Congress Protest: ಸೈನಿಕರಿಗೆ ಅಪಮಾನ ಮಾಡಿದ್ದಾರೆಂದು ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಪ್ರತಿಕೃತಿ ದಹನ

50 ವರ್ಷಗಳಿಂದ ಉರಿಯುತ್ತಿರುವ ಅಮರ್‌ ಜವಾನ್ ಜ್ಯೋತಿಯನ್ನು ಕೇಂದ್ರ ಸರ್ಕಾರ ಈಗ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ಜ್ಯೋತಿಯ ಜೊತೆ ವಿಲೀನಗೊಳಿಸಿದೆ.

ಪ್ರತಿಭಟನೆ

ಪ್ರತಿಭಟನೆ

  • Share this:
ನವದೆಹಲಿ, ಜ. 21: ಭಾರತದ ಪರ ಹೋರಾಡಿ ಮಡಿದ ಯೋಧರ ಗೌರವಾರ್ಥ ದೆಹಲಿಯ ಇಂಡಿಯಾ ಗೇಟ್ (India Gate) ನಲ್ಲಿ ಕಳೆದ 50 ವರ್ಷಗಳಿಂದ ಉರಿಯುತ್ತಿರುವ ಅಮರ್‌ ಜವಾನ್ ಜ್ಯೋತಿಯನ್ನು (Amar Jawan Jyothi) ಕೇಂದ್ರ ಸರ್ಕಾರ ಈಗ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ (National War Memorial) ಜ್ಯೋತಿಯ ಜೊತೆ ವಿಲೀನಗೊಳಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದು 'ಸೈನಿಕರಿಗೆ ಮಾಡಿದ ಅಪಮಾನ' ಎಂದು ಹೇಳಲಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. (All India Youth Congress President Srinivas BV) ನೇತೃತ್ವದಲ್ಲಿ ಯುವಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹನ ಮಾಡಿದ್ದಾರೆ.ವಿಲೀನ ಕಾರ್ಯಕ್ರಮದ ಬಳಿಕ ವಿರೋಧ
ಕೇಂದ್ರ ಸರ್ಕಾರ ಇಂದು ಮಧ್ಯಾಹ್ನ ಅಮರ್‌ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್‌ನಿಂದ 400 ಮೀಟರ್ ದೂರದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ಜ್ಯೋತಿಯ ಜೊತೆ ವಿಲೀನ ಮಾಡುವ ಕಾರ್ಯಕ್ರಮ ನಡೆಸಿತು.  ಯಾವಾಗ ಈ ನಡೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಗತೊಡಗಿತೋ ಆಗ 'ನಾವು ಅಮರ್‌ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ಯೋತಿಯ ಜೊತೆ ವಿಲೀನ ಮಾಡುತ್ತೇವೆ. ನಂದಿಸುವುದಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿತು. ಆದರೆ ವಿಲೀನದ ವೇಳೆ ಕೇಂದ್ರ ಸರ್ಕಾರ ಒಂದು ಜ್ಯೋತಿಯನ್ನು ನಂದಿಸಿದೆ ಎಂದು ಆರೋಪಿಸಿ ಕಾರ್ಯಕ್ರಮ ನಡೆದ ಕೆಲವೇ ಹೊತ್ತಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅಧ್ಯಕ್ಷ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನು ಓದಿ: ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯೊಂದಿಗೆ ಅಮರ್ ಜವಾನ್ ಜ್ಯೋತಿ ವಿಲೀನ; ಕಾರಣ ಏನು?

ಮೋದಿ-ಶಾ ವಿರುದ್ಧ ಆಕ್ರೋಶ
ಪ್ರತಿಭಟನೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕೇಂದ್ರ ಸರ್ಕಾರ ಹುತಾತ್ಮ ಯೊಧರ ಸ್ಮರಣಾರ್ಥ ಉರಿಯುತ್ತಿದ್ದ ಜ್ಯೋತಿ ನಂದಿಸಿ ದೇಶಕ್ಕಾಗಿ ದುಡಿಯುವ, ಮಡಿಯುವ ಸೈನಿಕರಿಗೆ ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದವೂ ಧಿಕ್ಕಾರ ಕೂಗಿ ಅವರ ಪ್ರತಿಕೃತಿಯನ್ನೂ ದಹನ ಮಾಡಿದರು.ರಾಹುಲ್ ಗಾಂಧಿ ಅವರಿಂದಲೂ ವಿರೋಧ
ಅಮರ್‌ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ಯೋತಿಯೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಮ್ಮ ವೀರ ಸೈನಿಕರಿಗಾಗಿ ಉರಿಯುತ್ತಿದ್ದ ಅಮರ ಜ್ವಾಲೆ ಇಂದು  ಆರಿರುವುದು ಅತ್ಯಂತ ದುಃಖದ ಸಂಗತಿ. ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ - ಪರವಾಗಿಲ್ಲ. ನಾವು ಮತ್ತೊಮ್ಮೆ ನಮ್ಮ ಸೈನಿಕರಿಗೆ ಅಮರ್ ಜವಾನ್ ಜ್ಯೋತಿ ಬೆಳಗಿಸುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: 125ನೇ ಜನ್ಮದಿನ ಅಂಗವಾಗಿ ಇಂಡಿಯಾ ಗೇಟ್​ನಲ್ಲಿ ನೇತಾಜಿ ಪ್ರತಿಮೆ ಅನಾವರಣ

ಅಮರ್ ಜವಾನ್ ಜ್ಯೋತಿ ಬೆಳಗಿಸಿದ್ದ ಇಂದಿರಾ ಗಾಂಧಿ ಸರ್ಕಾರ
ಮೊದಲನೆ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರ ನೆನಪಿಗಾಗಿ ಬ್ರಿಟಿಷ್ ಸರ್ಕಾರ ದೆಹಲಿಯಲ್ಲಿ ಇಂಡಿಯಾ ಗೇಟ್ ಸ್ಮಾರಕ ನಿರ್ಮಾಣಮಾಡಿತು. ನಂತರ 1971ರಲ್ಲಿ  ಪಾಕಿಸ್ತಾನದ ವಿರುದ್ಧ ಗೆದ್ದ ಬಳಿಕ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂಡಿಯಾ ಗೇಟ್ ಬಳಿ  ಅಮರ್ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್ ಅಡಿಯಲ್ಲಿ ಇರಿಸಲಾಗಿತ್ತು. ಅಂದಿನಿಂದ ಒಂದು ಕ್ಷಣವೂ ಆರದೆ ಜ್ಯೋತಿ ಉರಿಯುತ್ತಿತ್ತು.
Published by:Seema R
First published: