Donald Trump Team: ಭಾರತಕ್ಕೆ ಬರುತ್ತಿರುವ ಟ್ರಂಪ್ ನಿಯೋಗದಲ್ಲಿ ಕನ್ನಡಿಗ ಅಜಿತ್ ಪೈ

Kannadiga in Trump Team: ಅಮೆರಿಕದ ಪ್ರಭಾವಿ ವ್ಯಕ್ತಿಯಾಗಿ ಭಾರತಕ್ಕೆ ಬರುತ್ತಿರುವ ಅಜಿತ್ ಪೈ ಮುಂದೆ ಕೆಲ ಗುರುತರ ಜವಾಬ್ದಾರಿಗಳಿವೆ. 5G ನೆಟ್​ವರ್ಕ್ ಸೇರಿದಂತೆ ವಿವಿಧ ಡಿಜಿಟಲ್ ವಿಚಾರಗಳನ್ನು ಭಾರತ ಮತ್ತು ಅಮೆರಿಕ ಎರಡೂ ದೇಶಗಳ ಹಿತಾಸಕ್ತಿಗೆ ತಕ್ಕಂತೆ ರೂಪಿಸುವುದು ಇವರ ಮುಂದಿರುವ ಸವಾಲು.

ಅಜಿತ್ ಪೈ

ಅಜಿತ್ ಪೈ

  • News18
  • Last Updated :
  • Share this:
ವಾಷಿಂಗ್ಟನ್(ಫೆ. 24): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡುತ್ತಿದ್ಧಾರೆ. ಅವರ ಜೊತೆ ಸಣ್ಣ ತಂಡವೂ ಬಂದು ಹೋಗುತ್ತಿದೆ. ಈ ಸಣ್ಣ ತಂಡದಲ್ಲಿ ಭಾರತ ಮೂಲದ ಇಬ್ಬರು ವ್ಯಕ್ತಿಗಳು ಇದ್ದಾರೆ. ಅವರಲ್ಲಿ ಒಬ್ಬ ಕನ್ನಡಿಗನೂ ಇರುವುದು ವಿಶೇಷ. 47 ವರ್ಷದ ಅಜಿತ್ ಪೈ ಟ್ರಂಪ್ ಜೊತೆ ಇರುವ ನಿಯೋಗದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷರ ಜೊತೆ ಏರ್​ಫೋರ್ಸ್ ವಿಮಾನದಲ್ಲಿ ಅವರು ಪ್ರಯಾಣ ಬೆಳೆಸಿದ್ದಾರೆ.

ಅಮೆರಿಕದಲ್ಲೇ ಹುಟ್ಟಿದ ಅಜಿತ್ ಪೈ ತಾನು ಈ ಎತ್ತರಕ್ಕೆ ಬೆಳೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕೆಲ ವರ್ಷಗಳ ಹಿಂದಿನವರೆಗೂ ಇದು ಕನಸೂ ಕೂಡ ಕಾಣಲು ಸಾಧ್ಯವಿರಲಿಲ್ಲ. ಅಮೆರಿಕ ಅಧ್ಯಕ್ಷರ ಜೊತೆ ಭಾರತಕ್ಕೆ ಹೋಗುತ್ತೇನೆಂದು ತನ್ನ ತಂದೆ ತಾಯಿ ನಿರೀಕ್ಷಿಸಿರಲಿಲ್ಲ. ಇದು ಈಗ ನನಸಾಗಿದೆ ಎಂದು ಅಜಿತ್ ಪೈ ಹೇಳುತ್ತಾರೆ.

ಇದನ್ನೂ ಓದಿ: Namaste Trump: ಇಂದು ಭಾರತಕ್ಕೆ ಡೊನಾಲ್ಡ್ ಟ್ರಂಪ್ ಆಗಮನ; ಇಲ್ಲಿದೆ ಅವರ 2 ದಿನದ ವೇಳಾಪಟ್ಟಿ

ಕೊಂಕಣಿ ಮಾತೃಭಾಷಿಗರಾದ ಅಜಿತ್ ಪೈ ಅವರ ತಂದೆ ತಾಯಿ ಇಬ್ಬರೂ ಐದು ದಶಕಗಳ ಹಿಂದೆ ಅಮೆರಿಕಕ್ಕೆ ಹೋಗಿ ನೆಲಸಿದ್ದರು. ಇವರ ತಾಯಿ ಬೆಂಗಳೂರಿನವರಾದರೆ, ತಂದೆ ಹೈದರಾಬಾದ್​ನಲ್ಲಿ ಬೆಳೆದವರು. 1973ರಲ್ಲಿ ಅಮೆರಿಕದಲ್ಲೇ ಜನಿಸಿದ ಅಜಿತ್ ಪೈ ಅಲ್ಲಿಯೇ ತಮ್ಮ ಶಿಕ್ಷಣ ಪೂರೈಸಿ ವಕೀಲ ಪದವಿ ಪಡೆದರು. ತಮ್ಮ ಪ್ರತಿಭೆಯಿಂದ ಎತ್ತರೆತ್ತರಕ್ಕೆ ಬೆಳೆದ ಅವರು ಅಮೆರಿಕದ ಫೆಡೆರಲ್ ಕಮ್ಯೂನಿಕೇಶನ್ಸ್ ಕಮಿಷನ್ (ಎಫ್​ಸಿಸಿ) ಆಯೋಗದ ಅಧ್ಯಕ್ಷರಾಗಿ ನೇಮಕವಾಗಿದ್ಧಾರೆ. ಬರಾಕ್ ಒಬಾಮ ಅವಧಿಯಲ್ಲಿ ಇದೇ ಆಯೋಗದ ಸದಸ್ಯರಾಗಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದರು. ಈಗ ಅಧ್ಯಕ್ಷರಾಗಿ ಗಮನ ಸೆಳೆದಿದ್ದಾರೆ. ಗಮನಾರ್ಹ ವಿಷಯವೆಂದರೆ ಎಫ್​ಸಿಸಿ ಛೇರ್ಮನ್ ಆಗಿರುವ ಮೊದಲ ಭಾರತೀಯ ಅಮೆರಿಕನ್ ಅವರಾಗಿದ್ದಾರೆ.

ಈಗ ಅಮೆರಿಕದ ಪ್ರಭಾವಿ ವ್ಯಕ್ತಿಯಾಗಿ ಭಾರತಕ್ಕೆ ಬರುತ್ತಿರುವ ಅಜಿತ್ ಪೈ ಮುಂದೆ ಕೆಲ ಗುರುತರ ಜವಾಬ್ದಾರಿಗಳಿವೆ. 5G ನೆಟ್​ವರ್ಕ್ ಸೇರಿದಂತೆ ವಿವಿಧ ಡಿಜಿಟಲ್ ವಿಚಾರಗಳನ್ನು ಭಾರತ ಮತ್ತು ಅಮೆರಿಕ ಎರಡೂ ದೇಶಗಳ ಹಿತಾಸಕ್ತಿಗೆ ತಕ್ಕಂತೆ ರೂಪಿಸುವುದು ಇವರ ಮುಂದಿರುವ ಸವಾಲು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: