ಹೈದ್ರಾಬಾದ್ ನವೆಂಬರ್ 26); ಬಿಹಾರದ ಚುನಾವಣೆ ಬೆನ್ನಿಗೆ ಇದೀಗ ಗ್ರೇಟರ್ ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣೆ ಎದುರಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ನೆಲೆಗೊಳಿಸಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಈ ಚುನಾವಣೆಯನ್ನು ಗಂಬೀರವಾಗಿ ಪರಿಗಣಿಸಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ಪ್ರಮುಖ ಬಿಜೆಪಿ ನಾಯಕರು ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣಾ ಪ್ರಚಾರದ ಕಣಕ್ಕೆ ಇಳಿಸಲಿದೆ ಎನ್ನಲಾಗುತ್ತಿದೆ. ಬಹು ನಿರೀಕ್ಷಿತ ಗ್ರೇಟರ್ ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣೆ ಡೆಸೆಂಬರ್ 1 ರಂದು ನಡೆಯಲಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್ 28 ರಂದು ಹೈದರಾಬಾದ್ನಲ್ಲಿ ರೋಡ್ ಶೋ ನಡೆಸಲಿದ್ದು, ಮರುದಿನವೇ ಗೃಹ ಸಚಿವ ಅಮಿತ್ ಶಾ ಸಹ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. ನವೆಂಬರ್ 28 ರಂದು ಪ್ರಧಾನಿ ಮೋದಿ ಸಹ ಭಾರತ್ ಬಯೋಟೆಕ್ ಭೇಟಿಗಾಗಿ ಹೈದ್ರಾಬಾದ್ಗೆ ಆಗಮಿಸಲಿದ್ದು, ಅವರೂ ಸಹ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಹೈದ್ರಾಬಾದ್ ಕಾರ್ಪೊರೇಷನ್ ಚುನಾವಣೆ ಪ್ರಚಾರದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿ ಯುವ ವಿಭಾಗದ ಮುಖ್ಯಸ್ಥ ತೇಜಸ್ವಿ ಸೂರ್ಯ ಹಾಗೂ ಮತ್ತೊಬ್ಬ ಕೇಂದ್ರ ಸಚಿವ ಸ್ಮೃತಿ ಇರಾನಿ ಈಗಾಗಲೇ ಭಾಗವಹಿಸಿದ್ದಾರೆ.
ಅಭಿಯಾನಕ್ಕೆ ಲಭ್ಯವಿರುವ ಅಲ್ಪಾವಧಿಯಲ್ಲಿಯೇ ವಿವಿಧ ವರ್ಗದ ಮತದಾರರನ್ನು ತಲುಪಲು ರಾಷ್ಟ್ರೀಯ ನಾಯಕರ ಸೇವೆಗಳನ್ನು ಬಳಸಲಾಗುತ್ತಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ. ಬಿಜೆಪಿಯ ಮಹಿಳಾ ವಿಭಾಗದ ಅಧ್ಯಕ್ಷ ವನತಿ ಶ್ರೀನಿವಾಸನ್ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಸಿಕಂದರಾಬಾದ್ನ ಲೋಕಸಭಾ ಸದಸ್ಯ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಈಗಾಗಲೇ ಬಿಜೆಪಿಗಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಡಬ್ಬಾಕ್ ಅಸೆಂಬ್ಲಿ ಉಪಚುನಾವಣೆ ಯಲ್ಲಿ ಇತ್ತೀಚಿನ ಗೆಲುವಿನಿಂದ ಉತ್ತೇಜಿತವಾದ ಬಿಜೆಪಿ ಹೈದ್ರಾಬಾದ್ ಕಾರ್ಪೋರೇಷನ್ ಅನ್ನು ಸಹ ಟಿಆರ್ಎಸ್ನಿಂದ ವಶಪಡಿಸಿಕೊಳ್ಳಲು ನಿರ್ಧರಿಸಿದೆ ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಧಾನಸಭೆಗೆ 2023ರಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಪ್ರಸ್ತುತ ನಡೆಯುತ್ತಿರುವ ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣೆಯನ್ನು ಬಿಜೆಪಿ ನಾಯಕರು ಸೆಮಿ ಫೈನಲ್ ಎಂದು ಪರಿಗಣಿಸಿದ್ದಾರೆ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ತಮ್ಮ ಅಸ್ಥಿತ್ವವನ್ನು ವಿಸ್ತರಿಸಲು ಮುಂದಾಗಿರುವ ಬಿಜೆಪಿಗೆ ಹೈದ್ರಾಬಾದ್ ಕಾರ್ಪೋರೇಷನ್ ಚುನಾವಣೆ ಗೆಲುವು ಬಹುಮುಖ್ಯವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇದನ್ನೂ ಓದಿ : ಉಗ್ರಗಾಮಿಗಳ ಜೊತೆ ನಂಟು?; ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆಪ್ತ ಸಹಾಯಕನನ್ನು ಬಂಧಿಸಿದ ಎನ್ಐಎ
ಕಳೆದ ಎರಡು ದಿನಗಳ ಕಾಲ ಪ್ರಚಾರ ಮಾಡಿದ ಸಂಸದ ತೇಜಸ್ವಿ ಸೂರ್ಯ, ಬಿಜೆಪಿಗೆ ಗೆಲುವಿನ ಸರಣಿ ಹೈದರಾಬಾದ್ನಿಂದ ಪ್ರಾರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಇದು ಕೇವಲ ಪುರಸಭೆ ಚುನಾವಣೆಯಲ್ಲ. ಇಡೀ ದೇಶ ಹೈದರಾಬಾದ್ ಕಡೆಗೆ ನೋಡುತ್ತಿದೆ. ಹೈದರಾಬಾದ್ ಮತ್ತು ತೆಲಂಗಾಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ