ನವದೆಹಲಿ: ಲೋಕಸಭಾ ಸದಸ್ಯತ್ವ ( Lok Sabha membership) ರದ್ಧಾಗಿರುವ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಸರ್ಕಾರಿ ಬಂಗಲೆಯನ್ನು (Government Bungalow) ಖಾಲಿ ಮಾಡುವಂತೆ ಲೋಕಸಭಾ ವಸತಿ ಸಮಿತಿಯು ಕಳೆದ ತಿಂಗಳೇ ನೋಟಿಸ್ ನೀಡಿತ್ತು. ಇದೀಗ ಏಪ್ರಿಲ್ 22 ಅಂದರೆ ಶನಿವಾರವೇ ಬಂಗಲೇ ಖಾಲಿ ಮಾಡಲು ಕೊನೆ ದಿನಾಂಕವಾಗಿದೆ. ರಾಹುಲ್ ಗಾಂಧಿ ಶುಕ್ರವಾರವೇ ತಮ್ಮ ಅಧಿಕೃತ ನಿವಾಸ 12 ತುಘಲಕ್ ಲೇನ್‌ನಿಂದ ತಮ್ಮ ಎಲ್ಲಾ ವಸ್ತುಗಳನ್ನು ಸ್ಥಳಾಂತರಿಸಿದ್ದಾರೆ. ಮಾಜಿ ವಯನಾಡ್ ಸಂಸದ ಇಂದು ಅಧಿಕೃತವಾಗಿ ಬಂಗಲೆಯನ್ನು ಲೋಕಸಭೆಯ ಸೆಕ್ರೆಟರಿಯೇಟ್‌ಗೆ ಹಸ್ತಾಂತರಿಸಲಿದ್ದಾರೆ. ಏಪ್ರಿಲ್ 14 ರಂದೇ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭವಾಗಿತ್ತು. ಉಳಿದ ವಸ್ತುಗಳನ್ನು ಶುಕ್ರವಾರ ಸಂಜೆ ಮನೆಯಿಂದ ಹೊರಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಶಿಕ್ಷೆಗೆ ತಡೆ ಕೋರಿ ಮನವಿ ಮಾಡಿದ್ದ ಅವರ ಅರ್ಜಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ಒಂದು ದಿನದ ನಂತರ ಈ ಬೆಳವವಣಿಗೆ ನಡೆದಿದೆ.
ಏಪ್ರಿಲ್ 14ರಂದು ರಾಹುಲ್ ಗಾಂಧಿ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದರು. ಶುಕ್ರವಾರ ಬಂಗಲೆಯಲ್ಲಿದ್ದ ಉಳಿದ ವಸ್ತುಗಳನ್ನು ಅಧಿಕೃತ ಬಂಗಲೆಯಿಂದ ಸ್ಥಳಾಂತರಿಸಲಾಗಿದೆ. ರಾಹುಲ್ ಗಾಂಧಿ ಈಗಾಗಲೇ ತಮ್ಮ ತಾಯಿ ಸೋನಿಯಾ ಗಾಂಧಿಯವರೊಂದಿಗೆ ಜನಪಥ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ.
2005ರಿಂದಲೂ ಅದೇ ಬಂಗಲೆಯಲ್ಲಿದ್ದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಮೊದಲ ಬಾರಿ 2004ರಲ್ಲಿ ಸಂಸದರಾಗಿದ್ದರು. ಅಂದಿನಿಂದಲೂ 12 ತುಘಲಕ್ ಲೇನ್ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು. ಆದರೆ ಮೋದಿ ಸರ್‌ನೇಮ್ ವಿವಾದ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಯಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ, ಲೋಕಸಭೆಯ ವಸತಿ ಸಮಿತಿಯು ಏಪ್ರಿಲ್ 22ರೊಳಗೆ ಒಳಗಡೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು. ನಿಯಮಗಳ ಪ್ರಕಾರ ಸಂಸದ ಸ್ಥಾನದಿಂದ ಅನರ್ಹಗೊಂಡವರು ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವ ಆಗಿಲ್ಲ.
ತಾಯಿ ಜೊತೆ ವಾಸಿಸಲಿರುವ ರಾಹುಲ್
ಒಂದೂವರೆ ದಶಕಗಳಿಗಿಂತಲೂ ಹೆಚ್ಚು ಸಮಯ ವಾಸವಿದ್ದ ಮನೆಯನ್ನು ಖಾಲಿ ಮಾಡಿರುವ ರಾಹುಲ್ ಗಾಂಧಿ ಸಧ್ಯಕ್ಕೆ ತಮ್ಮ ತಾಯಿ ಸೋನಿಯಾ ಗಾಂಧಿ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ. ಈಗಾಗಲೇ ತಾಯಿ ಜೊತೆ ಇರುವ ಅವರು ಕಳೆದ ವಾರ ಮನೆಯ ಕೆಲವು ಸಾಮಾಗ್ರಿಗಳನ್ನು ಟ್ರಕ್‍ನಲ್ಲಿ ಸಾಗಿಸಿದ್ದರು. ಇದೀಗ ಸಂಪೂರ್ಣ ಮನೆಯನ್ನು ಶುಕ್ರವಾರ ಖಾಲಿ ಮಾಡಲಾಗಿದೆ.
ಏನಿದು ಪ್ರಕರಣ?
2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಎಲ್ಲಾ ಕಳ್ಳರಿಗೂ ಮೋದಿ ಎಂಬ ಸರ್‌ನೇಮ್ ಇದೆ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಎಂದು ಉದಾಹರಣೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಅದರ ತೀರ್ಪು ಕಳೆದ ತಿಂಗಳು ಪ್ರಕಟವಾಗಿದ್ದು, ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಲಾಯಿತು. ಜೊತೆಗೆ ಕಾಂಗ್ರೆಸ್ ನಾಯಕನಿಗೆ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.
ಶಿಕ್ಷೆ ತಡೆಗೆ ಸಲ್ಲಿಸಿದ್ದ ಮನವಿ ತಿರಸ್ಕಾರ
ಮೋದಿ ಸರ್‌ನೇಮ್ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಹಿನ್ನಡೆಯಾಗಿತ್ತು. ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ರಾಬಿನ್ ಮೊಗೇರಾ ಅವರು, ಕಾಂಗ್ರೆಸ್ ನಾಯಕನ ಮನವಿಯನ್ನು ತಿರಸ್ಕರಿಸಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕ ಸಂಸತ್ ಸದಸ್ಯತ್ವ ಅನರ್ಹತೆಯಿಂದ ಬಚಾವಾಗುವ ಸಾಧ್ಯತೆ ಕ್ಷೀಣಿಸಿದೆ.
ತನಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿ ಬಾಕಿ ಇರುವವರೆಗೆ ತನ್ನ ದೋಷಾರೋಪಣೆಯನ್ನು ತಡೆಹಿಡಿಯಬೇಕೆಂದು ರಾಹುಲ್ ಗಾಂಧಿ ಮನವಿ ಮಾಡಿದ್ದರು. ಆದರೆ ಇದಕ್ಕೆ ಸೂರತ್‌ನ ನ್ಯಾಯಾಲಯ ಒಪ್ಪಲಿಲ್ಲ. ಅವರ ಅರ್ಜಿ ತಿರಸ್ಕೃತಗೊಂಡಿರುವುದರಿಂದ ಅವರ ಸಂಸತ್ ಸದಸ್ಯತ್ವ ಅನರ್ಹತೆ ಮುಂದುವರಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ