ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ಮೂರು ದಿನಗಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೂನ್ ತಿಂಗಳಲ್ಲಿ ಭಯೋತ್ಪಾದಕರ (militant) ಗುಂಡಿಗೆ ಬಲಿಯಾದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇನ್ಸ್ಪೆಕ್ಟರ್ ಕುಟುಂಬವನ್ನು ಶನಿವಾರ ಭೇಟಿಯಾದರು. ಪರ್ವಾಯಿಜ್ ಅಹ್ಮದ್ ದಾರ್ ಎಂಬ ಮೃತ ಪೊಲೀಸ್ ಅಧಿಕಾರಿಯು ತಮ್ಮ ಪತ್ನಿ, 13 ವರ್ಷದ ಮಗಳು ಮತ್ತು 10 ವರ್ಷದ ಮಗನನ್ನು ಅಗಲಿದ್ದಾರೆ. ಪರ್ವೇಜ್ ದಾರ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಅಮಿತ್ ಶಾ, ಇಡೀ ದೇಶವು ಅವರೊಂದಿಗೆ ಇದೆ ಎಂದು ಈ ವೇಳೆ ಭರವಸೆ ನೀಡಿದರು. ಅಲ್ಲದೆ, ದಾರ್ ಮತ್ತು ಇತರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ಮಾಡುತ್ತಿರುವ ಅತ್ಯುನ್ನತ ತ್ಯಾಗವನ್ನು ರಾಷ್ಟ್ರವು ಯಾವಾಗಲೂ ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವರು ಈ ವೇಳೆ ಪರ್ವೇಜ್ ದಾರ್ ಪತ್ನಿಗೆ ಸರ್ಕಾರಿ ಕೆಲಸದ ಭರವಸೆಯನ್ನೂ ನೀಡಿದರು.
370ನೇ ವಿಧಿ ರದ್ದುಗೊಳಿಸಿದ ನಂತರ ಅಮಿತ್ ಶಾ ಅವರ ಮೊದಲ ಜಮ್ಮು - ಕಾಶ್ಮೀರ ಭೇಟಿ
2019ರ ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು, 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕೇಂದ್ರಾಡಳಿತ ಪ್ರದೇಶಕ್ಕೆ ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೊದಲ ಭೇಟಿಯಾಗಿದೆ.
ಕೇಂದ್ರ ಗೃಹ ಸಚಿವರು ಶನಿವಾರ ಕಣಿವೆ ಪ್ರದೇಶಕ್ಕೆ ಬಂದಿಳಿದರು. ಈ ವೇಳೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಅಮಿತ್ ಶಾರನ್ನು ಸ್ವಾಗತಿಸಿದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರ ಆಡಳಿತದ ಇತರ ಹಿರಿಯ ಅಧಿಕಾರಿಗಳು ಕೂಡ ಹಾಜರಿದ್ದರು.
ಇನ್ನು, ಇಂದು ಕಾಶ್ಮೀರ ಕಣಿವೆಯಲ್ಲಿ ಅಮಿತ್ ಶಾ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ಯುಎಇಯಲ್ಲಿ ನಡೆಯಲಿರುವ ಶ್ರೀನಗರ ಮತ್ತು ಶಾರ್ಜಾ ನಡುವಿನ ಮೊದಲ ಅಂತಾರಾಷ್ಟ್ರೀಯ ವಿಮಾನಯಾನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಮದ್ರ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಳೆದ ತಿಂಗಳು ಕಾಶ್ಮೀರ ಪ್ರವಾಸಕ್ಕೆ ಭೇಟಿ ನೀಡಿದ್ದ ವೇಳೆ ಶ್ರೀನಗರ - ಶಾರ್ಜಾ ನೇರ ವಿಮಾನಯಾನ ಪ್ರಾರಂಭಿಸುವ ಕುರಿತು ಘೋಷಣೆ ಮಾಡಿದ್ದರು.
ಈ ಮಧ್ಯೆ, ಗೃಹ ಸಚಿವ ಅಮಿತ್ ಶಾ ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಮುನ್ನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಿಆರ್ಪಿಎಫ್ ಮತ್ತು ಬಿಎಸ್ಎಫ್ನ ಡ್ರೋನ್ಗಳು, ಸ್ನೈಪರ್ಗಳು ಮತ್ತು ಹೆಚ್ಚುವರಿ ಭದ್ರತಾ ತುಕಡಿಗಳನ್ನು ಜಮ್ಮು ಕಾಶ್ಮೀರದ ರಾಜಧಾನಿಯಾಗಿದ್ದ ಶ್ರೀನಗರಕ್ಕೆ ಕರೆಸಿಕೊಳ್ಳಲಾಗಿದೆ.
ಶ್ರೀನಗರದ ಹಲವಾರು ಪ್ರದೇಶಗಳಲ್ಲಿ ಮಾತ್ರವಲ್ಲದೆ ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲೂ ಸಿಆರ್ಪಿಎಫ್ ಪಡೆಗಳ ಬಂಕರ್ಗಳನ್ನು ನಿಯೋಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ