ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ಕಣ್ಣು; ಇದು ಲೋಕಸಭೆಗೆ ಸೆಮಿಫೈನಲಾ?
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ, ತೆಲಂಗಾಣ ಮತ್ತು ಮಿಝೋರಾಮ್ ರಾಜ್ಯಗಳಲ್ಲಿ ಮತದಾರರು ನೀಡಿರುವ ತೀರ್ಪು ಬಿಡುಗಡೆಗೆ ಸಿದ್ಧವಾಗಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ.
ಬೆಂಗಳೂರು(ಡಿ. 10): ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡ, ತೆಲಂಗಾಣ ಮತ್ತು ಮಿಝೋರಾಮ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದತ್ತ ಎಲ್ಲರ ಕಣ್ಣು ನೆಟ್ಟಿದೆ. ಲೋಕಸಭೆ ಚುನಾವಣೆಗೆ ಮುನ್ನ ನಡೆದಿರುವ ಪ್ರಮುಖ ಚುನಾವಣಾ ಹಣಾಹಣಿ ಇದಾಗಿರುವುದರಿಂದ ಈ ಐದು ರಾಜ್ಯಗಳ ಮತದಾರರು ನೀಡುವ ತೀರ್ಪಿನ ಬಗ್ಗೆ ತೀವ್ರ ಕುತೂಹಲವಿದೆ. ಒಟ್ಟು 679 ವಿಧಾನಸಭಾ ಕ್ಷೇತ್ರಗಳಲ್ಲಿ ಜನನಾಯಕರು ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಮಂಗಳವಾರ ಮಧ್ಯಾಹ್ನದಷ್ಟರಲ್ಲಿ ಉತ್ತರ ಸಿಗಲಿದೆ. ಮಂಗಳವಾರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ನ್ಯೂಸ್18 ಕನ್ನಡದ ವಾಹಿನಿ ಮತ್ತು ವೆಬ್ಸೈಟ್ನಲ್ಲಿ ನೀವು ಮತ ಎಣಿಕೆಯ ಕ್ಷಣಕ್ಷಣದ ವಿವರವನ್ನೂ ಪಡೆಯಬಹುದು. ವೆಬ್ಸೈಟ್ನಲ್ಲಿ ಲೈವ್ ಸ್ಕೋರ್ ಜೊತೆಗೆ ಲೈವ್ ಬ್ಲಾಗ್ನಲ್ಲೂ ಎಲ್ಲಾ ಮಾಹಿತಿ ಪಡೆಯಬಹುದು.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡ ಈ ಮೂರು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಒಂದೇ ರೇಖೆಯಲ್ಲಿ ಬರುವ ಈ ಮೂರೂ ರಾಜ್ಯಗಳಲ್ಲಿ ಒಟ್ಟು 520 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿಯ ಆಡಳಿತವಿರುವುದರಿಂದ ಈ ಮೂರು ರಾಜ್ಯಗಳಲ್ಲಿ ಮತದಾರರು ನೀಡುವ ತೀರ್ಪು ಮುಂಬರುವ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂಬ ವಿಶ್ಲೇಷಣೆಗಳಿವೆ.
ಆದರೆ, ಮಧ್ಯಪ್ರದೇಶ ಮತ್ತು ಛತ್ತೀಸ್ಗಡದಲ್ಲಿ ಒಂದೇ ಪಕ್ಷವು ಸತತವಾಗಿ ಅಧಿಕಾರ ಅನುಭವಿಸಿದೆ. ಇಲ್ಲಿ ಆಡಳಿತವಿರೋಧಿ ಅಲೆಯಲ್ಲಿ ಮತದಾರರು ವಿಪಕ್ಷಗಳಿಗೆ ಒಲವು ತೋರಿಸಿದರೆ ಅಚ್ಚರಿ ಇಲ್ಲ. ಆದರೆ, ಲೋಸಕಭೆ ಚುನಾವಣೆ ನಡೆಯುವ ಸಂದರ್ಭವೇ ಬೇರೆ, ಪ್ರಸ್ತಾಪವಾಗುವ ವಿಷಯವೇ ಬೇರೆ, ಮತದಾರರ ಮುಂದಿರುವ ಆದ್ಯತೆಗಳೇ ಬೇರೆ. ಹೀಗಾಗಿ, ಐದು ರಾಜ್ಯಗಳ ಚುನಾವಣೆಯ ಫಲಿತಾಂಶವು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಆಗಲು ಸಾಧ್ಯವಿಲ್ಲ ಎಂಬ ವಾದವೂ ಇದೆ.
ಇದೇನೇ ಇರಲಿ, ಐದು ರಾಜ್ಯಗಳ ಪೈಕಿ ಬಿಜೆಪಿಗೆ 3, ಕಾಂಗ್ರೆಸ್ಗೆ ಮತ್ತು ಟಿಆರ್ಎಸ್ ಪಕ್ಷಗಳಿಗೆ ತಲಾ ಒಂದೊಂದು ಕ್ಷೇತ್ರಗಳನ್ನ ಉಳಿಸಿಕೊಳ್ಳುವ ಸವಾಲಿದೆ. ಡಿ. 7ರಂದು ಮತದಾನ ಪ್ರಕ್ರಿಯೆ ಮುಕ್ತಾಯವಾದ ನಂತರ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಸ್ಪಷ್ಟವಾದ ಜನಾಭಿಪ್ರಾಯ ವ್ಯಕ್ತವಾಗಿಲ್ಲ. ಬಿಜೆಪಿ ಆಡಳಿತವಿರುವ ಮೂರು ರಾಜ್ಯಗಳಲ್ಲಿ ಸಮೀಕ್ಷೆಗಳು ಮಿಶ್ರ ಫಲಿತಾಂಶ ನೀಡಿವೆ. ಆದರೆ, ಈ ಮೂರೂ ರಾಜ್ಯಗಳಲ್ಲಿ ಯಾವುದೇ ಪಕ್ಷಕ್ಕೂ ಗೆಲುವು ಸುಲಭವಲ್ಲ. ನಿಕಟ ಪೈಪೋಟಿ ಇರುವುದು ಈ ಸಮೀಕ್ಷೆಗಳಲ್ಲಿ ಖಚಿತಗೊಂಡ ಅಂಶವಾಗಿದೆ. ಮಿಝೋರಾಮ್ ಚುನಾವಣೆಯಲ್ಲೂ ನಿಕಟ ಪೈಪೋಟಿ ಇರಲಿದೆ. ಇನ್ನು, 119 ವಿಧಾನಸಭಾ ಕ್ಷೇತ್ರಗಳಿರುವ ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ಪಕ್ಷಕ್ಕೆ ಗೆಲುವು ಎಂಬುದನ್ನು ಬಹುತೇಕ ಸಮೀಕ್ಷೆಗಳು ಅಂದಾಜಿಸಿವೆ.
ಚುನಾವಣೋತ್ತರ ಸಮೀಕ್ಷೆಗಳು ಸಾಮಾನ್ಯವಾಗಿ ನೈಜ ಸ್ಥಿತಿಗೆ ತುಸು ಹತ್ತಿರವಾಗಿರುತ್ತವಾದರೂ ಹಿಂದೆ ಅನೇಕ ಬಾರಿ ಈ ಸಮೀಕ್ಷೆಗಳು ಉಲ್ಟಾ ಆಗಿರುವ ಉದಾಹರಣೆಗಳುಂಟು. ಹೀಗಾಗಿ, ಫಲಿತಾಂಶ ಪ್ರಕಟವಾಗುವವರೆಗೂ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ.
ಇದೇ ವೇಳೆ, ಐದೂ ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣದ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಹೈ ಅಲರ್ಟ್ ಘೋಷಿಸಿದೆ. ಗೋವಾ, ಮಣಿಪುರ ರಾಜ್ಯಗಳನ್ನ ವಿಪಕ್ಷಗಳಿಗೆ ಬಿಟ್ಟುಕೊಟ್ಟಂತಹ ಪ್ರಸಂಗ ಮತ್ತೆ ಎದುರಾಗಬಾರದೆಂದು ಮುನ್ನೆಚ್ಚರಿಕೆ ವಹಿಸುತ್ತಿರುವ ಕಾಂಗ್ರೆಸ್ ಪಕ್ಷವು, ಈ ಐದು ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳನ್ನ ಹಿಡಿದಿಟ್ಟುಕೊಳ್ಳಲು ಈಗಲೇ ಕಾರ್ಯನಿರತವಾಗಿದೆ. ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆಯೇ ಜೆಡಿಎಸ್ ಪಕ್ಷವನ್ನೂ ಕೂಡಲೇ ಸಂಪರ್ಕಿಸಿ ಮೈತ್ರಿ ಸರಕಾರ ರಚನೆಗೆ ಮುಂದಾದದಂತೆ, ಅಷ್ಟೇ ಹುಮ್ಮಸ್ಸು ಮತ್ತು ವೇಗದಲ್ಲಿ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ.