ಕೋಯಿಕ್ಕೋಡ್ (ಆ.10): ಕೇರಳದ ಕೋಯಿಕ್ಕೋಡ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗಾಗಲೇ 19ಕ್ಕೆ ಏರಿಕೆ ಆಗಿದೆ. ಈ ಮಧ್ಯೆ 14 ಜನರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಏರ್ ಇಂಡಿಯಾಗೆ ಸೇರಿದ X1344 ಬೋಯಿಂಗ್ 737 ವಿಮಾನ ದುಬೈನಿಂದ ಕೋಯಿಕ್ಕೋಡ್ಗೆ ಹೊರಟಿತ್ತು. ಸಂಜೆ 7:41ಕ್ಕೆ ವಿಮಾನ ಲ್ಯಾಂಡ್ ಆಗಿದ್ದು, ರನ್ವೇನಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಇಬ್ಬರು ಪೈಲಟ್ ಸೇರಿ 18 ಜನರು ಮೃತಪಟ್ಟಿದ್ದರು. ಅಪಘಾತದ ವೇಳೆ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಸಿಲುಕಿದ್ದ ಸಾಕಷ್ಟು ಜನರಿಗೆ ಗಂಭೀರ ಗಾಯಗಳಾಗಿದ್ದವು. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆ ವೈದ್ಯರು, ಈಗಾಗಲೇ 49 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಗಾಯಗೊಂಡ 14 ಜನರ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ ಎಂದಿದ್ದಾರೆ.
ಮೃತ ಕುಟುಂಬದವರ ಶವವನ್ನು ಈಗಾಗಲೇ ಸಂಬಂಧ ಪಟ್ಟ ಕುಟುಂಬಗಳಿಗೆ ನೀಡಲಾಗಿದೆ. ವಿಮಾನ ಪೈಲಟ್ಗಳ ಮೃತದೇಹ ಕೂಡ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಮುಂದುವರಿದ ತನಿಖೆ
ವಿಮಾನ ಇಳಿಯುವಾಗ ಭಾರಿ ಪ್ರಮಾಣದಲ್ಲಿ ಮಳೆ ಆಗುತ್ತಿತ್ತು. ಇದರಿಂದ ವಿಮಾನ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಅಸಲಿ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ, ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ ಆಗಿದೆ. ಈ ಬ್ಲ್ಯಾಕ್ ಬಾಕ್ಸ್ನಲ್ಲಿ ದುರಂತದ ಹಿಂದಿನ ನಿಜವಾದ ರಹಸ್ಯ ಇದೆ ಎನ್ನಲಾಗುತ್ತಿದೆ. ಹೀಗಾಗಿ, ಈ ಬಗ್ಗೆ ತನಿಖೆ ಮುಂದುವರಿದಿದೆ.
ಏನಿದು ಬ್ಲ್ಯಾಕ್ ಬಾಕ್ಸ್?
ಪ್ರತಿ ವಿಮಾನದಲ್ಲೂ ಬ್ಲ್ಯಾಕ್ ಬಾಕ್ಸ್ ಇರುತ್ತದೆ. ಈ ಬ್ಲ್ಯಾಕ್ ಬಾಕ್ಸ್ನಲ್ಲಿ ವಿಮಾನದ ವೇಗ, ವಿಮಾನದ ಸ್ಥಿತಿ-ಗತಿ, ಪೈಲಟ್ಗಳ ಸಂಭಾಷಣೆ ಕೂಡ ಇರಲಿದೆ. ಹೀಗಾಗಿ, ಏರ್ ಇಂಡಿಯಾ ವಿಮಾನ ದುರಂತಕ್ಕೆ ಒಳಗಾಗುವುದಕ್ಕೂ ಮೊದಲು ಏನಾಗಿತ್ತು ಎನ್ನುವುದು ಈ ಬ್ಲ್ಯಾಕ್ ಬಾಕ್ಸ್ನಲ್ಲಿ ರೆಕಾರ್ಡ್ ಆಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ