ಭಾರತ (India) ಒಂದು ವೈವಿಧ್ಯಮಯ ದೇಶವಾಗಿದೆ. ಇಲ್ಲಿ ಎಲ್ಲ ರೀತಿಯ, ಎಲ್ಲ ಬಗೆಯ ಹಾಗೂ ವಿವಿಧ ಧರ್ಮಗಳನ್ನು (Religion) ಪರಿಪಾಲಿಸುವ ಜನರಿದ್ದಾರೆ. ಅಂತೆಯೇ ಭಾರತದಲ್ಲಿ ಪ್ರಮುಖವಾಗಿ ಎರಡು ಧರ್ಮಗಳನ್ನು ಮಂಚೂಣಿಯಲ್ಲಿ ಕಾಣಬಹುದಾಗಿದೆ. ಬಹುಸಂಖ್ಯೆಯಲ್ಲಿರುವ ಹಿಂದು ಧರ್ಮ ಒಂದು ಪ್ರಮುಖವಾಗಿದ್ದರೆ ತದನಂತರ ಮುಸ್ಲಿಮ್ (Muslim) ಧರ್ಮದ ಜನರನ್ನು ಕಾಣಬಹುದಾಗಿದೆ. ಇನ್ನು, ಆಡಳಿತಾತ್ಮಕ ವಿಚಾರ ಬಂದಾಗ ದೇಶದಲ್ಲಿ ಯಾವುದೇ ರೀತಿಯ ಅವಘಡಗಳು ಉಂಟಾಗದಿರಲು ಹಾಗೂ ಆಯಾ ಧರ್ಮಗಳ ಭಾವನೆಗಳ ದೃಷ್ಟಿಯಿಂದ ಹಿಂದು (Hindu) ವೈಯಕ್ತಿಕ ಕಾನೂನು (Law) ಹಾಗೂ ಮುಸ್ಲಿಮ್ ವೈಯಕ್ತಿಕ ಕಾನೂನು ಎಂಬ ಸಂವಿಧಾನಾತ್ಮಕವಾದ ಶಾಸನಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.
ಆದರೆ, ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ನಡೆಯಬಹುದಾದ ಕೆಲವು ಅಭ್ಯಾಸಗಳನ್ನು ಸಮಭಾವಿಕ ಜನರು ಹಿಂದಿನಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆಂದರೂ ತಪ್ಪಿಲ್ಲ. ಇದೀಗ ಮತ್ತೊಮ್ಮೆ ಈ ಬಗ್ಗೆ ವಿಚಾರವೊಂದು ಮುನ್ನೆಲೆಗೆ ಬಂದಂತಾಗಿದೆ.
ಇತ್ತೀಚೆಗೆ ನಡೆದ ಬೆಳವಣಿಗೆಯೊಂದರಲ್ಲಿ ಅಲ್ಲಹಾಬಾದ್ ಉಚ್ಛ ನ್ಯಾಯಾಲಯದ ಪೀಠಕ್ಕೆ ಐಪಿಸಿ ಸೆಕ್ಷನ್ 494 ರ ಶಾಸನಬದ್ಧತೆ ಹಾಗೂ ಮುಸ್ಲಿಂ ವೈಯಕ್ತಿಕ ಕಾನೂನು ಕಾಯಿದೆ 1937 ಗೆ (ಷರಿಯತ್) ಸಂಬಂಧಿಸಿದಂತೆ ಪ್ರಶ್ನಿಸಿ ಸಲ್ಲಿಸಲಾದ ಮನವಿಯೊಂದರ ಹಿನ್ನೆಲೆಯಲ್ಲಿ, ಪೀಠವು ಅಟಾರ್ನಿ ಜನರಲ್ ಆಫ್ ಇಂಡಿಯಾಗೆ ಲಿಖಿತ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ: Hyderabad: ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದ ರಸ್ತೆ ಬದಿ ವ್ಯಾಪಾರಿಗಳು: ವಿಷವಾಗುತ್ತಿದೆ ಸ್ಟ್ರೀಟ್ ಫುಡ್
ಕಳೆದ ಫೆಬ್ರುವರಿ 27 ರಂದು, ನ್ಯಾ. ದೇವೇಂದ್ರ ಕುಮಾರ್ ಉಪಾಧ್ಯಾಯ ಹಾಗೂ ನ್ಯಾ. ಸುಭಾಶ್ ವಿದ್ಯಾರ್ಥಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಈ ಕುರಿತು ಆದೇಶವನ್ನು ಹೊರಡಿಸಿದೆ. ಮೂಲತಃ ಪೀಠವು ಹಿಂದು ವೈಯಕ್ತಿಕ ಕಾನೂನಿನ ಪ್ರಧಾನ ಕಾರ್ಯದರ್ಶಿಯಾದ ಪವನ್ ಕುಮಾರ್ ದಾಸ್ ಶಾಸ್ತ್ರಿ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ನೋಟಿಸ್ ಆದೇಶ ಹೊರಡಿಸಿರುವುದಾಗಿ ತಿಳಿದುಬಂದಿದೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನಿನ ಸಿಂಧುತ್ವ ಪ್ರಶ್ನಿಸಲಾಗಿರುವುದರಿಂದ ಹಾಗೂ ನ್ಯಾಯಾಲಯದಿಂದ ಐಪಿಸಿ ಸೆಕ್ಷನ್ 494 ಗೆ ಸಂಬಂಧಿಸಿದಂತೆ ಇದು ಒಬ್ಬರ ಅಧಿಕಾರ ಮೀತಿಯನ್ನು ಮೀರಿದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ಬಯಸಿರುವುದರಿಂದ ಅಟಾರ್ನಿ ಜನರಲ್ ಅವರಿಗೆ ಈ ಬಗ್ಗೆ ನೋಟಿಸ್ ಜಾರಿ ಮಾಡಬೇಕಾಗಿರುವುದು ಸಮಂಜಸವಾಗಿರುವುದಾಗಿ ಹೈಕೋರ್ಟ್ ಪೀಠ ಹೇಳಿದೆ.
ಈ ಹಿಂದೆಯೂ 2018 ರಲ್ಲಿ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠವು, ಪಾಲಿಗಾಮಿ ಅಭ್ಯಾಸವನ್ನು ಪ್ರಶ್ನಿಸಿ ಹಾಗೂ ವೈಯಕ್ತಿಕ ಮುಸ್ಲಿಮ್ ಕಾನೂನಿನಡಿಯಲ್ಲಿ ಅಭ್ಯಸಿಸಲಾಗುತ್ತಿರುವ ಕೆಲ ಅಭ್ಯಾಸಗಳನ್ನು ಅಸಂವಿಧಾನಿಕ ಎಂದು ಹೇಳಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ಆಧಾರದ ಮೇಲೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ ಈ ಪ್ರಕರಣವನ್ನು ಅದು ಅಂತಿಮ ಹಿಯರಿಂಗ್ ಗಾಗಿ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು.
ಅರ್ಜಿದಾರರ ಪರ ವಕೀಲರಾಗಿರುವ ಅಶೋಕ್ ಪಾಂಡೆ ಅವರ ಪ್ರಕಾರ, ಈ ಸೆಕ್ಷನ್ 494 ಎಂಬುದು ಕೇವಲ ಹಿಂದುಗಳಿಗೆ, ಕ್ರೈಸ್ತರಿಗೆ, ಬೌದ್ಧರಿಗೆ, ಸಿಖ್ಖರಿಗೆ ಮಾತ್ರ ಅನ್ವಯವಾಗಲಿದ್ದು ಇದರಲ್ಲಿ ಮುಸ್ಲಿಮರನ್ನು ಹೆಸರಿಸಲಾಗಿಲ್ಲ.
ಈ ವಿಷಯಡಡಿಯಲ್ಲಿ, 1937 ಆಕ್ಟ್ ಪ್ರಕಾರ ಮುಸ್ಲಿಮರಿಗೆ ಸಂರಕ್ಷಣೆ ನೀಡಲಾಗಿರುವುದರಿಂದ ಅವರನ್ನು ಈ ಸೆಕ್ಷನ್ ಅನ್ವಯವಾಗುವುದಿಲ್ಲ ಎಂದಾಗಿದೆ.
ಏನಿದು ಐಪಿಸಿ ಸೆಕ್ಷನ್ 494
ಇದೊಂದು ಕಾನೂನುಬದ್ಧ ಶಾಸನವಾಗಿದ್ದು ಇದರಡಿಯಲ್ಲಿ, ಯಾವುದೇ ವ್ಯಕ್ತಿಯ ಗಂಡ ಅಥವಾ ಹೆಂಡತಿ ಜೀವಿತವಾಗಿರುವಾಗ ಯಾವುದೇ ಸಂದರ್ಭದಲ್ಲಿ ಆ ವ್ಯಕ್ತಿ ಇನ್ನೊಂದು ಮದುವೆ ಮಾಡಿಕೊಳ್ಳಲಾರ ಹಾಗೂ ಮಾಡಿಕೊಂಡಿದ್ದೇ ಆದಲ್ಲಿ ಆ ಮದುವೆಗೆ ಯಾವುದೇ ಸಿಂಧುತ್ವವಿರುವುದಿಲ್ಲ ಹಾಗೂ ಆ ವ್ಯಕ್ತಿ ಕಾನೂನಿನಡಿಯಲ್ಲಿ ಶಿಕ್ಷಾರ್ಹನಾಗಿರುತ್ತಾನೆ ಎಂದಾಗಿದೆ.
ಪ್ರಸ್ತುತ ಈ ಸೆಕ್ಷನ್ ಕುರಿತಂತೆ ಭಾರತದ ಅಟಾರ್ನಿ ಜನರಲ್ ಅವರಿಗೆ ಅಲ್ಲಹಾಬಾದ್ ಹೈಕೋರ್ಟ್ ಪೀಠವು ಉತ್ತರಿಸುವಂತೆ ಆದೇಶಿಸಿ ಕೋರ್ಟ್ ನೋಟಿಸ್ ನೀಡಿದೆ. ಇದಕ್ಕೆ ಅ.ಜನರಲ್ ಅವರ ಕಡೆಯಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ