ನವದೆಹಲಿ: ಮಾಫಿಯಾ ಡಾನ್ ಹಾಗೂ ಮಾಜಿ ಸಂಸದ ಅತೀಕ್ ಅಹ್ಮದ್ (Atiq Ahmed) ಮತ್ತು ಆತನ ಸಹೋದರ ಅಶ್ರಫ್ (Ashraf Ahmed) ಹತ್ಯೆ ಪ್ರಕರಣದ ಭಾಗವಾಗಿ ಇದೀಗ ಭಯೋತ್ಪಾದಕ ಸಂಘಟನೆ ಅಲ್-ಖೈದಾ (Al-Qaeda) ಮಧ್ಯೆ ಪ್ರವೇಶಿಸಿದೆ. ಈ ಹತ್ಯೆಗೆ ಪ್ರತಿಯಾಗಿ ಭಾರತದ (India) ವಿರುದ್ಧ ಪ್ರತಿಕಾರ (Revenge) ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದೆ. ಈದ್(Eid) ಸಂದರ್ಭದಲ್ಲಿ ಈ ಕುರಿತ 7 ಪುಟಗಳ ಮ್ಯಾಗ್ಜಿನ್ ಬಿಡುಗಡೆ ಮಾಡಿರುವ ಉಗ್ರರು ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು (Police) ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮಾಫಿಯಾ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅವರನ್ನು ಏಪ್ರಿಲ್ 15 ರಂದು ಪ್ರಯಾಗ್‌ರಾಜ್‌ನಲ್ಲಿ 3 ಯುವಕರು ಗುಂಡಿನ ದಾಳಿ ಮಾಡಿ ಕೊಂದಿದ್ದರು. ಅರುಣ್ ಮೌರ್ಯ, ಸನ್ನಿ ಮತ್ತು ಲವಲೇಶ್ ತಿವಾರಿ ಎಂಬ ಮೂವರ ಯುವಕರು ಟಿವಿಯಲ್ಲಿ ಲೈವ್ ನಡೆಯುತ್ತಿದ್ದಾಗಲೇ ಗುಂಡಿಕ್ಕಿ ಕೊಂದಿದ್ದರು. ಈ ಮೂವರನ್ನೂ ಸ್ಥಳದಲ್ಲೇ ಬಂಧಿಸಲಾಗಿತ್ತು.
ಭಾರತೀಯ ಉಪಖಂಡದಲ್ಲಿನ ಭಯೋತ್ಪಾದಕ ಸಂಘಟನೆ ಅಲ್ ಖೈದಾದಿಂದ ಬೆದರಿಕೆ ಬಂದಿರುವ ಹಿನ್ನಲೆ, ಯುಪಿಯ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಪ್ರಯಾಗರಾಜ್‌ನಲ್ಲಿ ಪೊಲೀಸರು ಭದ್ರತೆಯನ್ನು ಮತ್ತಷ್ಟು ಬಲಪಡಿಸಿದ್ದಾರೆ. ವರದಿಗಳ ಪ್ರಕಾರ, ಅಲ್ ಖೈದಾ ಈದ್ ಸಂದೇಶದಲ್ಲಿ ಈ ಬೆದರಿಕೆಯನ್ನು ನೀಡಿದೆ. ಜೊತೆಗೆ ಅತೀಕ್ ಅಹ್ಮದ್ ಮತ್ತು ಅಶ್ರಫ್ರನ್ನು ಹುತಾತ್ಮರೆಂದು ಘೋಷಿಸಿದೆ.
ಮುಸ್ಲಿಂರನ್ನು ಬಂಧ ಮುಕ್ತಗೊಳಿಸುತ್ತೇವೆ
" ದಬ್ಬಾಳಿಕೆಯ ಕೈಗಳಿಂದ ನಿಮ್ಮನ್ನು ರಕ್ಷಿಸುತ್ತೇವೆ. ಅದು ಅಮೆರಿಕಾದ ಶ್ವೇತಭವನದಲ್ಲಿರಬಹುದು ಅಥವಾ ದೆಹಲಿಯ ಪ್ರಧಾನ ಮಂತ್ರಿಯ ಮನೆಯಾಗಿರಬಹುದು ಅಥವಾ ರಾವಲ್ಪಿಂಡಿಯ GHQ ಆಗಿರಬಹುದು. ಟೆಕ್ಸಾಸ್‌ನಿಂದ ತಿಹಾರ್‌ನಿಂದ ಅಡ್ಯಾಲಾವರೆಗೆ - ನಾವು ಎಲ್ಲಾ ಮುಸ್ಲಿಂ ಸಹೋದರ ಸಹೋದರಿಯರನ್ನು ಬಂಧ ಮುಕ್ತಿಗೊಳಿಸುತ್ತೇವೆ " ಎಂದು ಈ ಏಳು ಪುಟಗಳ ಸಂದೇಶದಲ್ಲಿ ಉಗ್ರ ಸಂಘಟನೆ ತಿಳಿಸಿದೆ.
ಮುಸ್ಲೀಮ್ ದಾಳಿಯ ಬಗ್ಗೆ ಉಲ್ಲೇಖ
ಯುಪಿಯಲ್ಲಿ ಲೈವ್ ಎನ್‌ಕೌಂಟರ್ ನಡೆದಿದೆ, ಹಾಗಾಗಿ ದುಃಖದಲ್ಲಿ ಈದ್ ಅನ್ನು ಆಚರಿಸಿ ಎಂದು ಅಲ್-ಖೈದಾ ತನ್ನ ಈದ್ ಸಂದೇಶದಲ್ಲಿ ಹೇಳಿದೆ. ಪತ್ರಿಕೆಯು ಬಿಹಾರದ ಮದರಸಾದಲ್ಲಿ ಬೆಂಕಿ ಹಚ್ಚಿದ್ದ ಘಟನೆ ಮತ್ತು ಭಾರತದ ಇತರ ಭಾಗಗಳಲ್ಲಿ ಮುಸ್ಲಿಮರಿಗೆ ಕಿರುಕುಳವನ್ನು ಸಹ ಉಲ್ಲೇಖಿಸಿದೆ. ಆದರೆ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳ ಮೂಲಗಳು ಈ ಬೆದರಿಕೆ ಪತ್ರಿಕೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿವೆ ಎಂದಿದೆ. ಅದರ ವಾಸ್ತವತೆಯನ್ನು ಪರಿಶೀಲಿಸುವಂತೆ ಕೋರಿದ್ದಾರೆ.
ಶಾಂತಿ ಕಾಪಾಡುವಲ್ಲಿ ನಿರತವಾಗಿರುವ ಯುಪಿ ಪೊಲೀಸರು
ಈದ್ ಸಂದರ್ಭದಲ್ಲಿ ಶಾಂತಿ ಕಾಪಾಡಲು ಮತ್ತು ಅತೀಕ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಅತೀಕ್ ಮತ್ತು ಅಶ್ರಫ್ ಕೊಂದವರನ್ನು ಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅದೇ ಸಮಯದಲ್ಲಿ ಅವರು ಅತೀಕ್ ಪುತ್ರರು, ವಕೀಲರು, ಸಂಬಂಧಿಕರು ಮುಂತಾದವರ ಫೋನ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
ಅತೀಕ್ 1169 ಕೋಟಿ ಆಸ್ತಿ ವಶ
ಗ್ಯಾಂಗ್‍ಸ್ಟರ್ ಅತೀಕ್ ಅಹ್ಮದ್ ಅಕ್ರಮವಾಗಿ ಸಾವಿರಾರು ಕೋಟಿ ರೂ. ಆಸ್ತಿಯ ಒಡೆಯನಾಗಿದ್ದ ಎಂಬ ವಿಷಯ ಇದೀಗ ಬಯಲಾಗಿದೆ. ಅತೀಕ್ ಅಹ್ಮದ್‍ನ ಕೃತ್ಯಗಳ ಜೊತೆಗೆ ಅಕ್ರಮ ಆಸ್ತಿಗಳ ಮೇಲೆ ಕಣ್ಣಿಟ್ಟಿದ್ದ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಈತನನ್ನು ಹೆಡೆಮುರಿ ಕಟ್ಟಿದ್ದರು. ಅಷ್ಟೇ ಅಲ್ಲದೇ ಅತೀಕ್‍ಗೆ ಸೇರಿದ್ದ 1,169 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡಿದ್ದ ಈ ಆಸ್ತಿಗಳ ಪೈಕಿ 750 ಕೋಟಿ ರೂ. ಮೌಲ್ಯದ ಭೂಮಿ ಹಾಗೂ 417 ಕೋಟಿ ರೂ. ಮೌಲ್ಯದ ಇತರೆ ಆಸ್ತಿ ಸೇರಿವೆ. ಆದರೂ ಪೊಲೀಸರು ತನಿಖೆ ನಡೆಸಿದಷ್ಟು ಇನ್ನಷ್ಟು ಆಸ್ತಿಗಳು ಪತ್ತೆಯಾಗುತ್ತಲೇ ಇದೆ. ಮೂಲಗಳ ಪ್ರಕಾರ ಅತೀಕ್ ಕುಟುಂಬ ಆಸ್ತಿ 10 ಸಾವಿರ ಕೋಟಿಗೂ ಹೆಚ್ಚಿದೆ ಎನ್ನಲಾಗಿದೆ, ಆದರೆ ಇನ್ನೂ ಪುರಾವೆ ಸಿಕ್ಕಿಲ್ಲ, ತನಿಖೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ