Sushma ChakreSushma Chakre
|
news18-kannada Updated:June 1, 2020, 9:34 PM IST
ಅಮಿತ್ ಶಾ
ನವದೆಹಲಿ (ಜೂ. 1): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಎನ್ಆರ್ಸಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾದಾಗ ದೇಶದಲ್ಲಿ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಈ ಕಾಯ್ದೆಗಳಿಂದ ಅಲ್ಪಸಂಖ್ಯಾತ ಸಮುದಾಯಗಳಿಗೆ ತೊಂದರೆಯಾಗಲಿದೆ ಎಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಈಗಾಗಲೇ ಪ್ರಧಾನಿ ಮೋದಿ ಸೇರಿದಂತೆ ಸರ್ಕಾರದ ಅನೇಕ ನಾಯಕರು ಸ್ಪಷ್ಟನೆ ನೀಡಿದ್ದಾರೆ. ನೆಟ್ವರ್ಕ್ 18 ಗ್ರೂಪ್ನ ಮುಖ್ಯ ಸಂಪಾದಕ ರಾಹುಲ್ ಜೋಷಿ ಅವರಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕೂಡ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಮಾತನಾಡಿದ್ದು, ಸಿಎಎ ಮತ್ತು ಎನ್ಆರ್ಸಿಗಳಿಂದ ಮುಸ್ಲಿಮರಿಗೆ ಯಾವುದೇ ಅಪಾಯವೂ ಇಲ್ಲ ಎಂದಿದ್ದಾರೆ.
ಕೊರೋನಾದಿಂದಾಗಿ ಲಾಕ್ಡೌನ್ ಘೋಷಿಸಿದ ಬಳಿಕ ಮೊದಲ ಬಾರಿಗೆ ನೆಟ್ವರ್ಕ್ 18ಗೆ ಸಂದರ್ಶನ ನೀಡಿರುವ ಅಮಿತ್ ಶಾ ವಲಸೆ ಕಾರ್ಮಿಕರು, ಭಾರತ-ಚೀನಾ ಗಡಿ ಸಮಸ್ಯೆ, ಕಾಶ್ಮೀರದ ಸಮಸ್ಯೆ, ಕೊರೋನಾ ಬಿಕ್ಕಟ್ಟು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಎನ್ಆರ್ಸಿ ಮತ್ತು ಸಿಎಎ ಕುರಿತ ಗೊಂದಲದ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಭಾರತ-ಚೀನಾ ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ; ಅಮಿತ್ ಶಾ
ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಕುರಿತು ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಕೆಲವರು ಉದ್ದೇಶಪೂರ್ವಕವಾಗಿ ಈ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ, ಈ ಕಾಯ್ದೆಗಳಿಂದ ಮುಸ್ಲಿಮರಿಗೆ ಮತ್ತು ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ಇದೇವೇಳೆ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆಯೂ ಮಾತನಾಡಿರುವ ಅಮಿತ್ ಶಾ, ಗಡಿ ವಿಚಾರದಲ್ಲಿ ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಅದರಲ್ಲಿ ಎರಡನೇ ಮಾತೇ ಇಲ್ಲ. ನಾವು ಯಾವುದೇ ಗಡಿ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಹಾಗೇ, ನಮ್ಮ ದೇಶದ ಗಡಿಯಲ್ಲಿ ಗಲಭೆ ಎಬ್ಬಿಸುವವರನ್ನು ಹತ್ತಿಕ್ಕುವುದರಲ್ಲಿಯೂ ನಾವು ಹಿಂದೆ ಬಿದ್ದಿಲ್ಲ. ನಮ್ಮ ದೇಶದ ಗಡಿಯೊಳಗೆ ನುಸುಳಲು ಪ್ರಯತ್ನಿಸುವವರಿಗೆ ಸರ್ಜಿಕಲ್ ದಾಳಿಯ ಮೂಲಕ ತಕ್ಕ ಉತ್ತರವನ್ನು ನೀಡುತ್ತೇವೆ ಎಂದಿದ್ದಾರೆ.
First published:
June 1, 2020, 9:34 PM IST