ನ್ಯೂಯಾರ್ಕ್: ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ (New York-Delhi flight) ಮಹಿಳಾ ಪ್ರಯಾಣಿಕರೊಬ್ಬರ (Women Passenger) ಮೇಲೆ ಮೂತ್ರ ವಿಸರ್ಜನೆ (Urinating) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾ (Air India) ತನ್ನ ಪೈಲಟ್ (Pilot) ಮತ್ತು ನಾಲ್ವರು ಕ್ಯಾಬಿನ್ ಸಿಬ್ಬಂದಿಯನ್ನು ಶನಿವಾರ ಅಮಾನತುಗೊಳಿಸಿದೆ (Derostered) ಮತ್ತು ಈ ಘಟನೆಗೆ ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ (CEO Campbell Wilson) ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಏರ್ ಇಂಡಿಯಾ ವಿಮಾನದಲ್ಲಿ ವಿಕೃತಿ ಮೆರೆದ ವ್ಯಕ್ತಿಯಿಂದ, ಇತರ ಸಹ ಪ್ರಯಾಣಿಕರು ಅನುಭವಿಸಿದ ತೊಂದರೆ ಬಗ್ಗೆ ಕ್ಷಮೆ ಇರಲಿ. ಈ ಸನ್ನಿವೇಶವನ್ನು ಸರಿಯಾಗಿ ನಿಭಾಯಿಸಬಹುದಿತ್ತು. ಆದರೆ ಸಾಧ್ಯವಾಗಲಿಲ್ಲ. ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಅಥವಾ ವಿಮಾನ ಲ್ಯಾಂಡ್ ಆದ ಬಳಿಕ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಆದರೆ ಈಗ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
2022ರ ನವೆಂಬರ್ 26 ರಂದು ನ್ಯೂಯಾರ್ಕ್ ಮತ್ತು ದೆಹಲಿ ನಡುವೆ AI-102 ವಿಮಾನದಲ್ಲಿ ನಡೆದ ಘಟನೆಯ ವೇಳೆ ವಿಮಾನದಲ್ಲಿದ್ದ ನಾಲ್ವರು ಕ್ಯಾಬಿನ್ ಸಿಬ್ಬಂದಿ ಮತ್ತು ಒಬ್ಬ ಪೈಲಟ್ಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಮತ್ತು ಬಾಕಿ ಉಳಿದಿರುವವರನ್ನು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟವರು ರಾಜಿ ಸಂಧಾನಕ್ಕೆ ಬಂದರೂ ಸಹ ಅಶಿಸ್ತಿನ ವರ್ತನೆಯ ಎಲ್ಲಾ ಘಟನೆಗಳ ಬಗ್ಗೆ ವರದಿ ಮಾಡಲು ಸಿಬ್ಬಂದಿಗೆ ತಿಳಿಸಲಾಗಿದೆ. ವಿಮಾನದಲ್ಲಿ ಆಲ್ಕೋಹಾಲ್ ಸೇವೆ, ಘಟನೆ ನಿರ್ವಹಣೆ, ವಿಮಾನದಲ್ಲಿ ದೂರು ನೋಂದಣಿ ಮತ್ತು ದೂರುಗಳ ನಿರ್ವಹಣೆ, ಇತರ ಸಿಬ್ಬಂದಿ ಮತ್ತು ಇತರ ಅಂಶಗಳಿಂದ ಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸಲು ಆಂತರಿಕ ತನಿಖೆಗಳು ನಡೆಯುತ್ತಿವೆ. ವಿಮಾನಯಾನ ಸಂಸ್ಥೆಯು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನ AI-102 ತೆರಳುತ್ತಿತ್ತು. ಈ ವೇಳೆ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಇದರಿಂದ ಮಹಿಳೆಯ ಶೂ, ಬಟ್ಟೆ, ಬ್ಯಾಗ್ ಎಲ್ಲವೂ ಒದ್ದೆಯಾಗಿತ್ತು. ಅಲ್ಲದೇ ಬ್ಯಾಗ್ನಲ್ಲಿ ಅಮೆರಿಕನ್ ಕರೆನ್ಸಿ, ಪಾಸ್ಪೋರ್ಟ್ ಸೇರಿ ಮುಖ್ಯವಾದ ದಾಖಲೆಗಳಿದ್ದವು. ಏರ್ ಹೋಸ್ಟೆಸ್ ಕೂಡಾ ಇದನ್ನು ಮುಟ್ಟಲು ಮುಂದೆ ಬರಲಿಲ್ಲ.
ಬಳಿಕ ಮಹಿಳೆಯನ್ನು ಬಾತ್ ರೂಂಗೆ ಕರೆದುಕೊಂಡು ಹೋಗಿ ಬೇರೆ ಬಟ್ಟೆ ನೀಡಿದರು. ಮಹಿಳೆ ತನಗೆ ಬೇರೆ ಸೀಟು ನೀಡುವಂತೆ ಕೇಳಿಕೊಂಡರು. ಆದರೆ ವಿಮಾನದಲ್ಲಿ ಎಲ್ಲಾ ಸೀಟ್ಗಳು ಭರ್ತಿಯಾಗಿದ್ದ ಹಿನ್ನೆಲೆ ಕೊನೆಗೆ ಸಿಬ್ಬಂದಿ ಏರ್ ಹೋಸ್ಟೆಸ್ ಪ್ರಯಾಣ ಮಾಡುವ ಸೀಟ್ ನೀಡಿ ದೆಹಲಿ ಕರೆದುಕೊಂಡು ಬಂದಿದ್ದರು.
ಮಹಿಳೆ ಕ್ಷಮೆಯಾಚಿಸಿದ್ದ ಆರೋಪಿ ಶಂಕರ್ ಮಿಶ್ರಾ
ಈ ಎಲ್ಲಾ ಘಟನೆ ನಂತರ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾ ತನ್ನ ತಪ್ಪಿಗೆ ಮಹಿಳೆ ಬಳಿ ಕ್ಷಮೆಯಾಚಿಸಿದ್ದನು. ಈ ವಿಚಾರ ತನ್ನ ಪತ್ನಿ ಮತ್ತು ಮಕ್ಕಳಿಗೆ ತಿಳಿದರೆ ಅವರ ಮನಸ್ಸಿಗೆ ಘಾಸಿಯಾಗುತ್ತದೆ. ಹೀಗಾಗಿ ಯಾರಿಗೂ ಹೇಳಬೇಡಿ ಎಂದು ಬೇಡಿಕೊಂಡಿದ್ದನು. ಹೀಗಿದ್ದರೂ ಮಹಿಳೆ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಈ ಬಗ್ಗೆ ಏರ್ ಇಂಡಿಯಾ ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜೊತೆಗೆ ಮಹಿಳೆಯೊಂದಿಗೆ ಏರ್ ಇಂಡಿಯಾ ಸಿಬ್ಬಂದಿ ನಡೆದುಕೊಂಡ ರೀತಿಯಿಂದ ಮನನೊಂದು ಮಹಿಳೆ ಈ ಬಗ್ಗೆ ಟಾಟಾ ಸನ್ಸ್ ಗ್ರೂಪ್ನ ಮುಖ್ಯಸ್ಥರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದರು.
ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಪಟಿಯಾಲ ಹೌಸ್ ಕೋರ್ಟ್
ಬಳಿಕ ಆರೋಪಿ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದ. ಎಸ್ಕೇಪ್ ಆಗಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿ ಆರೋಪಿ ಪತ್ತೆಗಾಗಿ ಕಾರ್ಯಚರಣೆಯಲ್ಲಿನಡೆಸಿದ್ದರು. ಕೊನೆಗೆ ಬೆಂಗಳೂರಿನ ಸಂಜಯ್ ನಗರ ಗೆಸ್ಟ್ ಹೌಸ್ನಲ್ಲಿ ಆರೋಪಿ ಶಂಕರ್ ಮಿಶ್ರಾ ಅನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿ ಶಂಕರ್ ಮಿಶ್ರಾ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ