‘ಪೌರತ್ವ ಕಾಯ್ದೆ ಭಾರತದ ಆಂತರಿಕ ವಿಚಾರವಾದರೂ ಅನಗತ್ಯ‘: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

ಪ್ರಧಾನಿ ಶೇಖ್ ಹಸೀನಾರಿಗೆ ಮುನ್ನ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ. ಕೆ. ಅಬ್ದುಲ್​​​ ಮಮೂನ್​​ ಕೂಡ ಸಿಎಎ ಭಾರತದ ಆಂತರಿಕ ವಿಚಾರ ಎಂದಿದ್ದರು. ಈ ಕಾಯ್ದೆಯೂ ತಮ್ಮ ದೇಶದ ಮೇಲೆ ಗಂಭೀರ ಪರಿಣಾಮ ಬೀರುವುದಾದರೇ ಮಾತ್ರ ಗಮನಹರಿಸುವುದಾಗಿ ಹೇಳಿದ್ದರು.

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

 • Share this:
  ನವದೆಹಲಿ(ಜ.19): "ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಭಾರತದ ಆಂತರಿಕ ವಿಚಾರವಾದರೂ ಅನಗತ್ಯ" ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿಕೆ ನೀಡಿದ್ದಾರೆ. ಇಂದು ದುಬೈನ ಗಲ್ಫ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, "ಭಾರತ ಯಾಕೆ ಪೌರತ್ವ ಕಾಯ್ದೆ ಮಾಡಿದೆ ಎನ್ನುವುದು ಗೊತ್ತಿಲ್ಲ. ಆದರೆ, ಇಂತಹ ಕಾಯ್ದೆಗಳು ಅನಗತ್ಯ" ಎಂದು ಅಭಿಪ್ರಾಯಪಟ್ಟರು. 

  ಪ್ರಧಾನಿ ಶೇಖ್ ಹಸೀನಾರಿಗೆ ಮುನ್ನ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ. ಕೆ. ಅಬ್ದುಲ್​​​ ಮಮೂನ್​​ ಕೂಡ ಸಿಎಎ ಭಾರತದ ಆಂತರಿಕ ವಿಚಾರ ಎಂದಿದ್ದರು. ಈ ಕಾಯ್ದೆಯೂ ತಮ್ಮ ದೇಶದ ಮೇಲೆ ಗಂಭೀರ ಪರಿಣಾಮ ಬೀರುವುದಾದರೇ ಮಾತ್ರ ಗಮನಹರಿಸುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಪ್ರಧಾನಿ ಶೇಖ್ ಹಸೀನಾ ಹೀಗೆ ಹೇಳಿಕೆ ನೀಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

  ಇನ್ನು, ಬಾಂಗ್ಲಾದೇಶದಲ್ಲಿ ಸುಮಾರು 161 ದಶಲಕ್ಷ ಹಿಂದುಗಳು ನೆಲೆಸಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯ ಪೈಕಿ ಶೇ.10.7ರಷ್ಟು ಹಿಂದೂಗಳೇ ಇದ್ದಾರೆ. ಜತೆಗೆ ಶೇ.0.6ರಷ್ಟು ಬೌದ್ಧರು ಜೀವಿಸುತ್ತಿದ್ದಾರೆ. ಕೇವಲ ಧರ್ಮದ ಕಾರಣಕ್ಕೆ ನಾವು ಭಾರತಕ್ಕೆ ವಲಸೆ ಹೋಗಲಾಗುವುದಿಲ್ಲ ಎಂದಿದ್ದಾರೆ. ತಾವು ಬಾಂಗ್ಲಾದೇಶದ ಪ್ರಜೆಗಳು, ಇಲ್ಲಿಯೇ ನೆಲೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  ಪೌರತ್ವ ಕಾಯ್ದೆ ವಿರುದ್ಧ ಮುಸ್ಲಿಮರ ಆಕ್ರೋಶಕ್ಕೆ ಕಾರಣವೇನು?

  ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ, ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ವಿಚಾರದಲ್ಲಿ ಮುಸ್ಲಿಮರನ್ನು ಮಾತ್ರ ಹೊರಗಿಡಲಾಗಿದೆ ಎಂಬದು ಆ ಸಮುದಾಯದವರ ಆಕ್ರೋಶವಾಗಿದೆ. ಇದು ಮುಸ್ಲಿಮರನ್ನು ತುಳಿಯಲೆಂದೇ ಮಾಡಿರುವ ಚಿತಾವಣೆ ಎಂಬುದು ಅವರ ಭಾವನೆ. ಪೌರತ್ವ ಕಾಯ್ದೆಗಿಂತ ಎನ್​ಆರ್​ಸಿ ಯೋಜನೆಯೇ ಮುಸ್ಲಿಮರಲ್ಲಿ ಹೆಚ್ಚು ಆತಂಕ ತಂದಿರುವುದು. ರಾಷ್ಟ್ರೀಯ ಪೌರತ್ವ ನೊಂದಣಿ ಅಥವಾ ಎನ್​ಆರ್​ಸಿ ಯೋಜನೆ ಮೂಲಕ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇರುತ್ತದೆ. ಸರಿಯಾದ ದಾಖಲೆ ಒದಗಿಸಿಲ್ಲ ಎಂಬ ನೆವ ಇಟ್ಟುಕೊಂಡು ಎನ್​ಆರ್​ಸಿ ಪಟ್ಟಿಯಿಂದ ತಮ್ಮ ಸಮುದಾಯದವರನ್ನು ಕೈಬಿಡಬಹುದು. ಅಕ್ರಮ ಮುಸ್ಲಿಮ್ ವಲಸಿಗರ ಜೊತೆಗೆ ಸ್ಥಳೀಯ ಮುಸ್ಲಿಮರನ್ನೂ ಹತ್ತಿಕ್ಕುವುದು ಎನ್​ಆರ್​ಸಿಯ ಹಿಡನ್ ಅಜೆಂಡಾ ಎಂಬ ಆತಂಕ ಸೃಷ್ಟಿ ಆಗಿದೆ.

  ಇದನ್ನೂ ಓದಿ: ‘ಹಾರ್ದಿಕ್​​ ಪಟೇಲ್​​​ಗೆ ಬಿಜೆಪಿ ಪದೇಪದೇ ಕಿರುಕುಳ ನೀಡುತ್ತಿದೆ‘: ಪ್ರಿಯಾಂಕಾ ಗಾಂಧಿ ಆರೋಪ

  ಕಾಯ್ದೆ ಸಮರ್ಥಕರ ವಾದವೇನು?

  ಪೌರತ್ವ ತಿದ್ದುಪಡಿ ಕಾಯ್ದೆಯು ಮೂರು ಮುಸ್ಲಿಮ್ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಅಲ್ಲಿಯ ಅಲ್ಪಸಂಖ್ಯಾತರಿಗಷ್ಟೇ ಭಾರತೀಯ ಪೌರತ್ವ ನೀಡಲಾಗುತ್ತಿದೆ. ಅಕ್ರಮವಾಗಿ ವಲಸೆ ಬಂದಿರುವ ಮುಸ್ಲಿಮರಿಗಷ್ಟೇ ಸಮಸ್ಯೆ ಆಗುತ್ತದೆ. ಭಾರತೀಯ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂಬುದು ಕಾಯ್ದೆ ಸಮರ್ಥಕರ ವಾದ.

  ಬಾಂಗ್ಲಾದೇಶದಿಂದ ಬಂದ ಅಕ್ರಮ ಮುಸ್ಲಿಮ್ ವಲಸಿಗರು ಮತ್ತು ಬರ್ಮಾದಿಂದ ವಲಸೆ ಬಂದಿರುವ ರೋಹಿಂಗ್ಯಾ ಮುಸ್ಲಿಮರಿಂದ ದೇಶದ ಭದ್ರತೆಗೆ ಅಪಾಯವಿದೆ. ಇವರಿಗೆ ಭಾರತೀಯ ಪೌರತ್ವ ಸಿಗದಂತೆ ನೋಡಿಕೊಳ್ಳಲು ಎನ್​ಆರ್​ಸಿ ಯೋಜನೆ ಜಾರಿ ಮಾಡಲಾಗುತ್ತಿದೆ ಎಂಬ ವಾದವೂ ಇದೆ.
  First published: