ಮುಂಬೈ(ಜು.03): ಡೆಲಿವರಿ ಬಾಯ್ಗಳು ಜನರಿಗೆ ನೆರವಾಗುವ ಬಹಳಷ್ಟು ಉದಾಹರಣೆಗಳನ್ನು ನಾವು ನೋಡಿರುತ್ತೇವೆ. ಇಲ್ಲೊಂದು ಕಡೆ ಅಮೆಝಾನ್ ಡೆಲಿವರಿ ಬಾಯ್ ಸ್ಕೂಲ್ ಪಕ್ಕದಲ್ಲಿ ಹಾದು ಹೋಗುವಾಗ ಬಾಲಕಿಯ ಕಿರುಚಾಟ ಕೇಳಿ ಸಮಯೋಚಿತವಾಗಿ ಆಕೆಗೆ ನೆರವಾಗಿದ್ದಾರೆ. ಅಮೆಜಾನ್ ಡೆಲಿವರಿ ಡ್ರೈವರ್ (Delivery Boy), ಶಾಲೆಯ ವಾಚ್ಮ್ಯಾನ್ ಮತ್ತು ಥಾಣೆಯ (Thane) ಸ್ಥಳೀಯ ನಿವಾಸಿಯೊಬ್ಬರು ಶುಕ್ರವಾರ ಬೆಳಿಗ್ಗೆ ಶಾಲಾ ಬಾಲಕಿಯನ್ನು ಭೀಕರವಾದ ಗಾಯಗಳಿಂದ ರಕ್ಷಿಸಿದರು. ಶುಕ್ರವಾರ ಬೆಳಗ್ಗೆ ಸುರಿಯುತ್ತಿರುವ ಮಳೆಯ (Rain) ನಡುವೆ ಮುಂಬೈನ ಥಾಣೆಯಲ್ಲಿರುವ ವಸಂತ ವಿಹಾರ್ ಮುನ್ಸಿಪಲ್ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದೆ.
12 ವರ್ಷದ ವಿದ್ಯಾರ್ಥಿನಿಯೊಬ್ಬಳು (Student) ಶಾಲೆಯ ಮೆಟಲ್ ಗೇಟ್ ಬಳಿ ಆಟವಾಡುತ್ತಿದ್ದಾಗ ಗೇಟ್ ಕೈಕೊಟ್ಟು ಅದರ ಒಂದು ಭಾಗ ಆಕೆಯ ಕೆನ್ನೆಗೆ ಚುಚ್ಚಿದೆ. ಆಕೆಯ ಕಿರುಚಾಟವು ಶಾಲೆಯ ವಾಚ್ಮ್ಯಾನ್ಗೆ ಕೇಳಿಸಿದ್ದು ಪಕ್ಕದಲ್ಲಿಯೇ ಬೈಕ್ನಲ್ಲಿ (Bike) ಹೋಗುತ್ತಿದ್ದ ಅಮೆಜಾನ್ ಡೆಲಿವರಿ ಎಕ್ಸಿಕ್ಯೂಟಿವ್ ರವಿ ಭಂಡಾರಿ ಅವರಿಗೂ ಕೇಳಿಸಿದೆ.
ಸಹಾಯಕ್ಕಾಗಿ ಬಾಲಕಿಯ ಕೂಗು ಕೇಳಿದ ನಂತರ ಆತ ತನ್ನ ಬೈಕ್‌ನಿಂದ ಜಿಗಿದು ಬಾಲಕಿಯ ಕಡೆಗೆ ಧಾವಿಸಿದ್ದಾರೆ. ನಾನು ಹತ್ತಿರವಾಗುತ್ತಿದ್ದಂತೆ, ಗೇಟ್‌ನ ಲೋಹದ ತುಂಡು ಹುಡುಗಿಯ ಮುಖದ ಬಲಭಾಗದಲ್ಲಿ ಆಕೆಯ ಕಣ್ಣಿಗೆ ಬಹಳ ಹತ್ತಿರದಲ್ಲಿ ಹುದುಗಿದೆ ಎಂದು ನಾನು ನೋಡಿದೆ ಎಂದು ಅವರು ಫ್ರೀ ಪ್ರೆಸ್ ಜರ್ನಲ್‌ಗೆ ತಿಳಿಸಿದರು. ಹುಡುಗಿ ಭಯಭೀತಳಾಗಿದ್ದಳು. ಅವಳ ಕಡೆಯಿಂದ ಯಾವುದೇ ಚಲನೆಯು ಹೆಚ್ಚು ಗಂಭೀರವಾದ ಗಾಯಕ್ಕೆ ಕಾರಣವಾಗಬಹುದು ಎನ್ನುವುದು ನಮಗೆ ತಿಳಿಯಿತು ಎಂದಿದ್ದಾರೆ.
ಭಂಡಾರಿ 30 ನಿಮಿಷಗಳ ಕಾಲ ಲೋಹದ ಗೇಟ್ ಅನ್ನು ಹಿಡಿದಿಟ್ಟುಕೊಂಡರು, ಅದು ಶಾಲಾ ವಿದ್ಯಾರ್ಥಿನಿಯನ್ನು ಮತ್ತಷ್ಟು ಗಾಯಗೊಳಿಸುವುದಿಲ್ಲ ಎಂದು ಖಚಿತಪಡಿಸಿಕೊಂಡರು. ಅಷ್ಟರಲ್ಲಿ ಶಾಲೆಯ ಎದುರುಗಡೆ ವಾಸಿಸುವ ಸ್ಥಳೀಯ ನಿವಾಸಿ ಪ್ರತೀಕ್ ಸಾಳುಂಕೆ ಎಂಬವರು ಗಲಾಟೆಯನ್ನು ಕೇಳಿ ತಮ್ಮ ಮೂರನೇ ಅಂತಸ್ತಿನ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಧಾವಿಸಿದರು.
ಅಕ್ಕಪಕ್ಕದಿಂದ ಸಹಾಯಕ್ಕೆ ಬಂದ ಜನ
ಸಾಳುಂಕೆ ಮತ್ತು ಶಾಲಾ ಕಾವಲುಗಾರನು ಸಹಾಯಕ್ಕಾಗಿ ಹತ್ತಿರದ ವಸಂತ ವಿಹಾರ್ ಪುರಸಭೆಯ ಆಸ್ಪತ್ರೆಯನ್ನು ಸಂಪರ್ಕಿಸಲು ದಾರಿಹೋಕನನ್ನು ವಿನಂತಿಸಿದನು. ನಂತರ ಡಾ ಮುಷ್ತಾಕ್ ಖಾನ್ ನೇತೃತ್ವದ ತಂಡವು ಸ್ಥಳಕ್ಕೆ ಧಾವಿಸಿತು.
ಇದನ್ನೂ ಓದಿ: Covid-19: ಲಕ್ಷ ದಾಟಿದ ಕೊರೋನಾ ಕೇಸ್, ಒಂದೇ ದಿನ 31 ಸೋಂಕಿತರು ಸಾವು
ಡಾ.ಖಾನ್ ಬಾಲಕಿಯ ಕೆನ್ನೆಯಲ್ಲಿ ಹುದುಗಿದ್ದ ಲೋಹದ ತುಂಡನ್ನು ಯಶಸ್ವಿಯಾಗಿ ತೆಗೆದುಹಾಕುವಲ್ಲಿ ಯಶಸ್ವಿಯಾದರು ಮತ್ತು ಆಕೆಯನ್ನು ಆಕೆಯ ಪೋಷಕರೊಂದಿಗೆ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಬಾಲಕಿ ಶಾಲೆಗೆ ಮರಳಿ ಬರುವಂತಾಗಿದೆ.
ಜನರ ಮೆಚ್ಚುಗೆ
ತನ್ನದೇ ಗಡಿಬಿಡಿಯಲ್ಲಿ ಹೋಗುತ್ತಿರುವಾಗಲೂ ಡೆಲಿವರಿ ಬಾಯ್ ಸಹಾಯದ ಕೂಗನ್ನು ಕೇಳಿ ಬೈಕ್ ನಿಲ್ಲಿಸಿ ನೆರವಾಗಿರುವ ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಡೆಲಿವರಿ ಬಾಯ್ ನೆರವಾಗದಿದ್ದರೆ ಬಾಲಕಿಯ ಕಣ್ಣಿಗೂ ಗಾಯವಾಗುವ ಎಲ್ಲಾ ಸಾಧ್ಯತೆಗಳೂ ಇದ್ದವು. ಅಂತೂ ಸದ್ಯ ಬಾಲಕಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ.
ಇದನ್ನೂ ಒದಿ: Love Proposal: 13 ವರ್ಷ ಹಿಂದೆ ಕಸಿನ್ ಕೈ ಹಿಡಿದು ಮದುವೆಯಾಗ್ತೀಯಾ ಎಂದು ಕೇಳಿದವನಿಗೆ ಜೈಲು
ಫುಡ್ ಡೆಲಿವರಿ ಬಾಯ್ಸ್, ಅಥವಾ ಇತರ ಕೊರಿಯರ್ ಸರ್ವೀಸ್ ಹುಡುಗರ ಮಾನವೀಯತೆ ಮೆರೆಯುತ್ತಿರುವುದು ಇದೇ ಮೊದಲೇನಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಅವರು ಜನರಿಗೆ ನೆರವಾಗಿ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಕೊರೋನಾ ಸಂದರ್ಭದಲ್ಲಿ ಮಾತ್ರ ಈ ವರ್ಗದ ಕೆಲಸಗಾರರು ಕೆಲಸ ಕಳೆದುಕೊಂಡು ಪರದಾಡುವ ಸ್ಥಿತಿ ಸೃಷ್ಟಿಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ