Taj Mahal​ನ 22 ಮುಚ್ಚಿದ ಕೋಣೆ ತೆಗೆಸಿ ಎಂಬ ಅರ್ಜಿ ತಿರಸ್ಕರಿಸಿದ ಅಲಹಾಬಾದ್​ ಕೋರ್ಟ್​​​

ತಾಜ್ ಮಹಲ್

ತಾಜ್ ಮಹಲ್

ಈ ರೀತಿಯ ಅರ್ಜಿ ಸಲ್ಲಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೌಲ್ಯ ಕುಗ್ಗಿಸಬೇಡಿ ಎಂದು ಚಾಟಿ ಬೀಸಿದೆ.

  • Share this:

    ತಾಜ್​ ಮಹಲ್ (Taj mahal) ​ನಲ್ಲಿರುವ ಮುಚ್ಚಿದ 22 ಕೊಠಡಿಗಳ ಬಾಗಿಲು ತೆರಿಸಿ. ಸತ್ಯ ಏನೇ ಇದ್ದರೂ ಪರವಾಗಿಲ್ಲ ಅದು ಜನರಿಗೆ ತಿಳಿಯಬೇಕು ಎಂದು ಅಲಹಾಬಾದ್​ ಹೈ ಕೋರ್ಟ್​ಗೆ (Allahabad High Court) ಅರ್ಜಿ ಸಲ್ಲಿಸಿದ್ದ ಬಿಜೆಪಿ ನಾಯಕ ರಜನೀಶ್​ ಸಿಂಗ್​ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ತಾಜ್​ ಮಹಲ್​ ಇತಿಹಾಸ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಇಂದು ತಾಜ್​ ಮಹಲ್​ ಕೋಣೆಯೊಳಗೆ ಏನಿದೆ ಎಂದು ಪ್ರಶ್ನಿಸುತ್ತೀರಾ. ನಾಳೆ ನ್ಯಾಯಾಲಯದ ಕೋಣೆಯಲ್ಲಿ ಏನಿದೆ  ಎಂಬುದನ್ನು ನೋಡಬೇಕು ಎಂದು ಅರ್ಜಿ ಸಲ್ಲಿಸುತ್ತೀರಾ. ಈ ರೀತಿಯ ಅರ್ಜಿ ಸಲ್ಲಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೌಲ್ಯ ಕುಗ್ಗಿಸಬೇಡಿ ಎಂದು ಚಾಟಿ ಬೀಸಿದೆ.


    ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ
    ಇನ್ನು ಅಲಹಾಬಾದ್​ ದ್ವಿ ಸದಸ್ಯ ಪೀಠ ತಮ್ಮ ಅರ್ಜಿ ತಿರಸ್ಕರಿಸಿದ ಹಿನ್ನಲೆ ಅರ್ಜಿದಾರ ಆಗಿರುವ ಬಿಜೆಪಿ ನಾಯಕ ಪರ ವಕೀಲ ರುದ್ರ ವಿಕ್ರಮ್​ ಸಿಂಗ್​, ಈ ಆದೇಶವನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಸುಪ್ರೀಂ ಕೋರ್ಟ್‌ಗೆ ಹೋಗುವ ಮೊದಲು ನಾವು ಇತಿಹಾಸ ಇಲಾಖೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಸಂಪರ್ಕಿಸುತ್ತೇವೆ ಎಂದಿದ್ದಾರೆ.


    ಮುಚ್ಚಿದ ಕೋಣೆ ರಹಸ್ಯ ಬಹಿರಂಗಕ್ಕೆ ಅರ್ಜಿ


    ತಾಜ್ ಮಹಲ್‌ನಲ್ಲಿರುವ 22 ಮುಚ್ಚಿದ ಬಾಗಿಲುಗಳ ಏನಿದೆ ಎಂಬುದನ್ನು ತನಿಖೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಈ ಕೋಣೆಯೊಳಗೆ ಹಿಂದೂ ದೇವತ ವಿಗ್ರಹಗಳು ಇರಬಹುದು. ಈ ಹಿನ್ನಲೆ ತಾಜ್​ ಮಹಲ್​ ಇತಿಹಾಸದ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ್ದರು.


    ನ್ಯಾಯ ಸಮ್ಮತವಲ್ಲದ ಅರ್ಜಿ


    ಈ ಅರ್ಜಿಯನ್ನು ಇಂದು ಕೈಗೆತ್ತಿಕೊಂಡ ದ್ವಿ ಸದಸ್ಯ ಪೀಠ, ತಾಜ್‌ಮಹಲ್‌ನ ಹಿಂದಿನ ನಿಜವಾದ ಸತ್ಯವನ್ನು ಕಂಡುಹಿಡಿಯಲು ಸತ್ಯಶೋಧನಾ ಸಮಿತಿಯನ್ನು ರಚಿಸಬೇಕೆಂಬ ಮನವಿಯು ನ್ಯಾಯಸಮ್ಮತವಲ್ಲದ ವಿಷಯವಾಗಿದೆ. ನ್ಯಾಯಾಲಯದಲ್ಲಿ ಇಂತಹ ಮನವಿಗಳನ್ನು ನಿರ್ಣಯಿಸಲು ಸಾಧ್ಯವಿಲ್ಲ. ಪರಿಶೀಲಿಸಲು ಸತ್ಯಶೋಧನಾ ಸಮಿತಿಯನ್ನು ಕೇಳುವುದು ನಿಮ್ಮ ಹಕ್ಕುಗಳ ವ್ಯಾಪ್ತಿಗೆ ಬರುವುದಿಲ್ಲ, ಅದು ಆರ್‌ಟಿಐ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಪೀಠ ತಿಳಿಸಿದೆ.


    ಇದನ್ನು ಓದಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸರ್ವೆ ನಿಲ್ಲಿಸ್ಬೇಡಿ; ಕೋರ್ಟ್ ಖಡಕ್ ಸೂಚನೆ


    ಜೊತೆಗೆ ಹಕ್ಕುಗಳನ್ನು ಉಲ್ಲಂಘಿಸಿದಾಗ ಮಾತ್ರ ಇಂತಹ ಮ್ಯಾಂಡಮಸ್ ಅನ್ನು ನೀಡಬಹುದು. ನಿಮ್ಮ ಯಾವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಪೀಠ ಪ್ರಶ್ನಿಸಿತು


    ತಾಜ್​ ಮಹಲ್​ ಭೂಮಿ ಜೈಪುರ ರಾಜರದ್ದು ಎಂದಿದ್ದ ಬಿಜೆಪಿ ಸಂಸದೆ
    ಇನ್ನು ತಾಜ್​ ಮಹಲ್​ ಕುರಿತು ನಿನ್ನೆ ಹೇಳಿಕೆ ನೀಡಿದ್ದ ಮಧ್ಯಪ್ರದೇಶ ಬಿಜೆಪಿ ಸಂಸದೆ ದಿಯಾ ಕುಮಾರಿ, ತಾಜ್​​ಮಹಲ್​ ಇರುವ ಭೂಮಿ ಜೈಪುರ ಆಳಿದ್ದ ಜೈ ಸಿಂಗ್​ಗೆ ಸೇರಿದ್ದು, ಈ ಭೂಮಿಗೆ ಪರಿಹಾರ ನೀಡಲಾಗಿದೆಯಾ ಇಲ್ಲವೋ ಎಂಬುದು ನನಗೆ ತಿಳಿಯದು. ಈ ಸಂಬಂಧ ನಾನು ಪೋತಿಖಾನದಲ್ಲಿನ ದಾಖಲೆ ಅಧ್ಯಯನ ಮಾಡಿಲ್ಲ. ಆದರೆ, ಆದರೆ ಈ ಭೂಮಿ ನಮ್ಮ ಕುಟುಂಬಕ್ಕೆ ಸೇರಿದ್ದು ಮತ್ತು ಷಹಜಹಾನ್ ಅದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಹಿಂದಿನ ಜೈಪುರ ರಾಜಮನೆತನದ ಸದಸ್ಯೆ ಕುಮಾರಿ ಹೇಳಿದ್ದಾರೆ ಎಂದು ಅವರು ತಿಳಿಸಿದ್ದರು.


    ಇದನ್ನು ಓದಿ: ಷಹಜಹಾನ್ ತಾಜ್ ಮಹಲನ್ನು ಮಧ್ಯಪ್ರದೇಶದಲ್ಲಿ ಕಟ್ಬೇಕು ಅನ್ಕೊಂಡಿದ್ನಂತೆ, ಆಗ್ರಾಗೆ ಶಿಫ್ಟ್ ಆಗಿದ್ದು ಹೇಗೆ?


    1653ರಲ್ಲಿ ಮೊಘಲ್​ ರಾಜ ಶಹಾಜಹಾನ್​ ತನ್ನ ಹೆಂಡತಿ ಮುಮ್ತಾಜ್​ ನೆನೆಪಿಗಾಗಿ ತಮ್ಮ ಪ್ರೀತಿಯ ಸಂಕೇತವಾಗಿ ಈ ತಾಜ್​ ಮಹಲ್ ಅನ್ನು ನಿರ್ಮಿಸಲಿದ್ದ. 1632ರಲ್ಲಿ ಶುರುವಾದ ಈ ಸ್ಮಾರಕ 1653ರಲ್ಲಿ 22 ವರ್ಷಗಳ ಬಳಿಕ ಪೂರ್ಣಗೊಂಡಿತು. ಸದ್ಯ ಈ ಮೊಘಲ್​ ಕಾಲದ ಸ್ಮಾರಕವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ರಕ್ಷಣೆ ಮಾಡುತ್ತಿದೆ. ಇನ್ನು ಈ ಸ್ಮಾರಕ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದು, ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಎಂಬ ಕೀರ್ತಿಯನ್ನು ಹೊಂದಿದೆ.

    Published by:Seema R
    First published: