ವಿಜಯವಾಡ (ಫೆ. 20): ದೋಹಾದಿಂದ 64 ಜನ ಪ್ರಯಾಣಿಕರನ್ನು ಕರೆತಂದ ಏರ್ ಇಂಡಿಯಾ ವಿಮಾನದ ರೆಕ್ಕೆ ಲ್ಯಾಂಡಿಂಗ್ ವೇಳೆ ವಿದ್ಯುತ್ ಕಂಬಕ್ಕೆ ಬಡಿದಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇಂದು ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ವಿಮಾನ ರನ್ವೇ ಅಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ಅನಾಹುತ ಸಂಭವಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಸರ್ವಿಸ್ IX1676 ದೋಹಾ-ವಿಜಯವಾಡ-ತಿರುಚಿನಪಳ್ಳಿಯ ವಿಮಾನ ಈ ಅನಾಹುತಕ್ಕೆ ಒಳಗಾಗಿದ್ದು ಎಂದು ತಿಳಿದುಬಂದಿದೆ.
ವಿಮಾನದಲ್ಲಿ ಒಟ್ಟು 64 ಪ್ರಯಾಣಿಕರಿದ್ದು, 19 ಪ್ರಯಾಣಿಕರು ವಿಜಯವಾಡದಲ್ಲಿ ಇಳಿಯಬೇಕಿತ್ತು. ಅಪಘಾತದಲ್ಲಿ ವಿಮಾನದ ರೆಕ್ಕೆಗೆ ಕೊಂಚ ಹಾನಿಯಾಗಿದೆ. ತಕ್ಷಣಕ್ಕೆ ಎಮೆರ್ಜೆನ್ಸಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪ್ರಯಾಣಿಕರ ರಕ್ಷಣೆ ಮಾಡಿದ್ದಾರೆ. ತಾಂತ್ರಿಕ ತಂಡ ತಕ್ಷಣಕ್ಕೆ ದೋಷ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಣ್ಣ ವೈಬ್ರೆಷನ್ ಆಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಪೈಲಟ್ ನಾವು ವಿಜಯವಾಡದಲ್ಲಿ ಇಳಿಯಬೇಕುತ್ತು. ತಕ್ಷಣಕ್ಕೆ ಈ ಅನಾಹಿತ ನಡೆದಿದೆ, ಸಣ್ಣದಾಗಿ ಸದ್ದು ಕೇಳಿಸಿತು. ಪೈಲಟ್ ಗಾಬರಿಗೆ ಒಳಗಾಗದಂತೆ ಮನವಿ ಮಾಡಿದರು. ತಕ್ಷಣಕ್ಕೆ ಅಧಿಕಾರಿಗಳು ಬಂದು ನಮ್ಮ ರಕ್ಷಣೆ ನಡೆಸಿದರು ಎಂದು ರಾಮ ರೆಡ್ಡಿ ಎನ್ನುವ ಪ್ರಯಾಣಿಕರು ತಿಳಿಸಿದ್ದಾರೆ.
ಮೋಡ ಕವಿದ ವಾತಾವರಣ, ಅಸ್ಪಷ್ಟ ಗೋಚರತೆಯಿಂದಾಗಿ ಈ ಅನಾಹುತ ನಡೆದಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ