ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ 6 ವರ್ಷದ ಬಾಲಕಿ ಸಾವು; ರಸ್ತೆಯಲ್ಲಿ ಶವ ಇಟ್ಟು ಪೋಷಕರ ಪ್ರತಿಭಟನೆ

Rape Case: ಉತ್ತರ ಪ್ರದೇಶದ ಆಲಿಘಡದ 6 ವರ್ಷದ ಬಾಲಕಿ ಮೇಲೆ 10 ದಿನಗಳ ಹಿಂದೆ ಅತ್ಯಾಚಾರ ನಡೆದಿತ್ತು. ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಅ. 6): ಹತ್ರಾಸ್​ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದ ಪ್ರಕರಣದ ಕಾವು ಇನ್ನೂ ತಣ್ಣಗಾಗಿಲ್ಲ. ಈ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ 10 ದಿನಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ 6 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದ ಆಲಿಘಡದ 6 ವರ್ಷದ ಬಾಲಕಿ ಅತ್ಯಾಚಾರದಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಸಂಬಂಧಿಯಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯ ಶವವನ್ನು ಆಕೆಯ ಕುಟುಂಬಸ್ಥರು ಸದ್ಬಾದ್​- ಬಾಲದೇವ್ ರಸ್ತೆಯ ಮೇಲಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಬಾಲಕಿಯ ದೊಡ್ಡಮ್ಮನ ಮಗನೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಆತ ಈ ಅತ್ಯಾಚಾರ ನಡೆಸಿದ್ದ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಆಕೆಯನ್ನು ಪೋಷಕರು ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ 10 ದಿನಗಳ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೂ ಇದುವರೆಗೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಆ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮಗಳ ಸಾವಿಗೆ ಕಾರಣನಾದವನನ್ನು ಬಂಧಿಸಬೇಕು ಮತ್ತು ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಬಾಲಕಿಯ ಪೋಷಕರು ರಸ್ತೆಯಲ್ಲೇ ಆಕೆಯ ಶವವನ್ನು ಇಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಉಸಿರಾಡಲಾಗದೆ ಆಕೆ ಪರದಾಡಿದ್ದಳು. ಹಾಗೇ, ಈ ವೇಳೆ ಆಕೆಯ ನಾಲಿಗೆ ಕೂಡ ಅರ್ಧ ತುಂಡಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಕಳೆದ ಮಂಗಳವಾರ ಸಾವನ್ನಪ್ಪಿದ್ದಳು.

ಅದಾದ ಒಂದೇ ವಾರದಲ್ಲಿ ಮತ್ತೋರ್ವ ಬಾಲಕಿ ಅತ್ಯಾಚಾರದಿಂದ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶದಲ್ಲಿ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಅಲ್ಲಿನ ರಾಜ್ಯ ಸರ್ಕಾರ ತಲೆತಗ್ಗಿಸುವಂತಾಗಿದೆ. ವಿರೋಧ ಪಕ್ಷಗಳು ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲ ಎಂದು ಆರೋಪಿಸಿ, ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಪಟ್ಟುಹಿಡಿದಿದ್ದಾರೆ.
Published by:Sushma Chakre
First published: