ದೇವನಹಳ್ಳಿ : ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡ ಜನವರಿ 11 ರಂದು ಹೊಸ ಇತಿಹಾಸ ಬರೆದಿದ್ದಾರೆ. ಸಂಪೂರ್ಣ ಮಹಿಳಾ ಪೈಲಟ್ ಮತ್ತು ಸಿಬ್ಬಂದಿ ಒಳಗೊಂಡ ತಂಡ ವಿಶ್ವದ ಅತಿ ಉದ್ದದ ವಿಮಾನ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಿದ್ದು, ಅಮೇರಿಕಾ ಸ್ಯಾನ್ ಫ್ರಾನ್ಸಿಸ್ಕೊ ದಿಂದ ಹೊರಡುವ ವಿಮಾನ ಜನವರಿ 11ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಜನವರಿ 11 ರಿಂದ ಅಮೇರಿಕಾದ ಸಿಲಿಕಾನ್ ಸಿಟಿ ಮತ್ತು ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ನಡುವೆ ತಡೆರಹಿತ ವಿಮಾನಯಾನ ಪ್ರಾರಂಭವಾಗಲಿದ್ದು, ಅದರ ಉದ್ಘಾಟನೆಯ ವಿಮಾನವಾಗಿ ಸಂಪೂರ್ಣ ಮಹಿಳಾ ಪೈಲಟ್ ಗಳ ತಂಡ ಒಳಗೊಂಡ ವಿಮಾನ ಸ್ಯಾನ್ ಫ್ರಾನ್ಸಿಸ್ಕೊ ದಿಂದ ಬೆಂಗಳೂರು ತಲುಪಿದೆ. ಉತ್ತರ ಧ್ರುವದಿಂದ ದಕ್ಷಿಣ ಭಾರತಕ್ಕೆ ಸಂಪರ್ಕಿಸುವ ಅತಿ ಉದ್ದದ ವಿಮಾನ ಮಾರ್ಗದಲ್ಲಿ ಏರ್ ಇಂಡಿಯಾ ಮೊಟ್ಟ ಮೊದಲ ಜನವರಿ 11 ರಿಂದ ವಿಮಾನ ಸೇವೆ ಆರಂಭಿಸಿದೆ.
ಕ್ಯಾಪ್ಟನ್ ಜೋಯಾ ಅಗರ್ವಾಲ್ ವಿಮಾನದ ಕಮಾಂಡ್ ಮಾಡಲಿದ್ದಾರೆ ಅವರೊಂದಿಗೆ ಕ್ಯಾಪ್ಟನ್ಗಳಾದ ತನ್ಮೈ ಪಾಪಗರಿ, ಆಕಾಶಾ ಸೋನವಾನೆ ಮತ್ತು ಶಿವಾನಿ ಮನ್ಹಾಸ್ ಅವರ ಅನುಭವಿ ಮಹಿಳಾ ತಂಡ ಇದ್ದು, ಕಾಕ್‌ಪಿಟ್ ಸಿಬ್ಬಂದಿಯಿಂದ ಹಿಡಿದು ಕ್ಯಾಬಿನ್ ಸಿಬ್ಬಂದಿ, ಚೆಕ್-ಇನ್ ಸಿಬ್ಬಂದಿ, ಗ್ರಾಹಕ ಆರೈಕೆ ಸಿಬ್ಬಂದಿ, ವಾಯು ಸಂಚಾರ ನಿಯಂತ್ರಣ ಮತ್ತು ನೆಲದ ನಿರ್ವಹಣೆ ಮುಂತಾದ ಸಂಪೂರ್ಣ ವಿಮಾನ ಕಾರ್ಯಾಚರಣೆಗಳನ್ನು ಮಹಿಳೆಯರೇ ನಿರ್ವಹಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಬೆಂಗಳೂರು ನಡುವೆ ಸುಮಾರು 13,993 ಕಿ.ಮೀಗಳ ಅಂತರವಿದ್ದು, 16 ಗಂಟೆಗಳ ದೀರ್ಘ ಪ್ರಯಾಣವಾಗಿತ್ತು. ಸ್ಯಾನ್ ಫ್ರಾನ್ಸಿಸ್ಕೊ ಹೊರಟ ವಿಮಾನ ತಡೆ ರಹಿತವಾಗಿ ಇದೀಗ ಬೆಂಗಳೂರು ತಲುಪಿದೆ. ಫ್ಲೈಟ್ ಎಐ 176 ಶನಿವಾರ ರಾತ್ರಿ 8.30 ಕ್ಕೆ ಸ್ಯಾನ್ ಫ್ರಾನ್ಸಿಸ್ಕೋದಿಂದ ಹೊರದಿದ್ದು ಜನವರಿ 11 ರ ಸೋಮವಾರ ಬೆಳಗ್ಗೆ 3.45 ಕ್ಕೆ ಬೆಂಗಳೂರಿನಲ್ಲಿ ಇಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ