ಕಾಂಗ್ರೆಸ್ ಬದಿಗಿರಿಸಿ ಉತ್ತರಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ; ಮಹಾಕ್ರಾಂತಿಗೆ ಮುನ್ನುಡಿ ಎಂದ ಉಭಯ ನಾಯಕರು

ಜನರ ಹಿತ  ದೃಷ್ಟಿಯಿಂದ ನಾವು  ಮೈತ್ರಿ ಮಾಡಿಕೊಂಡಿದ್ದೇವೆ. ಹಳೆಯದನ್ನೆಲ್ಲ ಮರೆತು ನಾವು ಒಂದಾಗಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಜತೆಗೆ ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದರು. 

Seema.R | news18
Updated:January 12, 2019, 1:13 PM IST
ಕಾಂಗ್ರೆಸ್ ಬದಿಗಿರಿಸಿ ಉತ್ತರಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ; ಮಹಾಕ್ರಾಂತಿಗೆ ಮುನ್ನುಡಿ ಎಂದ ಉಭಯ ನಾಯಕರು
ಮಯಾವತಿ- ಅಖಿಲೇಶ್​
Seema.R | news18
Updated: January 12, 2019, 1:13 PM IST
ಲಕ್ನೋ (ಜ.12): 25 ವರ್ಷಗಳ ಬಳಿಕ ಉತ್ತರಪ್ರದೇಶದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಪಕ್ಷಗಳು ಮಹಾಮೈತ್ರಿಗೆ ಇಂದು ಅಧಿಕೃತ ಮುದ್ರೆ ಒತ್ತಿವೆ. ಕಾಂಗ್ರೆಸ್​ ಒಳಗೊಂಡಂತೆ ಇತರೆ ಪ್ರಾದೇಶಿಕ ಪ್ರಮುಖ ಪಕ್ಷಗಳು ಬಿಜೆಪಿ ವಿರುದ್ಧ ಮಹಾಘಟ್​ಬಂಧನ್ ರಚಿಸಿಕೊಂಡು, ಚುನಾವಣೆಗೆ ಅಣಿಯಾಗುತ್ತಿದ್ದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಬದಿಗಿರಿಸಿ ಬಿಎಸ್​ಪಿ ಮತ್ತು ಎಸ್​ಪಿ ಮಹಾಮೈತ್ರಿ ಮಾಡಿಕೊಂಡಿವೆ.

ಈ ಸಂಬಂಧ ಇಂದು ಲಕ್ನೋದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಎಸ್​ಪಿ ನಾಯಕಿ ಮಾಯಾವತಿ ಮತ್ತು ಎಸ್​ಪಿ ನಾಯಕ ಅಖಿಲೇಶ್ ಯಾದವ್​ ಮಹಾಮೈತ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, "1993ರಲ್ಲಿ ಕಾನ್ಶಿರಾಮ್-ಮುಲಾಯಂ ನೇತೃತ್ವದಲ್ಲಿ ಆಡಳಿತ ನಡೆಸುವ ಮೂಲಕ ಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ಈ  ಮೈತ್ರಿಯಿಂದಾಗಿ  ಬಿಜೆಪಿಯಂಥ ಜಾತಿವಾದಿ ಪಕ್ಷ ಸೋಲು ಕಂಡಿತು. ಮತ್ತೊಮ್ಮೆ ಈಗ ನಾವು ಒಟ್ಟಾಗಿದ್ದೇವೆ," ಎಂದು ಗುಡುಗಿದ್ದಾರೆ.

ಜನರ ಹಿತದೃಷ್ಟಿಯಿಂದ ನಾವು  ಮೈತ್ರಿ ಮಾಡಿಕೊಂಡಿದ್ದೇವೆ. ಹಳೆಯದನ್ನೆಲ್ಲ ಮರೆತು ನಾವು ಒಂದಾಗಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಜತೆಗೆ ಹೋರಾಟ ಮಾಡುವುದಾಗಿ ಸ್ಪಷ್ಟಪಡಿಸಿದರು.

ದೇಶದಲ್ಲಿ ಹೊಸತೊಂದು ಕ್ರಾಂತಿಗಿದು ಮುನ್ನುಡಿಯಾಗಿದೆ. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಮೈತ್ರಿ ಇದಾಗಿದ್ದು, ದಮನಿತರ ಪ್ರತಿನಿಧಿಸುವ ಪಕ್ಷಗಳ ಮೈತ್ರಿ ಮಾಡಿಕೊಳ್ಳುವ ಮೂಲಕ ಕೋಮುವಾದಿಗಳ ವಿರುದ್ಧ ನಾವು ಒಂದಾಗಿದ್ದೇವೆ ಎಂದರು.

ಈ ನಮ್ಮ ಜಂಟಿ ಸುದ್ದಿಗೋಷ್ಠಿಯಿಂದಾಗಿ ಗುರು ಶಿಷ್ಯರ ನಿದ್ದೆ ಹಾಳಾಗಲಿದೆ. ಈ ಮೈತ್ರಿಯಿಂದ ಬಿಜೆಪಿ ಚಿಂತಾಕ್ರಾಂತವಾಗಿದೆ. ಇದು ಹೊಸ ವರ್ಷದಲ್ಲಿ ಹೊಸ ರಾಜಕೀಯ ಕ್ರಾಂತಿ ಎಂದು ಘೋಷಿಸಿದರು.
Loading...

ಕಾಂಗ್ರೆಸ್​ನೊಂದಿಗೆ ನಮ್ಮ ಹಿಂದಿನ ಅನುಭವ ಉತ್ತಮವಾಗಿರಲಿಲ್ಲ. ಕಾಂಗ್ರೆಸ್​ ಬದಿಗಿರಿಸಿ ನಾವು ಈ ಮೈತ್ರಿ ಮಾಡಿಕೊಳ್ಳುವುದಕ್ಕೆ ಕಾರಣ ಮತ ವಿಭಜನೆ. ಕಾಂಗ್ರೆಸ್​ ಜೊತೆ ಮೈತ್ರಿಯಾದಾಗ ನಮ್ಮ ಮತಗಳು ಇತರೆ ಪಕ್ಷಗಳಿಗೆ ವರ್ಗಾವಣೆಯಾದವು. ಇದರಿಂದ ಕಾಂಗ್ರೆಸ್​ಗೆ​ ಲಾಭವಾಯಿತು. ನಮಗೆ ಶೇಕಡವಾರು ಮತಗಳಲ್ಲಿ ಕುಸಿತ ಕಾಣಲಾರಂಭಿಸಿತು. ವಿಧಾನಸಭಾ ಚುನಾವಣೆಯಲ್ಲಿಯೇ ಸಮಾಜವಾದಿ ಪಕ್ಷ ಕಾಂಗ್ರೆಸ್​ನೊಂದಿಗೆ ಮೈತ್ರಿಯಾಗಿ ಸೋಲು ಕಂಡಿತ್ತು.

ಸೀಟು-ಹಂಚಿಕೆ ವಿವರ:

ಕಾಂಗ್ರೆಸ್​ ಬದಿಗಿರಿಸಿ ಉತ್ತರಪ್ರದೇಶದಲ್ಲಿ ಮಹಾಮೈತ್ರಿಗೆ ಮಾಡಿಕೊಂಡ ಎಸ್​ಪಿ-ಬಿಎಸ್​​ಪಿ 80 ಲೋಕಸಭಾ ಕ್ಷೇತ್ರಗಳ ಪೈಕಿ ತಲಾ 38 ಸೀಟು ಹಂಚಿಕೆ ಮಾಡಿಕೊಂಡಿದೆ. ರಾಹುಲ್​ ಗಾಂಧಿ-ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್​ಬರೇಲಿ ಹಾಗೂ ಅಮೇಥಿ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡುವುದಾಗಿ ತಿಳಿಸಿದೆ. 

ಉತ್ತರ ಪ್ರದೇಶದ ಜಾತಿವಾರು ಜನಸಂಖ್ಯೆ ಪ್ರಮಾಣ

ಹಿಂದೂ - ಶೇ. 79.80

ಮುಸ್ಲಿಂ - ಶೇ. 18

ಯಾದವ - ಶೇ. 10-11

ಎಸ್​ಸಿ  - ಶೇ. 21

2014ರ ಚುನಾವಣೆಯಲ್ಲಿ ಪಕ್ಷಗಳ ಶೇಕಡವಾರು ಮತ ಗಳಿಕೆ  

ಪಕ್ಷ             ಗೆದ್ದ ಸ್ಥಾನ           ಮತಗಳಿಕೆ

ಬಿಜೆಪಿ         72  ಸ್ಥಾನ         ಶೇ 42. 63 ಮತ

ಎಸ್ಪಿ         5 ಸ್ಥಾನ           ಶೇ 22.35 ಮತ

ಕಾಂಗ್ರೆಸ್      2 ಸ್ಥಾನ           ಶೇ 7.53 ಮತ

ಅಪ್ನಾ ದಳ     2 ಸ್ಥಾನ         ಶೇ 0.67

ಬಿಎಸ್ಪಿ         00                ಶೇ.19.77

 
First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...