Viral Video: ಓಡುತ್ತಿರುವ ಬಸ್, ರೈಲನ್ನು ಏರಿದಂತೆ ವಿಮಾನದ ರೆಕ್ಕೆ ಮೇಲೆಲ್ಲಾ ಹತ್ತುತ್ತಿದ್ದಾರೆ ಅಫಘನ್ನರು, ಹೇಗಾದ್ರೂ ಮಾಡಿ ದೇಶ ಬಿಟ್ಟು ಹೋಗಬೇಕಿದೆ!

Afghanistan Crisis: ವಿಮಾನದ ಬಾಗಿಲು ಮುಚ್ಚಿದ್ದರೂ ಬೆಂಬಿಡದೆ ಮೆಟ್ಟಿಲ ಮೇಲೇ ನಿಂತು ಗೋಗರೆಯುತ್ತಿರುವ ಜನ. ಜನರನ್ನು ಚದುರಿಸಲು ಅಮೇರಿಕಾ ಸೈನ್ಯಾಧಿಕಾರಿಗಳು ಗಾಳಿಯಲ್ಲಿ ಒಂದಷ್ಟು ಗುಂಡು ಹಾರಿಸಿದ್ದೂ ಆಯ್ತು. ಇಲ್ಲಿದ್ದರೆ ತಾಲಿಬಾನಿಗಳು ನಮ್ಮನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಾರೆ. ಬದುಕಿದ್ದರೆ ಎಲ್ಲಾದರೂ ಜೀವನ ನಡೆಸುತ್ತೇವೆ ಎನ್ನುತ್ತಾ ಭಂಡಧೈರ್ಯದಿಂದ ವಿಮಾನದ ಅಕ್ಕಪಕ್ಕದಲ್ಲೆಲ್ಲಾ ಏರಿ ಕುಳಿತಿದ್ದಾರೆ.

ಅಫಘನಿಸ್ತಾನ ವಿಮಾನ ನಿಲ್ದಾಣದಲ್ಲಿ ಜನರ ಪರದಾಟ

ಅಫಘನಿಸ್ತಾನ ವಿಮಾನ ನಿಲ್ದಾಣದಲ್ಲಿ ಜನರ ಪರದಾಟ

  • Share this:
Afghanistan Crisis: ಅಫ್ಘನಿಸ್ತಾನದ ಸದ್ಯದ ಪರಿಸ್ಥಿತಿ ನೋಡಿದ್ರೆ ಯಾವ ಶತ್ರುವಿಗೂ ಬೇಡ ಎನಿಸುವಂತಿದೆ. ತಾಲಿಬಾನ್ ಆಡಳಿತದಲ್ಲಿ ನರಳಿ ಸಾಯುವುದು ಯಾರಿಗೆ ತಾನೇ ಇಷ್ಟವಿರುತ್ತದೆ? ಅಫ್ಘನ್ನರಂತೂ ಒಂದೇ ಒಂದು ಅವಕಾಶ ಸಿಕ್ಕರೂ ಸಾಕು ಈ ದೇಶವನ್ನೇ ಬಿಟ್ಟು ಹೋಗುತ್ತೇವೆ ಎನ್ನುವಂತಿದ್ದಾರೆ. ಈಗಾಗಲೇ ಗಲ್ಲಿಗಳಲ್ಲಿ ತಾಲಿಬಾನ್ ಸೈನಿಕರು ಗಸ್ತು ತಿರುಗುತ್ತಿದ್ದಾರೆ. ಬಹುತೇಕ ಅಫಘನ್ ನಾಗರಿಕರು ಕಾಬುಲ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಸಿಕ್ಕ ವಿಮಾನವನ್ನು ಹತ್ತಿ ದೇಶ ಬಿಟ್ಟು ಹೋಗಿಬಿಡುವ ಧಾವಂತದಲ್ಲಿದ್ದಾರೆ. ಈ ಸಾಹಸದಿಂದ ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಕೂಡಾ. ಆದರೂ ಮತ್ತೊಂದು ವಿಮಾನ ಕಂಡಾಗ ಮತ್ತಷ್ಟು ಜನ ಅದೇ ದುಸ್ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಸದ್ಯ ಎಲ್ಲೆಡೆ ಕರುಳು ಹಿಂಡುವಂಥಾ ಅಫಘನಿಸ್ತಾನದ ದೃಶ್ಯಗಳೇ ಹರಿದಾಡುತ್ತಿವೆ. ಅದರಲ್ಲೂ ಕಾಬುಲ್ ಏರ್ಪೋರ್ಟ್​ನಿಂದ ಹೊರಟ ಅಮೇರಿಕಾದ ವಿಮಾನವನ್ನು ಹತ್ತುವ ಸಾಹಸ ಮಾಡುತ್ತಿರುವ ಜನರ ಪರಿಸ್ಥಿತಿಯಂತೂ ಶೋಚನೀಯ.

ಅಮೇರಿಕಾ ಮಿಲಿಟರಿ ವಿಮಾನವೊಂದು ಕಾಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತನ್ನ ದೇಶದ ಸೈನಿಕರನ್ನು ಕರೆದುಕೊಂಡು ಹೊರಟಿದೆ. ವಿಮಾನದ ಬಾಗಿಲು ಮುಚ್ಚಿದ್ದರೂ ಬೆಂಬಿಡದೆ ಮೆಟ್ಟಿಲ ಮೇಲೇ ನಿಂತು ಗೋಗರೆಯುತ್ತಿರುವ ಜನ. ಜನರನ್ನು ಚದುರಿಸಲು ಅಮೇರಿಕಾ ಸೈನ್ಯಾಧಿಕಾರಿಗಳು ಗಾಳಿಯಲ್ಲಿ ಒಂದಷ್ಟು ಗುಂಡು ಹಾರಿಸಿದ್ದೂ ಆಯ್ತು. ಇಲ್ಲಿದ್ದರೆ ತಾಲಿಬಾನಿಗಳು ನಮ್ಮನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಾರೆ. ಬದುಕಿದ್ದರೆ ಎಲ್ಲಾದರೂ ಜೀವನ ನಡೆಸುತ್ತೇವೆ ಎನ್ನುತ್ತಾ ಭಂಡಧೈರ್ಯದಿಂದ ವಿಮಾನದ ಅಕ್ಕಪಕ್ಕದಲ್ಲೆಲ್ಲಾ ಏರಿ ಕುಳಿತಿದ್ದಾರೆ.

ಹೇಳುವಷ್ಟು ಹೇಳಿ ಸೋತ ಅಮೇರಿಕಾ ಸೈನ್ಯ ವಿಮಾನವನ್ನು ಟೇಕಾಫ್ ಮಾಡಲು ಆದೇಶ ನೀಡಿತು. ವಿಮಾನದ ಇಂಜಿನ್ ಆನ್ ಆಗಿ ದೊಡ್ಡ ಸದ್ದಿನೊಂದಿಗೆ ರನ್​ವೇ ಮೇಲೆ ಓಡುತ್ತಿದ್ದರೂ ರೆಕ್ಕೆ ಮೇಲೆ, ಅದರ ಅಕ್ಕ ಪಕ್ಕ ಗಟ್ಟಿಯಾಗಿ ಹಿಡಿದುಕೊಂಡು ಕುಳಿತವರು ಯಾರೂ ಅಲ್ಲಾಡಲಿಲ್ಲ. ಇನ್ನೇನು ಮಾಡುತ್ತಾರೆ? ವಿಮಾನ ಟೇಕಾಫ್ ಆಗೇ ಬಿಟ್ಟಿತು. ಅಮೇರಿಕಾದ ಏರ್ ಫೋರ್ಸ್​ನ ವಿಮಾನ ಆಕಾಶಕ್ಕೆ ಚಿಮ್ಮಿ ನೇರವಾಗ್ತಿದ್ದಂತೆ ಅಕ್ಕಪಕ್ಕದಲ್ಲಿ ಅಂಟಿಕೊಂಡಿದ್ದವರು ಅಷ್ಟೆತ್ತರದಿಂದ ಕೆಳಕ್ಕೆ ಬಿದ್ದು ಅಪ್ಪಳಿಸಿದ್ದಾರೆ. ಬಿದ್ದು ಸಾವನ್ನಪ್ಪಿದ್ದಾರೆ. ಕಣ್ಣೆದುರಿಗೇ ಈ ದುರಂತ ನಡೆದಿದ್ದರೂ ಜನ ಮತ್ತಷ್ಟು ಸಾಹಸ ಮಾಡೋಕೆ ಸಜ್ಜಾಗಿದ್ದಾರೆ, ಅಫಘನಿಸ್ತಾನದ ಸದ್ಯದ ಘೋರ ಪರಿಸ್ಥಿತಿ ಹಾಗಿದೆ.

ಇದನ್ನೂ ಓದಿ: Afghanistan: ದೇಶ ಬಿಟ್ಟು ಜೀವ ಉಳಿಸೊಕೊಳ್ಳೋಕೆ ಒದ್ದಾಡ್ತಿದ್ದಾರೆ ಆಫ್ಘನ್ನರು, ಈಗ ಹೇಗಿದೆ ಅಲ್ಲಿನ ಪರಿಸ್ಥಿತಿ? ಚಿತ್ರಗಳಲ್ಲಿ ನೋಡಿ

ಭಾರತದಲ್ಲಿ ಬಸ್, ರೈಲಿನ ಮೇಲೆಲ್ಲಾ ಹೀಗೆ ಕುಳಿತ ಜನರನ್ನು ನೋಡುವುದು ಸರ್ವೇ ಸಾಮಾನ್ಯ. ಆದ್ರೆ ಇದೇ ಮೊದಲ ಬಾರಿಗೆ ವಿಮಾನದ ಮೇಲೆ ಜನ ಈ ರೀತಿ ಏರಿ ಕುಳಿತಿರುವುದು ನೋಡುಗರನ್ನು ಗಾಬರಿ ಪಡಿಸುವುದಂತೂ ಖಂಡಿತಾ. ಅಲ್ಲದೇ, ಹೀಗೆ ಜನ ವಿಮಾನ ಟೇಕಾಫ್ ಆಗೋಕೂ ಅಡ್ಡಿಯಾಗುವಂತೆ ಅಕ್ಕಪಕ್ಕ ಏರುತ್ತಿದ್ದರೆ, ಅಥವಾ ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರೆ ಆಗ ವಿಮಾನಗಳು ಟೇಕಾಫ್ ಆಗುವುದು ಅಥವಾ ಲ್ಯಾಂಡ್ ಆಗುವುದು ಎರಡೂ ಬಹಳ ಕಷ್ಟದ ಕೆಲಸವೇ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: