ನವದೆಹಲಿ(ಮಾ. 03): ದೇಶದ ಅಭಿವೃದ್ಧಿ ನಮ್ಮ ಮಂತ್ರ. ಇದಕ್ಕೆ ಶಾಂತಿ, ಸೌಹಾರ್ದತೆ ಮತ್ತು ಏಕತೆ ಪ್ರಮುಖವಾಗಿದ್ದು, ಈ ಮೌಲ್ಯಗಳ ರಕ್ಷಣೆಗಾಗಿ ಬಿಜೆಪಿ ಸಂಸದರು ಮುಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸಂಸತ್ ಕಲಾಪಕ್ಕೆ ಮುನ್ನ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ನಮ್ಮ ಪಕ್ಷದ ಮಂತ್ರವಾಗಿದೆ. ಇದನ್ನು ನಾವು ಕಾಪಾಡಬೇಕು ಎಂದರು.
ಈ ವೇಳೆ ಮಾತನಾಡಿದ ಅವರು, ಶಾಂತಿ, ಸೌಹರ್ದತೆ ಮತ್ತು ಏಕತೆ ದೇಶದ ಅಭಿವೃದ್ಧಿಗೆ ಅವಶ್ಯಕವಾಗಿದೆ. ಆದರೆ, ಕೆಲ ಪಕ್ಷಗಳಿಗೆ ರಾಜಕೀಯ ಹಿತಾಸಕ್ತಿಯೇ ಹೆಚ್ಚು. ಬಿಜೆಪಿಗೆ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ. ಸರ್ವರ ಏಳ್ಗೆ ನಮ್ಮ ಧ್ಯೇಯವಾಕ್ಯ ಎಂದರು.
ಬಿಜೆಪಿ ನಾಯಕರ ದ್ವೇಷಪೂರಿತ ಹೇಳಿಕೆಗಳು ದೆಹಲಿ ಹಿಂಸಾಚಾರಕ್ಕೆ ಪ್ರೇರಣೆ ನೀಡಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಈ ಮಾತುಗಳನ್ನಾಡಿದ್ದಾರೆ. ದೆಹಲಿ ಹಿಂಸಾಚಾರದಲ್ಲಿ ಮೋದಿ ಸರ್ಕಾರದ ನಾಯಕರ ಪ್ರಚೋದನಾ ಹೇಳಿಕೆಗಳೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೂರು ವಾರಗಳ ಬಳಿಕ ಸೋಮವಾರದಂದು ಆರಂಭವಾದ ಅಧಿವೇಶನದಲ್ಲಿಯೂ ಈ ವಿಚಾರವನ್ನು ಪ್ರಮುಖ ಅಸ್ತ್ರವಾಗಿಸಿಕೊಂಡ ವಿಪಕ್ಷಗಳು
ಪ್ರಧಾನಿ, ಶಾ ರಾಜೀನಾಮೆಗೆ ಒತ್ತಾಯಿಸಿ ಗದ್ದಲ ನಡೆಸಿದವು.
ಇದನ್ನು ಓದಿ: ಟ್ವಿಟರ್ನಲ್ಲಿ ಟಾಪ್ ಟ್ರೆಂಡಿಂಗ್ ಆದ NoModiNoTwitter ಹ್ಯಾಷ್ ಟ್ಯಾಗ್
ಇಂದು ಕೂಡ ಬೆಳಗ್ಗೆ ಕಲಾಪ ಆರಂಭವಾದಾಗ ಇದೇ ವಿಚಾರ ಕುರಿತು ಚರ್ಚೆಗೆ ವಿಪಕ್ಷಗಳು ಅನುಮತಿ ಕೇಳಿದವು. ಈ ವೇಳೆ ಉಂಟಾದ ಗದ್ದಲದಿಂದ ಕೆಲಕಾಲ ಸದನವನ್ನು ಮುಂದೂಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ