ಕೋಲ್ಕತ್ತಾ (ಮಾರ್ಚ್ 01); ಪಶ್ಚಿಮ ಬಂಗಾಳದ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇಡೀ ದೇಶದ ಗಮನ ಸೆಳೆದಿದೆ. ಬಂಗಾಳದ ಅಧಿಕಾರ ಕೇಂದ್ರದಲ್ಲಿ ಈ ಬಾರಿ ಯಾರ ಬಾವುಟ ಹಾರಲಿದೆ ಎಂಬ ಪ್ರಶ್ನೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ದೊಡ್ಡ ಸದ್ದು ಮಾಡುತ್ತಿದೆ. ಈ ನಡುವೆ ಇಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಂತೆ ಕೆಲಸ ಮಾಡುತ್ತಿರುವ ಬಿಜೆಪಿ ನಾಯಕರು ಒಬ್ಬರ ಹಿಂದೊಬ್ಬರಂತೆ ಬಂಗಾಳಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಈ ನಡುವೆ ಟಿಎಂಸಿ ಪಕ್ಷದ ಪ್ರಮುಖ ನಾಯಕರನ್ನು ಬಿಜೆಪಿ ಕಡೆಗೆ ಸೆಳೆಯುತ್ತಾ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಬಿಜೆಪಿಯ ಈ ನಡೆಯಿಂದಾಗಿ ಸಾಮಾನ್ಯವಾಗಿಯೇ ಕೆರಳಿರುವ ಟಿಎಂಸಿ ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ತಂತ್ರ ಹೆಣೆಯುವ ಸಲುವಾಗಿ ಬಿಹಾರದ ಪ್ರಬಲ ಪಕ್ಷವಾದ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರನ್ನು ಶೀಘ್ರದಲ್ಲೇ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈ ವಿಚಾರ ಇದೀಗ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಯ ಸಭೆಯು ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾಲಿಘಾಟ್ ನಿವಾಸದಲ್ಲಿ ನಡೆಯಲಿದೆ. ಈ ಸಮಿತಿಯಲ್ಲಿ ತೃಣಮೂಲ ಯುವ ವಿಭಾಗದ ಮುಖ್ಯಸ್ಥ ಅಭಿಷೇಕ್ ಬ್ಯಾನರ್ಜಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಫಿರ್ಹಾದ್ ಹಕೀಮ್, ಸುಬ್ರತಾ ಬಕ್ಷಿ, ಸೌಗತಾ ರಾಯ್, ಡೆರೆಕ್ ಒ’ಬ್ರಿಯೆನ್, ಅರೂಪ್ ಬಿಸ್ವಾಸ್, ಚಂದ್ರಮಾ ಭಟ್ಟಾಚಾರ್ಯ, ಸಿಎಂ ಜತುವಾ, ಸುಬ್ರತಾ ಮುಖರ್ಜಿ, ಸುದೀಪ್ ಬಂದೋಪಾಧಯ್ ಮತ್ತು ಪಾರ್ಥ ಚಟರ್ಜಿ ಮತ್ತು ಸಮಿತಿಯ ಇತರ ಹಿರಿಯ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಟಿಎಂಸಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಅಭ್ಯರ್ಥಿಗಳ ಆಯ್ಕೆಯಲ್ಲಿ ಮಮತಾ ಬ್ಯಾನರ್ಜಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಎಲ್ಲ ನಾಯಕರು ಸಲಹೆಗಳನ್ನು ನೀಡಲಿದ್ದಾರೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಚ್ಚಿನ ಯುವ ಜನರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಹೊಂದಾಣಿಕೆಯಾಗುವ ಸಾಧ್ಯತೆಯಿದೆ. ಕಳೆದ ತಿಂಗಳು ಪಕ್ಷದ ಹಿರಿಯ ನಾಯಕರಾದ ಅಬ್ದುಲ್ ಬರಿ ಸಿದ್ದಿಕಿ ಮತ್ತು ಶ್ಯಾಮ್ ರಾಜಕ್ ನೇತೃತ್ವದ ಆರ್‌ಜೆಡಿ ನಿಯೋಗವು ತೃಣಮೂಲ ಚುನಾವಣಾ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಅಭಿಷೇಕ್ ಬ್ಯಾನರ್ಜಿಯನ್ನು ಭೇಟಿ ಮಾಡಿತ್ತು.
ಇದನ್ನೂ ಓದಿ: ಜಾವೇದ್ ಅಖ್ತರ್ ಹೂಡಿದ್ದ ಮಾನನಷ್ಟ ಪ್ರಕರಣ: ನಟಿ ಕಂಗನಾ ರಣಾವತ್ ವಿರುದ್ಧ ವಾರಂಟ್ ಹೊರಡಿಸಿದ ಕೋರ್ಟ್
ತೇಜಸ್ವಿ ಯಾದವ್ ಅವರ ಆರ್‌ಜೆಡಿಯು ಯಾದವರ ಮತಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಇದು ಅಸನ್ಸೋಲ್ ನಂತಹ ಪ್ರದೇಶಗಳಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣೆಯಲ್ಲಿ ಆರ್‌ಜೆಡಿಯನ್ನು ವಿಸ್ತರಿಸಲು ಯೋಜಿಸಲಾಗುತ್ತಿದೆ ಎನ್ನುವ ಸುಳಿವನ್ನು ತೇಜಸ್ವಿ ಯಾದವ್ ಇತ್ತೀಚೆಗೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ