ಹತ್ರಾಸ್​ ಪ್ರಕರಣದ ಸಿಬಿಐ ಮೇಲ್ವಿಚಾರಣೆಯನ್ನು ಅಲಹಾಬಾದ್​ ಹೈಕೋರ್ಟ್​ ನಿರ್ವಹಿಸಲಿ; ಸುಪ್ರೀಂ ಆದೇಶ

ಸಂತ್ರಸ್ತ ಮೃತ ಯುವತಿಯ 'ಅವಸರದ ಶವಸಂಸ್ಕಾರ' ದ ಕುರಿತು ಅಲಹಾಬಾದ್ ನ್ಯಾಯಾಲಯದಲ್ಲಿ ಸುಮೋಟೋ ಪ್ರಕರಣವನ್ನು ದಾಖಲಿಸಲಾಗಿದೆ. ಈ ವಿಚಾರಣೆಯನ್ನೂ ಸಹ ಅಲಹಾಬಾದ್​ ಕೋರ್ಟ್​ ಪರಿಶಿಲಿಸುತ್ತಿದೆ. ಹೀಗಾಗಿ ಸಿಬಿಐ ತನಿಖೆಯ ಮೇಲ್ವಿಚಾರಣೆಯನ್ನು ಅಲ್ಲಿಗೆ ವಹಿಸಲಾಗಿದೆ ಎಂದು ಸುಪ್ರೀಂ ತಿಳಿಸಿದೆ.

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

  • Share this:
    ನವ ದೆಹಲಿ (ಅಕ್ಟೋಬರ್​ 27); ಉತ್ತರಪ್ರದೇಶದ ಹತ್ರಾಸ್​ನಲ್ಲಿನ ದಲಿತ ಯುವತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಸಿಬಿಐ ನೇತೃತ್ವದಲ್ಲಿ ನಡೆಯುತ್ತಿದೆ. ಈ ತನಿಖೆಯನ್ನು ಅಲಹಾಬಾದ್​ ಹೈಕೋರ್ಟ್​ ಮೇಲ್ವಿಚಾರಣೆ ಮಾಡಲಿದೆ ಎಂದು ಸುಪ್ರೀಂ ಕೋರ್ಟ್​ ಇಂದು ಸ್ಪಷ್ಟಪಡಿಸಿದೆ. ಕಳೆದ ತಿಂಗಳು ಹತ್ರಾಸ್​ ಎಂಬಲ್ಲಿ 19 ವರ್ಷದ ದಲಿತ ಯುವತಿಯನ್ನು ಅದೇ ಊರಿನ ಕೆಲ ಮೇಲ್ಜಾತಿಯವರು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಸಂತ್ರಸ್ತೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನಿನ ಮೂಲೆ ಮುರಿದು ಅಮಾನವೀಯವಾಗಿ ಕೊಲೆ ಮಾಡಲಾಗಿತ್ತು. ಹೀಗಾಗಿ ಈ ಪ್ರಕರಣ ಇಡೀ ರಾಷ್ಟ್ರಾಧ್ಯಂತ ಸದ್ದು ಮಾಡಿತ್ತು. ಜನಕ್ರೋಶಕ್ಕೆ ಮಣಿದಿದ್ದ ಉತ್ತರಪ್ರದೇಶ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಆದರೆ, ಈ ಪ್ರಕರಣದ ತನಿಖೆ ಸುಪ್ರೀಂ ಕೋರ್ಟ್​ ಮೇಲ್ವಿಚಾರಣೆಯಲ್ಲೇ ನಡೆಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತೆ ಸತ್ಯಮಾ ದುಬೆ ಸುಪ್ರೀಂ ಕೋರ್ಟ್​​ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು.

    ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ, ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಇಂದು ಈ ಸಾಮಾಜಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಪ್ರಕರಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯ, "ಹತ್ರಾಸ್ ಪ್ರಕರಣದ ತನಿಖೆಯ ಎಲ್ಲಾ ಅಂಶಗಳನ್ನು ಅಲಹಾಬಾದ್ ಹೈಕೋರ್ಟ್ ಪರಿಶೀಲಿಸಲಿದೆ. ಪ್ರಸ್ತುತ, ಈ ಪ್ರಕರಣವು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಲ್ಲಿದ್ದು, ತನಿಖಾ ಸ್ಥಿತಿಗತಿಗಳ ವರದಿಯೊಂದಿಗೆ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು"ಎಂದು ಹೇಳಿದೆ. ಈ ಮೂಲಕ ಸುಪ್ರೀಂ ಕೋರ್ಟ್​ ಸದ್ಯಕ್ಕೆ ಈ ಪ್ರಕರಣದ ವಿಚಾರಣೆಯಲ್ಲಿ ತಲೆ ಹಾಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

    ಅಲ್ಲದೆ, "ಸಂತ್ರಸ್ತ ಮೃತ ಯುವತಿಯ 'ಅವಸರದ ಶವಸಂಸ್ಕಾರ' ದ ಕುರಿತು ಅಲಹಾಬಾದ್ ನ್ಯಾಯಾಲಯದಲ್ಲಿ ಸುಮೋಟೋ ಪ್ರಕರಣವನ್ನು ದಾಖಲಿಸಲಾಗಿದೆ. ಈ ವಿಚಾರಣೆಯನ್ನೂ ಸಹ ಅಲಹಾಬಾದ್​ ಕೋರ್ಟ್​ ಪರಿಶಿಲಿಸುತ್ತಿದೆ. ಹೀಗಾಗಿ ಸಿಬಿಐ ತನಿಖೆಯ ಮೇಲ್ವಿಚಾರಣೆಯನ್ನು ಅಲ್ಲಿಗೆ ವಹಿಸಲಾಗಿದೆ" ಎಂದು ಸುಪ್ರೀಂ ತಿಳಿಸಿದೆ.

    ವಕೀಲೇ, ಸಾಮಾಜಿಕ ಕಾರ್ಯಕರ್ತೆ ಇಂದಿರಾ ಜೈಸಿಂಗ್ ಸೇರಿದಂತೆ ಹಲವಾರು ವಕೀಲರು ಉತ್ತರಪ್ರದೇಶದಲ್ಲಿ ಹತ್ರಾಸ್ ಪ್ರಕರಣದ ನ್ಯಾಯಯುತ ತನಿಖೆ ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು. ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದಿಂದ ದೆಹಲಿಗೆ ವರ್ಗಾಯಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

    ಪ್ರಕರಣ ಸಂಬಂಧ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ, ಮೃತ ಸಂತ್ರಸ್ತೆಯ ಅಂತ್ಯಕ್ರಿಯೆ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಪ್ರಶ್ನೆಗಳನ್ನು ಕೇಳಿತ್ತು. ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸರ ಕ್ರಮವನ್ನು ಕಟುವಾಗಿ ಟೀಕಿಸಿತ್ತು. ಅವಸರದ ಅಂತ್ಯಸಂಸ್ಕಾರಕ್ಕೆ ಬೇಸರ ವ್ಯಕ್ತಪಡಿಸಿತ್ತು.

    ಇದನ್ನೂ ಓದಿ : ಹತ್ರಾಸ್​ ಅತ್ಯಾಚಾರ ಪ್ರಕರಣ: ಸಿಎಂ ಯೋಗಿ ರಾಜೀನಾಮೆಗೆ ಮಹಿಳಾ ಸಂಘಟನೆಗಳಿಂದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ

    ಹತ್ರಾಸ್ ಪ್ರಕರಣ ಕುರಿತು ಅ.29ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳು ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ.

    ಅಖಿಲ ಭಾರತ ಪ್ರಜಾಸತ್ಮಾತ್ಮಕ ಮಹಿಳಾ ಸಂಘ, ರಾಷ್ಟ್ರೀಯ ಮಹಿಳಾ ಒಕ್ಕೂಟ, ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘ, ಪ್ರಗತಿಶೀತ್ ಮಹಿಳಾ ಸಂಘಟನೆ ಮತ್ತು ಇತರ ಸಂಘ ಸಂಸ್ಥೆಗಳು, ಹೋರಾಟಗಾರರು ಸೇರಿ ಪ್ರತಿಭಟನೆ ನಡೆಸುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
    Published by:MAshok Kumar
    First published: