ಪಶ್ಚಿಮಬಂಗಾಳ ಹಿಂಸಾಚಾರಕ್ಕೆ ಮಮತಾ ದೀದಿಯೇ ಕಾರಣ, ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿ; ಅಮಿತ್ ಶಾ
ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ವಾಸ್ತವ ಅರಿತ ಮಮತಾ ಬ್ಯಾನರ್ಜಿ ಹಿಂಸಾಚಾರ ನಡೆಸುವಂತಹ ಉಗ್ರ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಟಿಎಂಸಿ ಗೂಂಡಾಗಳೇ ಹಿಂಸಾಚಾರ ನಡೆಸಿ, ಕಾಲೇಜು ಆಸ್ತಿಗೆ ಹಾನಿ ಮಾಡಿ, ಪ್ರತಿಮೆ ಧ್ವಂಸಗೊಳಿಸಿದ್ದಾರೆ. ಆದರೆ, ದೀದಿ ಮಾತ್ರ ಆಧಾರರಹಿತವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹರಿಹಾಯ್ದರು.
ನವದೆಹಲಿ: ನೆನ್ನೆ ಕೋಲ್ಕತಾದ ರೋಡ್ ಶೋ ವೇಳೆ ನಡೆದ ಹಿಂಸಾಚಾರಕ್ಕೆ ಬಿಜೆಪಿ ಕಾರಣ ಎಂದು ತೃಣಮೂಲಕ ಕಾಂಗ್ರೆಸ್ ಹೇಳುತ್ತಿದೆ. ಆದರೆ, ಮತದಾನದ ವೇಳೆ ಪಶ್ಚಿಮಬಂಗಾಳದಲ್ಲೇ ಏಕೆ ಹಿಂಸಾಚಾರ ನಡೆಯುತ್ತದೆ. ಟಿಎಂಸಿ ಕೇವಲ 42 ಲೋಕಸಭೆ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ನಾವು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಪ್ರತಿಸ್ಪರ್ಧಿಯಾಗಿ ದೇಶದೆಲ್ಲೆಡೆ ಸ್ಪರ್ಧೆ ಮಾಡಿದ್ದೇವೆ. ಆದರೆ, ಅಲ್ಲಿ ಎಲ್ಲೂ ಆಗದ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲೇ ಏಕೆ ಆಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ.
ಕೋಲ್ಕತಾದಲ್ಲಿ ನೆನ್ನೆ ಸಂಜೆ ಅಮಿತ್ ಶಾ ರೋಡ್ ಶೋ ವೇಳೆ ಸಂಭವಿಸಿದ ಗಲಭೆಗೆ ಬಿಜೆಪಿಯೇ ಕಾರಣ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಆರೋಪ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಈ ಘಟನೆಗೆ ಮಮತಾ ಬ್ಯಾನರ್ಜಿ ಅವರೇ ಕಾರಣ. ಅವರು ನೀಡಿದ ಪ್ರಚೋದನೆಯಿಂದಲೇ ಟಿಎಂಸಿ ಕಾರ್ಯಕರ್ತರು ಹಿಂಸಾಚಾರ ನಡೆಸಿದರು. ನನ್ನ ಮೇಲೆ ದಾಳಿಗೆ ಮುಂದಾದರು. ಸದ್ಯ ನಾನು ಸುರಕ್ಷಿತನಾಗಿದ್ದೇನೆ ಎಂದು ಪ್ರತ್ಯಾರೋಪ ಮಾಡಿದರು.
ಘಟನೆ ಸಂಬಂಧ ತಮ್ಮ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾ, ಅದೊಂದು ಬಹಿರಂಗ ಸಮಾವೇಶ ಮತ್ತು ರೋಡ್ ಶೋ ಹೇಗೆ ಸಾಗುತ್ತಿತ್ತು ಎಂಬುದನ್ನು ಪ್ರತಿಯೊಬ್ಬರು ನೋಡಬಹುದಾಗಿತ್ತು. ಮಮತಾ ದೀದಿ ಅವರೇ, ಎಫ್ಐಆರ್ಗೆಲ್ಲಾ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ. 60ಕ್ಕೂ ಹೆಚ್ಚು ಜನರು ಕೊಲೆಯಾಗಿದ್ದಾರೆ. ಆದರೂ ದೀದಿ ಯಾವ ಕ್ರಮಕ್ಕೂ ಈವರೆಗೂ ಮುಂದಾಗಿಲ್ಲ. ಮಮತಾ ಬ್ಯಾನರ್ಜಿ ನಮ್ಮ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಎರಡು ದಿನದ ಹಿಂದೆ ಹೆದರಿಸಿದ್ದರು. ಮತ್ತು ರೋಡ್ ಶೋ ವೇಳೆ ದಾಳಿ ನಡೆಸಿದರು ಎಂದು ಆರೋಪಿಸಿದರು.
ಹಲವು ರಾಜ್ಯಗಳ ಹಿಂಸಾಚಾರದ ಇತಿಹಾಸದ ದಾಖಲೆಗಳನ್ನು ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಆದರೆ, ಪಶ್ಚಿಮಬಂಗಾಳದಲ್ಲಿ ಈವರೆಗೂ ಒಬ್ಬರೇ ಒಬ್ಬರು ಬಂಧನಕ್ಕೆ ಒಳಗಾಗಿಲ್ಲ. ಚುನಾವಣಾ ಆಯೋಗ ಪಶ್ಚಮ ಬಂಗಾಳದ ಈ ಘಟನೆ ಬಗ್ಗೆ ಏಕೆ ಮೌನವಾಗಿದೆ ಎಂದು ಪ್ರಶ್ನೆ ಮಾಡಿದ ಶಾ, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ವಾಸ್ತವ ಅರಿತ ಮಮತಾ ಬ್ಯಾನರ್ಜಿ ಹಿಂಸಾಚಾರ ನಡೆಸುವಂತಹ ಉಗ್ರ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಟಿಎಂಸಿ ಗೂಂಡಾಗಳೇ ಹಿಂಸಾಚಾರ ನಡೆಸಿ, ಕಾಲೇಜು ಆಸ್ತಿಗೆ ಹಾನಿ ಮಾಡಿ, ಪ್ರತಿಮೆ ಧ್ವಂಸಗೊಳಿಸಿದ್ದಾರೆ. ಆದರೆ, ದೀದಿ ಮಾತ್ರ ಆಧಾರರಹಿತವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹರಿಹಾಯ್ದರು.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ