯ ಮಾರ್ಗಗಳನ್ನ ಅವಲೋಕಿಸಿತು.


  2017, ಆಗಸ್ಟ್: ಆರ್ಥಿಕ ಸಮೀಕ್ಷೆ ವರದಿ: ನಶಿಸುವ ಕೃಷಿ ಉತ್ಪನ್ನಗಳನ್ನ ಎಪಿಎಂಸಿಯ ವ್ಯಾಪ್ತಿಯಿಂದ ಹೊರಗಿಡಬೇಕು. ಕೃಷಿ ಸರಕುಗಳ ಆಂತರಿಕ ವ್ಯಾಪಾರಕ್ಕಿದ್ದ ಎಲ್ಲಾ ನಿರ್ಬಂಧಗಳನ್ನ ತೆಗೆದುಹಾಕುವ ಅಗತ್ಯ ಇದೆ ಎಂದು ಹೇಳಿತು.


  2019, ಜನವರಿ 31: ಕೃಷಿ ಸ್ಥಾಯಿ ಸಮಿತಿ ವರದಿ: ಎಲ್ಲಾ ರಾಜ್ಯಗಳು ಮಾದರಿ ಕಾಯ್ದೆಗೆ ಅನುಗುಣವಾಗಿ ಎಪಿಎಂಸಿ ಕಾಯ್ದೆಯ ತಿದ್ದುಪಡಿ ಆಗಬೇಕು. ಖಾಸಗಿ ಮಾರುಕಟ್ಟೆಗಳನ್ನೂ ಎಪಿಎಂಸಿ ರೀತಿಯಲ್ಲೇ ಪರಿಗಣಿಸಬೇಕು ಎಂಬಿತ್ಯಾದಿ ಅಂಶಗಳಿಗೆ ಶಿಫಾರಸು ಮಾಡಿತು.


  ಲೇಖನ: ಗೌತಮ್ ಚಿಕೇರಮಾನೆ, ORF ಉಪಾಧ್ಯಕ್ಷರು

  Published by:Vijayasarthy SN
  First published: