ಸಿಂಗಾಪುರದಲ್ಲಿ (Singapore) ಭಾರತೀಯ ಮುಸ್ಲಿಂ ದಂಪತಿಗಳನ್ನು (Indian Muslim Couples) ಭಾರತೀಯರು ಎಂಬ ಕಾರಣಕ್ಕೆ ಕೀಳಾಗಿ ನಡೆಸಿಕೊಂಡ ಘಟನೆಯೊಂದು ವರದಿಯಾಗಿದೆ. ಎಲ್ಲೆಡೆ ಮುಸ್ಲಿಂ ಬಾಂಧವರ ರಂಜಾನ್ (Ramadan) ಉಪವಾಸ ನಡೆಯುತ್ತಿದ್ದು, ಸಂಜೆಯ ಉಪವಾಸ ಮುರಿಯುವ ಸಂದರ್ಭದಲ್ಲಿ ಭಾರತೀಯ ದಂಪತಿಗಳಿಗೆ ಆಹಾರ ನೀಡದೇ ಆಚೆ ಕಳಿಸಿರುವ ಕ್ರೂರ ಘಟನೆ ಬೆಳಕಿಗೆ ಬಂದಿದೆ.
ಭಾರತೀಯರು ಎಂದಿದ್ದಕ್ಕೆ ಇಫ್ತಾರ್ ಊಟ ನಿರಾಕರಿಸಿದ ಸೂಪರ್ ಮಾರ್ಕೆಟ್
ಹೌದು, ಸಿಂಗಾಪುರದಲ್ಲಿ ನ್ಯಾಷನಲ್ ಟ್ರೇಡ್ಸ್ ಯೂನಿಯನ್ ಕಾಂಗ್ರೆಸ್ (ಎನ್‌ಟಿಯುಸಿ) ನಡೆಸುತ್ತಿರುವ ಸೂಪರ್‌ಮಾರ್ಕೆಟ್ ಒಂದರಲ್ಲಿ ಮುಸ್ಲಿಂ ಮಂದಿಗೆ ಉಪವಾಸ ಮುರಿಯುವ ಸಂದರ್ಭದಲ್ಲಿ ಆಹಾರಗಳನ್ನು ಹಂಚಲಾಗುತ್ತಿತ್ತು. ಈ ವೇಳೆ ಸಾಲಿನಲ್ಲಿ ನಿಂತ ದಂಪತಿಗಳನ್ನು ಭಾರತದವರಿಗೆ ಆಹಾರವಿಲ್ಲ ಆಚೆ ಹೋಗಿ ಎಂದು ಸೂಪರ್ ಮಾರ್ಕೆಟ್ ಸಿಬ್ಬಂದಿ ಹೇಳಿದ್ದಾರೆ. ಸರತಿ ಸಾಲಿನಿಂದ ದಂಪತಿ ಮರು ಮಾತನಾಡದೇ ಹೊರ ಬಂದಿದ್ದಾರೆ.
ದಂಪತಿಗಳಿಗೆ ಆಚೆ ಹೋಗುವಂತೆ ತಿಳಿಸಿದ ಸಿಬ್ಬಂದಿ
ಫರಾ ನಾಡ್ಯಾ ಮತ್ತು ಅವರ ಪತಿ ಜಹಬರ್ ಶಾಲಿಹ್ ಅವರು ಏಪ್ರಿಲ್ 9 ರಂದು ಸಂಜೆ 7 ಗಂಟೆಗೆ ಸಿಂಗಾಪುರದ ಅವರ್ ಟ್ಯಾಂಪಿನ್ಸ್ ಹಬ್‌ನಲ್ಲಿರುವ ಫೇರ್‌ಪ್ರೈಸ್ ಔಟ್‌ಲೆಟ್‌ಗೆ ಹೋಗಿದ್ದರು. ದಿನಸಿ ಶಾಪಿಂಗ್‌ಗಾಗಿ ಇಬ್ಬರೂ ತೆರಳಿದ್ದ ವೇಳೆ ಬೂತ್‌ನಲ್ಲಿ ಮುಸ್ಲಿಂರಿಗೆ ಉಪವಾಸ ಮುರಿಯುವ ಆಹಾರಗಳನ್ನು ನೀಡಲಾಗುತ್ತಿತ್ತು. ದಂಪತಿಗಳೂ ಕೂಡ ಅಲ್ಲಿ ನಿಂತಿದ್ದರು. ಆದರೆ ಅಲ್ಲಿನ ಸಿಬ್ಬಂದಿ ಇವರನ್ನು ನೋಡಿ ಭಾರತೀಯರಿಗೆ ಊಟವಿಲ್ಲ ಆಚೆ ಹೋಗಿ ಎಂದಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಜೆಆರ್‌ಡಿ ಟಾಟಾ ಹೇಳಿದ್ದ ಆ ಒಂದು ಮಾತು ಸುಧಾಮೂರ್ತಿ ಅವರಿಗೆ ಇಂದಿಗೂ ಸ್ಫೂರ್ತಿಯಂತೆ! ಏನದು ಸಲಹೆ?
ಫೇರ್‌ಪ್ರೈಸ್ ಗ್ರೂಪ್ ಹಮ್ಮಿಕೊಂಡಿರುವ ಇಫ್ತಾರ್ ಕೂಟ
ಮಾರ್ಚ್ 23ರಿಂದ, ಫೇರ್‌ಪ್ರೈಸ್ ಗ್ರೂಪ್ ತನ್ನ ಇಫ್ತಾರ್ ಬೈಟ್ಸ್ ಸ್ಟೇಷನ್ ಅನ್ನು ಪ್ರಾರಂಭಿಸಿತು, ಇದು ತಿಂಗಳ ಅವಧಿಯ ರಂಜಾನ್ ಅವಧಿಯಲ್ಲಿ ತನ್ನ 60 ಮಳಿಗೆಗಳಿಗೆ ಭೇಟಿ ನೀಡುವ ಮುಸ್ಲಿಮರಿಗೆ ಉಚಿತ ಪಾನೀಯಗಳು ಮತ್ತು ತಿಂಡಿಗಳು ಅಥವಾ ದಿನಾಂಕಗಳನ್ನು ಒದಗಿಸುತ್ತದೆ. ಇಫ್ತಾರ್, ರಂಜಾನ್ ಸಮಯದಲ್ಲಿ ಸಂಜೆಯ ಪ್ರಾರ್ಥನೆಯ ನಂತರ ತಿನ್ನುವ ಊಟವನ್ನು ಮುಸ್ಲಿಂ ಗ್ರಾಹಕರಿಗೆ ಕಾರ್ಯಕ್ರಮದ ಭಾಗವಾಗಿ 30 ನಿಮಿಷಗಳ ಮೊದಲು ಮತ್ತು ನಂತರ ನೀಡಲಾಗುತ್ತದೆ. ಪೂರ್ವಸಿದ್ಧ ಪಾನೀಯಗಳಂತಹ ಉಪಹಾರಗಳನ್ನು ಸಹ ನೀಡಲಾಗುತ್ತದೆ. ಸೂಪರ್‌ಮಾರ್ಕೆಟ್‌ಗಳಲ್ಲಿ, ಮುಸ್ಲಿಂ ಗ್ರಾಹಕರು ತಮ್ಮ ಉಪವಾಸವನ್ನು ಮುರಿಯುವಾಗ ಅವರಿಗೆ ಸಹಾಯ ಮಾಡಲು ಪ್ರೋತ್ಸಾಹಿಸುವ ಬ್ಯಾನರ್‌ನೊಂದಿಗೆ ಟೇಬಲ್‌ಗಳ ಮೇಲೆ ಆಹಾರಗಳನ್ನು ಇರಿಸಲಾಗುತ್ತದೆ.
ಫರಾ ನಾಡ್ಯಾ, 35, ಮಲೇಷಿಯನ್-ಭಾರತೀಯ ಮಹಿಳೆ ಮತ್ತು ತನ್ನದೇ ಆದ ಹೆಲ್ತ್‌ಕೇರ್ ಕಂಪೆನಿಯನ್ನು ಇಲ್ಲಿ ನಡೆಸುತ್ತಿದ್ದಾರೆ. ಆಕೆಯ 36 ವರ್ಷದ ಪತಿ ಜಹಬರ್ ಶಾಲಿಹ್ ಐಟಿ ಉದ್ಯೋಗಿಯಾಗಿದ್ದು, ಇಲ್ಲೇ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಭಾರತ ಮೂಲದವರಾಗಿದ್ದು, ಅಲ್ಲೇ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ನಡೆದ ಎಲ್ಲಾ ಘಟನೆ ಬಗ್ಗೆ ಫರಾ ನಾಡ್ಯ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ತನ್ನ ಸಂಕಟವನ್ನು ಹಂಚಿಕೊಂಡ ನಾಡ್ಯಾ ಅವರು ಉಚಿತ ವಸ್ತುಗಳನ್ನು ತೆಗೆದುಕೊಳ್ಳುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ನಮ್ಮನ್ನು ಅಷ್ಟು ಕೀಳಾಗಿ ನಡೆಸಿಕೊಂಡಿದ್ದು ಹಿಂಸೆಯಾಯಿತು. ಈ ಹಿಂದೆಯೂ ನಾವು ಇಂತಹ ಅನುಭವವನ್ನು ಎದುರಿಸಿದ್ದೇವೆ" ಎಂದು ಹೇಳಿಕೊಂಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಘಟನೆ ಬಗ್ಗೆ ಪೋಸ್ಟ್ ಮಾಡಿದ ಫರಾ ನಾಡ್ಯಾ
ಫರಾ ನಾಡ್ಯ ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇರ್‌ಪ್ರೈಸ್ ಅಂಗಡಿಯು ಸಹ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ನೋಡಿ "ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಘಟನೆಗಾಗಿ ಕ್ಷಮೆಯಾಚಿಸಲು ಬಯಸುತ್ತೇವೆ. ತಿಂಗಳ ಅವಧಿಯ ರಂಜಾನ್ ಅವಧಿಯಲ್ಲಿ ಎಲ್ಲಾ ಮುಸ್ಲಿಂ ಗ್ರಾಹಕರಿಗೆ ಇಫ್ತಾರ್ ಪ್ಯಾಕ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ" ಎಂದು ಸೂಪರ್ ರ್ಮಾರ್ಕೆಟ್ ದಂಪತಿಗಳಿಗೆ ಕ್ಷಮೆಯಾಚಿಸಿ ಪೋಸ್ಟ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ