• Home
  • »
  • News
  • »
  • national-international
  • »
  • Sabarimala Temple: ಶಬರಿಮಲೆ ದೇವಸ್ಥಾನದ ಬಳಿ ವಿಮಾನ ನಿಲ್ದಾಣ ನಿರ್ಮಿಸಲು 2,570 ಎಕರೆ ಭೂಸ್ವಾಧೀನಕ್ಕೆ ಒಪ್ಪಿಗೆ

Sabarimala Temple: ಶಬರಿಮಲೆ ದೇವಸ್ಥಾನದ ಬಳಿ ವಿಮಾನ ನಿಲ್ದಾಣ ನಿರ್ಮಿಸಲು 2,570 ಎಕರೆ ಭೂಸ್ವಾಧೀನಕ್ಕೆ ಒಪ್ಪಿಗೆ

ಶಬರಿಮಲೆ ದೇಗುಲ

ಶಬರಿಮಲೆ ದೇಗುಲ

ಕೇರಳದಲ್ಲಿ ಈಗಾಗಲೇ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ.

  • Share this:

ವಿಶ್ವ ಪ್ರಸಿದ್ಧ ಭಾರತದ ಕೇರಳ ರಾಜ್ಯದ ಶಬರಿಮಲೆಯ ಅಯ್ಯಪ್ಪ ಸ್ವಾಮಿ (Ayyappa Temple Sabarimala) ದೇವಸ್ಥಾನಕ್ಕೆ ದರ್ಶನಕ್ಕೆಂದು ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಮಕರ ಸಂಕ್ರಾಂತಿಯಂದು (Makar Sankranthi) ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ನೋಡಲು, ದರ್ಶನ ಪಡೆದು (Ayyappa Swamy Darshan) ಪುನೀತರಾಗಲು ಇಲ್ಲಿಗೆ ಕೊಟ್ಯಾಂತರ ಭಕ್ತರು ಧಾವಿಸಿ ಬರುತ್ತಾರೆ. ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಈ ದೇವಸ್ಥಾನದ ಅಭಿವೃದ್ಧಿ ಮತ್ತು ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲಕರವಾದ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಕೇರಳ ಸರ್ಕಾರ (Kerala Government) ವ್ಯವಸ್ಥೆ ಕಲ್ಪಿಸಿದೆ.


ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ ಕೇರಳ ಸರ್ಕಾರ
ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶವನ್ನು ಸುಧಾರಿಸುವ ಮತ್ತು ಅದರ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಸಹಾಯ ಮಾಡುವ ಕ್ರಮದಲ್ಲಿ, ಕೇರಳ ರಾಜ್ಯ ಸರ್ಕಾರವು ಉದ್ದೇಶಿತ ಶಬರಿಮಲೆ ಅಂತಾರಾಷ್ಟ್ರೀಯ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸುವ ಯೋಜನೆ ಬಗ್ಗೆ ಈಗಾಗಲೇ ಘೋಷಣೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ 2,570 ಎಕರೆ ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದೆ.


ಕೇರಳದಲ್ಲಿ ಈಗಾಗಲೇ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಶಬರಿಮಲೆ ದೇವಸ್ಥಾನದ ಬಳಿ ಕೊಟ್ಟಾಯಂ ಜಿಲ್ಲೆಯಲ್ಲಿ ಐದನೇ ವಿಮಾನ ನಿಲ್ದಾಣವನ್ನು ನಿರ್ಮಿಸಲು ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಶನಿವಾರ ಒಪ್ಪಿಗೆ ನೀಡಿದೆ.


2,570 ಎಕರೆ ಭೂಮಿ ಸ್ವಾಧೀನ
ಎರುಮೇಲಿ ದಕ್ಷಿಣ ಮತ್ತು ಮಣಿಮಾಲಾ ನಡುವೆ 2,570 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.


ಶಬರಿಮಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇರಳದ ಕೊಟ್ಟಾಯಂ ಜಿಲ್ಲೆಯ ಶಬರಿಮಲೆ ದೇವಸ್ಥಾನದ ಬಳಿ ಎರುಮೆಲಿಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದ್ದು, ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಚೆರುವಳ್ಳಿ ರಬ್ಬರ್ ಎಸ್ಟೇಟ್ ಅನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಆದೇಶದಲ್ಲಿ ರಬ್ಬರ್ ಎಸ್ಟೇಟ್‌ನ ಹೊರಗೆ 307 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.


ದೇಗುಲದಿಂದ ವಿಮಾನ ನಿಲ್ದಾಣಕ್ಕೆ ಕೇವಲ 48 ಕಿಮೀ
ಪ್ರಸ್ತುತ ಶಬರಿಮಲೆ ದೇಗುಲಕ್ಕೆ ತಿರುವನಂತಪುರಂನಲ್ಲಿರುವ ವಿಮಾನ ನಿಲ್ದಾಣ ಸುಮಾರು 136 ಕಿಮೀ ದೂರದಲ್ಲಿದೆ. ಹೀಗಾಗಿ ಭಕ್ತರಿಗೆ ಇನ್ನಷ್ಟು ಅನುಕೂಲ ಮಾಡಲು ವಿಮಾನ ನಿಲ್ದಾಣವನ್ನು ಇಲ್ಲೇ ಹತ್ತಿರದಲ್ಲಿ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ.


ಸದ್ಯ ಸರ್ಕಾರ ಕೈಗೆತ್ತಿಕೊಂಡಿರುವ ಈ ವಿಮಾನ ನಿಲ್ದಾಣವು ಶಬರಿಮಲೆ ದೇವಸ್ಥಾನದಿಂದ ಕೇವಲ 48 ಕಿಮೀ ದೂರದಲ್ಲಿದೆ ಮತ್ತು 3,500 ಮೀಟರ್ ರನ್‌ವೇಯನ್ನು ಹೊಂದಿರುತ್ತದೆ. ಸರ್ಕಾರಿ ಸ್ವಾಮ್ಯದ ಕೆಎಸ್‌ಐಡಿಸಿಯನ್ನು ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸೇರಿದಂತೆ ಎಲ್ಲ ಪ್ರಾಥಮಿಕ ಕೆಲಸಗಳಿಗೆ ನೋಡಲ್ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.


ಚೆರುವಳ್ಳಿ ಎಸ್ಟೇಟ್ ಮಾಲೀಕತ್ವದ ವಿವಾದ
ವಿಮಾನ ನಿಲ್ದಾಣಕ್ಕೆ ಆಯ್ಕೆ ಮಾಡಿರುವ ಚೆರುವಳ್ಳಿ ಎಸ್ಟೇಟ್ ಮೇಲಿನ ಮಾಲೀಕತ್ವವು ಪ್ರಸ್ತುತ ಮಾಲೀಕರು ಮತ್ತು ರಾಜ್ಯ ಸರ್ಕಾರಗಳ ನಡುವೆ ದೀರ್ಘಕಾಲದ ಕಾನೂನು ವಿವಾದಗಳನ್ನು ಎದುರಿಸುತ್ತಿದೆ. ಪ್ರಸ್ತುತ ಚೆರುವಳ್ಳಿ ಎಸ್ಟೇಟ್ ತಿರುವಲ್ಲಾ-ಪ್ರಧಾನ ಕಛೇರಿಯ ಬಿಲೀವರ್ಸ್ ಚರ್ಚ್ ಒಡೆತನದಲ್ಲಿದೆ. ಆದರೆ ಈ ಜಮೀನು ಮೂಲತಃ ಸರ್ಕಾರಕ್ಕೆ ಸೇರಿದ್ದು ಅಂತಾ ತಕರಾರು ನಡೆಯುತ್ತಲೇ ಇದೆ.


ಇದನ್ನೂ ಓದಿ: Crime News: ಪ್ರೀತಿಗೆ ಒಪ್ಪದ ಅಮ್ಮನಿಗೆ ಮುಹೂರ್ತವಿಟ್ಟ ಮಗಳು, ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಂದಳು!


2016 ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶಬರಿಮಲೆ ದೇವಸ್ಥಾನದ ಬಳಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಮುಂದಾದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರಿಂದ ಅನೌಪಚಾರಿಕ ಮಂಜೂರಾತಿ ಪಡೆದರು.


ಶಬರಿಮಲೆ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣಕ್ಕೆ ಬೇಡಿಕೆಯಿದೆ. ಉಮ್ಮನ್ ಚಾಂಡಿ ಸರ್ಕಾರದ ಅವಧಿಯಲ್ಲಿ (2011-16) ಪಟ್ಟಣಂತಿಟ್ಟ ಜಿಲ್ಲೆಯ ಅರನ್ಮುಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಖಾಸಗಿ ಕಂಪನಿಯ ಪ್ರಸ್ತಾವನೆ ಸ್ಥಳೀಯ ಮಟ್ಟದಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಿತ್ತು.


ಇದನ್ನೂ ಓದಿ: Sabarimala Temple: ಶಬರಿಮಲೆ ದೇಗುಲದಲ್ಲಿ ಪಟಾಕಿ ಅವಘಡ, ಯಾತ್ರಾರ್ಥಿಗಳು ಸುರಕ್ಷಿತ


ನಂತರ ಆಡಳಿತಕ್ಕೆ ಬಂದ ವಿಜಯನ್ ಸರ್ಕಾರ 2016 ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಆರನ್ಮುಳ ವಿಮಾನ ನಿಲ್ದಾಣಕ್ಕೆ ಈ ಹಿಂದೆ ನೀಡಿದ್ದ ಮಂಜೂರಾತಿಯನ್ನು ರದ್ದುಗೊಳಿಸಿದರು.  ಅದೇ ಜಿಲ್ಲೆಯಲ್ಲಿ ಮತ್ತೊಂದು ಸೂಕ್ತ ಭೂಮಿಗಾಗಿ ಹುಡುಕಾಟ ನಡೆಸಿದರು. ಅಂತಿಮವಾಗಿ ಚೆರುವಳ್ಳಿ ಎಸ್ಟೇಟ್‌ ಅನ್ನು ಆಯ್ಕೆ ಮಾಡಿಕೊಳ್ಳಲಾಯಿತು.

Published by:ಗುರುಗಣೇಶ ಡಬ್ಗುಳಿ
First published: