ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra fadnavis) ಅವರ ಪತ್ನಿ ಅಮೃತಾ ಫಡ್ನವಿಸ್ (Amrutha Fadnavis) ಅವರು ಮುಂಬೈನಲ್ಲಿ ಓರ್ವ ಮಹಿಳೆ ಮತ್ತು ಆಕೆಯ ತಂದೆಯ ವಿರುದ್ಧ ಬೆದರಿಕೆ ಮತ್ತು ಪಿತೂರಿ (Bribe) ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ. ಫೆಬ್ರವರಿ 20 ರಂದು ಸಲ್ಲಿಸಿದ ಎಫ್‌ಐಆರ್‌ನಲ್ಲಿ ಅಮೃತಾ ಫಡ್ನವಿಸ್ ಅವರು ವೃತ್ತಿಯಲ್ಲಿ ಡಿಸೈನರ್ ಆಗಿರುವ ಅನಿಕ್ಷಾ ಎಂಬ ಮಹಿಳೆ ಮತ್ತು ಆಕೆಯ ತಂದೆಯ ಹೆಸರನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.
ಕೇಸ್ ದಾಖಲಿಸಲು ಕಾರಣ ಏನು?
ಅಮೃತಾ ಫಡ್ನವಿಸ್ ತನ್ನ ಹೇಳಿಕೆಯಲ್ಲಿ ಅನಿಕ್ಷಾ ಎಂಬ ಡಿಸೈನರ್ ತನಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಪಿತೂರಿ ನಡೆಸುತ್ತಿದ್ದಾರೆ. ಅಲ್ಲದೇ, ತನಗೆ ಒಂದು ಕೋಟಿ ರೂಪಾಯಿ ಲಂಚ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಅನಿಕ್ಷಾ ತನ್ನ ಬಳಿ ತಾನು ಓರ್ವ ಡಿಸೈನರ್ ಎಂದು ಹೇಳಿಕೊಂಡಿದ್ದು ನಂತರ ಅವರ ತಂದೆ ಒಳಗೊಂಡಿರುವ ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ನನ್ನನ್ನು ಕೇಳಿದ್ದಾರೆ. ಆ ಪ್ರಕರಣದಿಂದ ಆಕೆಯ ತಂದೆಯನ್ನು ಹೊರ ತರುವಂತೆ ನನಗೆ ₹ 1 ಕೋಟಿ ಲಂಚದ ಆಮಿಷ ತೋರಿಸಿದ್ದಾರೆ ಎಂದು ಅಮೃತಾ ಫಡ್ನವಿಸ್ ಆರೋಪ ಮಾಡಿ ಇಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: Crime News: ಪ್ರಿಯಕರನ ಮೇಲಿನ ಮೋಹಕ್ಕೆ 2 ವರ್ಷದ ಕಂದಮ್ಮನನ್ನೇ ಕೊಲೆಗೈದ ತಾಯಿ; ಬಾಯ್ಫ್ರೆಂಡ್ ಸೇರಿ ಮಹಿಳೆ ಅರೆಸ್ಟ್!
ಫೆಬ್ರವರಿ 19 ರಂದು ಅಮೃತಾ ಫಡ್ನವೀಸ್ ಅವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವೀಡಿಯೊ ಕ್ಲಿಪ್‌ಗಳು, ಧ್ವನಿ ಸಂದೇಶ ಮತ್ತು ಅನೇಕ ಮೆಸೇಜ್‌ಗಳನ್ನು ಕಳುಹಿಸಿದ್ದಾರೆ ಎಂದು ಅಮೃತಾ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಸ್ತುತ ಅಮೃತಾ ಫಡ್ನವಿಸ್ ಅವರ ದೂರಿನ ಮೇರೆಗೆ ಮುಂಬೈ ಪೊಲೀಸರು ಐಪಿಸಿ ಸೆಕ್ಷನ್ 120 (ಬಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8 ಮತ್ತು 12 ರ ಅಡಿಯಲ್ಲಿ ಡಿಸೈನರ್ ಅನಿಕ್ಷಾ ಮತ್ತು ಅವರ ತಂದೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅನಿಕ್ಷಾ ಬಟ್ಟೆ, ಆಭರಣ, ಚಪ್ಪಲಿ ವಿನ್ಯಾಸ ಮಾಡುವ ಮಹಿಳೆ ಎಂದು ತಿಳಿದು ಬಂದಿದೆ.
ಅನಿಕ್ಷಾ ಭೇಟಿ ಬಗ್ಗೆ ತಿಳಿಸಿದ ಅಮೃತಾ
ಅನಿಕ್ಷಾ 2021 ರ ನವೆಂಬರ್‌ನಲ್ಲಿ ಮೊದಲು ಅಮೃತಾ ಫಡ್ನವಿಸ್ ಅವರನ್ನು ಭೇಟಿಯಾಗಿದ್ದರು. ತದನಂತರ ಸಾರ್ವಜನಿಕ ಸಮಾರಂಭಗಳಲ್ಲಿ ಅವರು ವಿನ್ಯಾಸಗೊಳಿಸಿದ ಉತ್ಪನ್ನಗಳನ್ನು ಧರಿಸಲು ಅಮೃತಾ ಅವರನ್ನು ಕೇಳಿಕೊಳ್ಳುತ್ತಿದ್ದರಂತೆ. ಇದು ಅವರ ಉದ್ಯಮಕ್ಕೆ ಸಹಾಯವಾಗುತ್ತದೆ, ಪ್ರಚಾರ ಕೂಡ ಸಿಗುತ್ತದೆ ಎಂದು ಅಮೃತಾ ಅವರ ಬಟ್ಟೆ, ಆಭರಣಗಳು ಮತ್ತು ಪಾದರಕ್ಷೆಗಳನ್ನು ಧರಿಸುತ್ತಿದ್ದುದ್ದಾಗಿ ಹೇಳಿಕೊಂಡಿದ್ದಾರೆ.
ಮೊದಲ ಭೇಟಿಯಲ್ಲಿ ಆಕೆ ತಾಯಿಯನ್ನು ಕಳೆದುಕೊಂಡಿದ್ದಾಗಿ ನನ್ನ ಬಳಿ ಹೇಳಿಕೊಂಡರು. ನಂತರ ಆಗಾಗ್ಗೆ ಡಿಸೈನರ್ ಬಟ್ಟೆಗಳು ಮತ್ತು ಆಭರಣಗಳನ್ನು ಧರಿಸುವಂತೆ ನನ್ನ ಸಿಬ್ಬಂದಿ ಮುಖಾಂತರ ಕಳುಹಿಸುತ್ತಿದ್ದರು ಎಂದು ಅಮೃತಾ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಅನುಮಾನಾಸ್ಪದ ರೀತಿಯಲ್ಲಿ ನವವಧು ಸಾವು; ದಲಿತ ಯುವತಿ ಎಂದು ಕೊಲೆ ಆರೋಪ
ಅನಿಕ್ಷಾ ತನ್ನ ತಂದೆಯನ್ನು ಕೇಸ್‌ನಿಂದ ಬಚಾವ್ ಮಾಡಲು ನನ್ನನ್ನು ಹಲವು ರೀತಿಯಲ್ಲಿ ಸಂಪರ್ಕಿಸುತ್ತಿದ್ದರು. ಮಹಿಳೆ ಒಮ್ಮೆ ತನ್ನ ಅಂಗರಕ್ಷಕನಿಗೆ ಸುಳ್ಳು ಹೇಳಿ ಒಮ್ಮೆ ತನ್ನ ಕಾರಿನಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ತನ್ನ ತಂದೆ ಬುಕ್ಕಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಆಕೆ ಹೇಳಿದ್ದಾಳೆ. ಅನಿಕ್ಷಾ ಬುಕ್ಕಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುವ ಮೂಲಕ ಹಣ ಸಂಪಾದಿಸಬಹುದು ಅಥವಾ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಅವರಿಂದ ಹಣ ಪಡೆಯಬಹುದು ಎಂದು ಎಫ್‌ಐಆರ್‌ನಲ್ಲಿ ಅಮೃತಾ ವಿವರವಾಗಿ ತಿಳಿಸಿದ್ದಾರೆ.
ಕೊನೆಯದಾಗಿ ಫೆಬ್ರವರಿ 16 ರಂದು ರಾತ್ರಿ 9.30 ಗಂಟೆಗೆ ಅನಿಕ್ಷಾ ಅಮೃತಾ ಫಡ್ನವಿಸ್ ಅವರಿಗೆ ಕರೆ ಮಾಡಿ ಮತ್ತು ಅವರ ತಂದೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಗ್ಗೆ ತಿಳಿಸಿದ್ದಾರೆ. ಮತ್ತು ಅವರನ್ನು ರಕ್ಷಿಸಿದರೆ ₹ 1 ಕೋಟಿ ನೀಡುವುದಾಗಿ ಲಂಚದ ಆಮಿಷ ಒಡ್ಡಿದ್ದಾರೆ. ಇದಾದ ಬಳಿಕೆ ಅಮೃತಾ ಅನಿಕ್ಷಾ ಅವರ ಸಂಖ್ಯೆಯನ್ನು ಬ್ಲಾಕ್ ಮಾಡಿ ಆಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅಮೃತಾ ಅವರ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ