ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನಿಗಳು ಸಂಪೂರ್ಣ ದೇಶದಲ್ಲಿ ರಾಜಾರೋಷವಾಗಿ ಬಂದೂಕು ಹಿಡಿದು ತಿರುಗಾಡುತ್ತಿದ್ದಾರೆ. ತಮ್ಮದೇ ನಿಯಮಾವಳಿಗಳನ್ನು ಜಾರಿಗೆ ತಂದಿರುವ ಸಂಘಟನೆಯು ಮಹಿಳೆಯರು ಹಾಗೂ ಪುರುಷರನ್ನು ತಮ್ಮ ಕಪಿಮುಷ್ಟಿಯಲ್ಲಿರಿಸಿಕೊಂಡಿದೆ.
ಸಂಸತ್ ಭವನಕ್ಕೂ ದಾಳಿ ನಡೆಸಿದ್ದ ತಾಲಿಬಾನಿಗಳು ತಮ್ಮನ್ನು ಸರ್ವಾಧಿಕಾರಿಗಳಾಗಿ ಘೋಷಿಸಿಕೊಂಡಿದ್ದಾರೆ. ಮಹಿಳಾ ಅಧಿಕಾರಿಗಳು ಕಣ್ಮರೆಯಾಗಿದ್ದರೆ ಇನ್ನು ಕೆಲವರು ಪ್ರಾಣಭಯದಿಂದ ತಪ್ಪಿಸಿಕೊಂಡು ತಾಲಿಬಾನಿಗಳಿಗೆ ಸೆರೆಯಾಗುವ ಭಯದಿಂದ ದಿನದೂಡುತ್ತಿದ್ದಾರೆ.
ಅಫ್ಘಾನಿಸ್ತಾದ ಅಧ್ಯಕ್ಷರಾದ ಅಶ್ರಫ್ ಘನಿ ವಿದೇಶಕ್ಕೆ ಪಲಾಯನಗೈದಿದ್ದಾರೆ. ಅಲ್ಲಿನ ಪ್ರಜೆಗಳ ಪಾಡು ಹೇಳತೀರದ ದುಃಖವಾಗಿದೆ. ಯಾವಾಗ ನಮ್ಮ ಸಾವು ನಿರ್ಧಾರವಾಗಲಿದೆ ಎಂಬುದೂ ತಿಳಿಯದೇ ಭಯದಿಂದ ದಿನದೂಡುತ್ತಿದ್ದಾರೆ. ಆದರೆ ಈ ಎಲ್ಲಾ ಸಂದಿಗ್ಧತೆಗಳ ನಡುವೆಯೂ ಅಪ್ಘಾನಿಸ್ತಾನದ ಮೊದಲ ಉಪಾಧ್ಯಕ್ಷರಾಗಿದ್ದ ಅಮ್ರುಲ್ಲಾ ಸಲೇಹ್ ತಾಲಿಬಾನಿಗಳಿಗೆ ಸಡ್ಡುಹೊಡೆಯುವ ಘೋಷಣೆ ಮಾಡಿದ್ದು ಅಪ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷನಾಗಿ ಕೆಲಸ ಮಾಡುತ್ತೇನೆ. ಈ ನಿಟ್ಟಿನಲ್ಲಿ ತನ್ನ ದೇಶದ ಪ್ರಜೆಗಳನ್ನು ಸಂರಕ್ಷಿಸುತ್ತೇನೆ ಎಂದು ಟ್ವೀಟ್ ಮಾಡಿ ಅಪ್ಘನ್ ಪ್ರಜೆಗಳ ಜೊತೆ ನಾನಿದ್ದೇನೆ ಎಂಬುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅಮ್ರುಲ್ಲಾ ತಾಲಿಬಾನಿಗಳು ಸಂಪೂರ್ಣ ಸ್ವಾಧೀನವನ್ನು ತಮ್ಮ ಕೈಯೊಳಗೆ ಮಾಡಿಕೊಂಡಿದ್ದರೂ ತಾವು ಅವರಿಗೆ ಶರಣಾಗುವುದಿಲ್ಲವೆಂದು ನುಡಿದಿದ್ದಾರೆ. ಈ ಲೇಖನದಲ್ಲಿ ಅಮ್ರುಲ್ಲಾ ಸಲೇಹ್ ಕುರಿತು ಮತ್ತಷ್ಟು ವಿವರಗಳನ್ನು ಅರಿತುಕೊಳ್ಳೋಣ.
ಅಮ್ರುಲ್ಲಾ ಸಲೇಹ್ ಯಾರು?
ಅಮ್ರುಲ್ಲಾ ಸಲೇಹ್ ಜನಿಸಿದ್ದು 1972 ರಲ್ಲಿ ಹಾಗೂ ಈತ ತಾಜಿಕ್ ಜನಾಂಗಕ್ಕೆ ಸೇರಿದವರು. ಸಣ್ಣ ವಯಸ್ಸಿನಲ್ಲಿಯೇ ಅನಾಥರಾಗಿ ಬೆಳೆದವರು. ತಾಲಿಬಾನಿಗಳಿಗೆ ನೇರವಾಗಿಯೇ ಉತ್ತರ ನೀಡಿರುವ ಅಮ್ರುಲ್ಲಾ ಬಹಳ ಹಿಂದೆಯೇ ತಾಲಿಬಾನಿಗಳ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದವರು. ಈತನ ಸಹೋದರಿಯನ್ನು ತಾಲಿಬಾನಿಗಳು ಹಿಂಸಿಸಿ ಕೊಂದ ನಂತರ ಅಮ್ರುಲ್ಲಾನಿಗೆ ತಾಲಿಬಾನಿಗಳ ಮೇಲಿದ್ದ ದೃಷ್ಟಿಕೋನವೇ ಬದಲಾಗಿ ಹೋಯಿತು. ಸಹೋದರಿಗಾದ ಅನ್ಯಾಯಕ್ಕೆ ಪ್ರತೀಕಾರ ತೀರಿಸಲು ಹೊಂಚು ಹಾಕುತ್ತಿದ್ದರು. ಹೀಗಾಗಿ ತಾಲಿಬಾನಿಗಳ ವಿರುದ್ಧದ ಅನೇಕ ಸಂಘಟನೆಗಳೊಂದಿಗೆ ಸೇರಿ ತಾಲಿಬಾನಿಗಳ ಪತನಕ್ಕೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದರು ಎಂಬುದಾಗಿ ಟೈಮ್ ನಿಯತಕಾಲಿಕೆಯ ಸಂಪಾದಕೀಯದಲ್ಲಿ ಅಮ್ರುಲ್ಲಾ ಬರೆದುಕೊಂಡಿದ್ದರು.
ಅಮ್ರುಲ್ಲಾ ಮೇಲೆ ನಡೆದ ದಾಳಿಗಳು
ತಾಲಿಬಾನಿಗಳ ವಿರುದ್ಧ ನಡೆಸಿರುವ ಹೋರಾಟಗಳಲ್ಲಿ ಭಾಗಿಯಾಗಿದ್ದ ಅಮ್ರುಲ್ಲಾ ಮೇಲೆ ತಾಲಿಬಾನಿ ಸಂಘಟನೆಗಳು ಹಲವಾರು ಬಾರಿ ದಾಳಿ ನಡೆಸಿವೆ. ಕಾಬೂಲ್‌ನಲ್ಲಿ ನಡೆದ ಬಾಂಬ್ ದಾಳಿ, ಆತ್ಮಾಹುತಿ ಬಾಂಬ್ ದಾಳಿ ಹೀಗೆ ಸಲೇಹ್ ಮೇಲೆ ಅನೇಕ ಬಾರಿ ದಾಳಿಗಳು ನಡೆದಿವೆ. ತಾಲಿಬಾನಿಗಳನ್ನೂ ಬಲಿ ತೆಗೆದುಕೊಂಡಿರುವ ಅಮ್ರುಲ್ಲಾ ನಾನು ಅವರನ್ನು ಹತ್ಯೆಗೈದಿರುವುದು ನ್ಯಾಯಸಮ್ಮತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಅಮ್ರುಲ್ಲಾ ತಾಲಿಬಾನಿಗಳ ಹುಟ್ಟಡಗಿಸುವ ಕಾರ್ಯದಲ್ಲಿ ತಮ್ಮನ್ನು ತಾವು ಬಲಿಕೊಡುವುದಾಗಿಯೂ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ಅಮ್ರುಲ್ಲಾ ಸಲೇಹ್ ಎಲ್ಲಿದ್ದಾರೆ?
ಪ್ರಸ್ತುತ ಬಿಕ್ಕಟ್ಟಿನ ನಂತರ ಅಮ್ರುಲ್ಲಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದನ್ನು ಕುರಿತು ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಸುದ್ದಿ ಮೂಲಗಳ ಪ್ರಕಾರ ತಾಲಿಬಾನಿಗಳ ನಿಯಂತ್ರಣದಿಂದ ಮುಕ್ತವಾಗಿರುವ ಕಾಬೂಲ್‌ನ ಈಶಾನ್ಯ ಅಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಯಲ್ಲಿದ್ದಾರೆಂಬುದು ತಿಳಿದು ಬಂದಿದೆ.
ಅಮ್ರುಲ್ಲಾ ತಾಲಿಬಾನಿಗಳ ವಿರುದ್ಧ ಸಮರ ಸಾರಲು ಅಗತ್ಯವಾಗಿರುವ ರಹಸ್ಯ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು ತಾಲಿಬಾನ್ ವಿರೋಧಿ ಹೋರಾಟಗಾರರಾದ ಅಹ್ಮದ್ ಶಾ ಮಸೂದ್ ಪುತ್ರನೊಂದಿಗೆ ಕಾಣಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಗೆರಿಲ್ಲಾ ಚಳುವಳಿಯ ಮೂಲಕ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲು ಇವರಿಬ್ಬರೂ ಯುದ್ಧತಂತ್ರವನ್ನು ಯೋಜಿಸುತ್ತಿದ್ದಾರೆ ಎಂಬ ಗುಮಾನಿಯೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ