Alaska Glacier: ಅಲಾಸ್ಕಾ ಹಿಮನದಿಯಲ್ಲಿ ಹೆಲಿಕಾಪ್ಟರ್ ಪತನ; ಜೆಕ್ ಗಣರಾಜ್ಯದ ಬಿಲಿಯನೇರ್ ಸೇರಿ ಐವರು ಸಾವು
ಅಲಾಸ್ಕಾದ ಅಂಕಾರೇಜ್ ಬಳಿ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನವಾಗಿದೆ. ಈ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಜೆಕ್ ಗಣರಾಜ್ಯದ ಅತಿ ಶ್ರೀಮಂತ ವ್ಯಕ್ತಿ 56 ವರ್ಷದ ಪೀಟರ್ ಕೆಲ್ನೆರ್ ಕೂಡ ಒಬ್ಬರು.
ನವದೆಹಲಿ (ಮಾ. 29): ಅಲಾಸ್ಕಾದ ಅಂಕಾರೇಜ್ ಬಳಿ ಹಿಮನದಿಯಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್ ನೆಲಕ್ಕುರುಳಿದ್ದು, ಈ ದುರಂತದಲ್ಲಿ ಜೆಕ್ ಗಣರಾಜ್ಯದ ಅತಿ ಶ್ರೀಮಂತ ವ್ಯಕ್ತಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಇಬ್ಬರು ಮಾರ್ಗದರ್ಶಕರು, ಮೂವರು ಪ್ರವಾಸಿಗರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ಅಂಕಾರೇಜ್ ಬಳಿಯ ಉತ್ತರ ಚುಗಾಚ್ ಪರ್ವತಗಳು ಬಹಳ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಪರ್ವತಗಳನ್ನು ನೋಡಲು ಮಾರ್ಚ್ನಿಂದ ಮೇ ತಿಂಗಳವರೆಗೆ ಪ್ರವಾಸಿಗರು ಬರುತ್ತಾರೆ. ಈ ಜಾಗವನ್ನು ಹೆಲಿಕಾಪ್ಟರ್ನಲ್ಲಿ ಪ್ರವಾಸಿಗರಿಗೆ ತೋರಿಸುತ್ತಾ, ಮಾರ್ಗದರ್ಶನ ನೀಡುತ್ತಿದ್ದ ವೇಳೆ ಹೆಲಿಕಾಪ್ಟರ್ ಹಿಮನದಿಗೆ ಬಿದ್ದಿದೆ.
ಈ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಜೆಕ್ ಗಣರಾಜ್ಯದ ಅತಿ ಶ್ರೀಮಂತ ವ್ಯಕ್ತಿ 56 ವರ್ಷದ ಪೀಟರ್ ಕೆಲ್ನೆರ್ ಕೂಡ ಒಬ್ಬರು. 13 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ಕೆಲ್ನರ್ ಜೆಕ್ ರಿಪಬ್ಲಿಕ್ನ ಅತಿ ಶ್ರೀಮಂತ ವ್ಯಕ್ತಿ. ವಿಶ್ವಾದ್ಯಂತ ಇನ್ಷುರೆನ್ಸ್ ಪಿಪಿಎಫ್ ಗ್ರೂಪ್, ಟೆಲಿಕಮ್ಯುನಿಕೇಷನ್, ಇಂಜಿನಿಯರಿಂಗ್ ಕಂಪನಿಗಳನ್ನು ನಡೆಸುತ್ತಿರುವ ಕೆಲ್ನೆರ್ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಹಿಮನದಿಯಲ್ಲಿ ಹೆಲಿಕಾಪ್ಟರ್ ಪತನವಾಗಿ ಐವರು ಸಾವನ್ನಪ್ಪಿದ್ದರಿಂದ ಈ ಸ್ಥಳದಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಅಪಘಾತಕ್ಕೆ ಕಾರಣವೇನೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಹೆಲಿಕಾಪ್ಟರ್ನಿಂದ ಅಲಾಸ್ಕಾದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೋದವರು ಪ್ರಾಣ ಕಳೆದುಕೊಂಡಿದ್ದಾರೆ. ಅಂದಹಾಗೆ, ಹೆಲಿಕಾಪ್ಟರ್ ಪತನವಾಗಿ ಸಾವನ್ನಪ್ಪಿದ ಐವರಲ್ಲಿ ಒಬ್ಬರು ಕೊಲಾರೊಡೊದವರು, ಇಬ್ಬರು ಜೆಕ್ ರಿಪಬ್ಲಿಕ್ನವರು, ಇಬ್ಬರು ಅಲಸ್ಕಾದವರಾಗಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ