ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) (AIMIM) ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ಸಂಬಂಧಿಯೊಬ್ಬರು ಸೋಮವಾರ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿ ಹೈದರಾಬಾದ್‌ನಲ್ಲಿ (Hyderabad) ಖ್ಯಾತ ವೈದ್ಯರಾಗಿದ್ದು, ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಗುರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಮೂಳೆ ಶಸ್ತ್ರಚಿಕಿತ್ಸಕರಾಗಿ ಖ್ಯಾತರಾಗಿದ್ದ ಡಾ. ಮಜರುದ್ದೀನ್ ಅಲಿ ಖಾನ್ ಅವರು ತಮ್ಮ ನಿವಾಸದಲ್ಲೇ ಈ ಕೃತ್ಯ ಎಸಗಿದ್ದು, 60 ವರ್ಷದ ಡಾ. ಮಜರುದ್ದೀನ್ ಅಲಿ ಖಾನ್ ಅವರು ತಮ್ಮ ಬಂಜಾರಾ ಹಿಲ್ಸ್ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಗುಂಡು ಹಾರಿಸಿಕೊಂಡಿದ್ದ ಅವರನ್ನು ಕೂಡಲೇ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಸೀನಿಯರ್ ಕಿರುಕುಳಕ್ಕೆ ಬೇಸತ್ತು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ!
ಪೊಲೀಸರಿಂದ ತನಿಖೆ
ಡಾ. ಮಜರುದ್ದೀನ್ ಅಲಿ ಖಾನ್ ಅವರು ಒವೈಸಿ ಆಸ್ಪತ್ರೆಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೌಟುಂಬಿಕ ಕಲಹದ ಕಾರಣಕ್ಕೆ ಡಾ. ಅಲಿ ಖಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಖಚಿತ ಕಾರಣ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ಸದ್ಯ ಡಾ. ಮಜರುದ್ದೀನ್ ಅಲಿ ಖಾನ್ ಅವರ ಮೃತದೇಹವನ್ನು ಉಸ್ಮಾನ್ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ.
ಕೌಟುಂಬಿಕ ಕಲಹದಿಂದ ಬೇಸತ್ತು ಕೃತ್ಯ!
ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎರಡನೇ ಮಗಳ ಮಾವನಾಗಿರುವ ಡಾ. ಮಜರುದ್ದೀನ್ ಅಲಿ ಖಾನ್, ಪರವಾನಗಿ ಹೊಂದಿದ್ದ ಬಂದೂಕು ಹೊಂದಿದ್ದರು. ಆದರೆ ತಾವು ಆತ್ಮಹತ್ಯೆಗೆ ಬಳಸಿಕೊಂಡಿರುವ ಗನ್ ಲೈಸೆನ್ಸ್ ಹೊಂದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿವಾದ ಮತ್ತು ಕೌಟುಂಬಿಕ ಕಲಹದಿಂದ ಡಾ. ಅಲಿ ಖಾನ್ ಅವರು ಸಾಕಷ್ಟು ನೊಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಫೋನ್ ಮಾಡಿದರೂ ಸ್ಪಂದಿಸದ ಅಲಿ ಖಾನ್!
ಇನ್ನು ಡಾ. ಮಜರುದ್ದೀನ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಕರೆತರುವ ನಾಲ್ಕು ಗಂಟೆಗಳ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ತಮ್ಮ ಮನೆಯಲ್ಲಿ ಒಬ್ಬರೇ ಇದ್ದುದ್ದರಿಂದ ಫೋನ್ ಮಾಡಿದರೂ ಕರೆಗೆ ಸ್ಪಂದಿಸದೇ ಇದ್ದಾಗ ಕೆಲವು ಸಂಬಂಧಿಕರು ಅವರನ್ನು ನೋಡಲು ತೆರಳಿದ್ದರು. ಆಗ ಖಾನ್ ಅವರ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸಂಬಂಧಿಕರು ಹೇಳಿದ್ದಾರೆ.
ಡಾ. ಮಜರುದ್ದೀನ್ ಅಲಿ ಖಾನ್ ಅವರು ಓವೈಸಿ ಆಸ್ಪತ್ರೆಯ ಪ್ರಾರಂಭದಿಂದಲೂ ಅದರೊಂದಿಗೆ ಸಂಬಂಧ ಹೊಂದಿದ್ದರು. ಅವರ ಮಗ ಡಾ. ಅಬಿದ್ ಅಲಿ ಖಾನ್ 2020ರಲ್ಲಿ ಸಂಸದ ಅಸಾದುದ್ದೀನ್ ಓವೈಸಿಯ ಎರಡನೇ ಮಗಳನ್ನು ವಿವಾಹವಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ